ಬುಧವಾರ, ಆಗಸ್ಟ್ 17, 2022
29 °C
ಸರ್ಕಾರವೇ ಹೊಣೆ

ಮಹಾಲಿಂಗಪುರ ದೌರ್ಜನ್ಯ ಪ್ರಕರಣ: ಶಾಸಕ ಸಿದ್ದು ಸವದಿ ಬಂಧನಕ್ಕೆ ಡಿಕೆಶಿ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಮಹಿಳಾ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯದ ಹೊಣೆಯನ್ನು ರಾಜ್ಯ ಸರ್ಕಾರ ಹೊರಬೇಕು. ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿದ್ದು ಸವದಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಒತ್ತಾಯಿಸಿದರು.

ಮುಧೋಳ ತಾಲ್ಲೂಕಿನ ಮಹಾಲಿಂಗಪುರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ರಾಷ್ಟ್ರದಲ್ಲಿಯೇ  ಇದು ಅಪಮಾನಕಾರಿ ಘಟನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದಿರುವ ಈ ಹೀನ ಕೃತ್ಯ ಖಂಡನೀಯ. ದೌರ್ಜನ್ಯಕ್ಕೀಡಾದ ಮಹಿಳಾ ಸದಸ್ಯೆಗೆ ಗರ್ಭಪಾತ ಆಗಿರುವುದು ಒಂದು ಮಗುವನ್ನು ಕೊಲೆ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ನಡೆದ ಇಷ್ಟು ದಿನ ಕಳೆದರೂ ಇಲ್ಲಿಯವರೆಗೂ ಮುಖ್ಯಮಂತ್ರಿ ಸಂಬಂಧಿಸಿದ ಶಾಸಕರನ್ನು ಬಂಧಿಸುವ ಕೆಲಸ ಮಾಡಿಸಿಲ್ಲ. ಅವರ ಮೇಲೆ ಸರಿಯಾದ ಪ್ರಕರಣ ದಾಖಲು ಮಾಡಿಲ್ಲ. ಇದು ಸರ್ಕಾರ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ದ್ಯೋತಕ ಎಂದರು.

ಇಡೀ ರಾಷ್ಟ್ರದಲ್ಲಿ ಜನರು ತಲೆತಗ್ಗಿಸುವ ಕೆಲಸ ನಡೆದಿದೆ. ಬಲವಂತವಾಗಿ ಮಹಿಳೆಯರ ಮತದಾನದ ಹಕ್ಕು ಕಿತ್ತುಕೊಂಡ ಕ್ರಮವನ್ನು ಸಮಾಜ, ಎಲ್ಲ ಸಂಘ ಸಂಸ್ಥೆಗಳು, ಮಹಿಳಾ ವರ್ಗ ಖಂಡಿಸಬೇಕು. ಇದರ ವಿರುದ್ಧ ವಿಧಾನಸಭೆ ಅಧಿವೇಶನದ ವೇಳೆ ಹೋರಾಟ ಕೈಗೊಳ್ಳಲಿದ್ದೇವೆ ಎಂದರು.

ಬೆದರಿಕೆ ಹೇಳಿಕೆ ಬದಲು: ಆರೋಪ
ಪುರಸಭೆ ಚುನಾವಣೆ ವೇಳೆ ದೌರ್ಜನ್ಯಕ್ಕೀಡಾದ ಸದಸ್ಯೆಯರ ಪತಿಯಂದಿರು ಗುತ್ತಿಗೆದಾರರು ಇದ್ದಾರೆ. ಅವರು ಮಾಡಿರುವ ಕಾಮಗಾರಿಯ ಬಿಲ್ ಕೊಡುವುದಿಲ್ಲ ಎಂದು ಬೆದರಿಸಿ ಹೇಳಿಕೆ ಬದಲಿಸುವಂತೆ, ಇಂತಹದ್ದೇ ಹೇಳಿಕೆ ನೀಡುವಂತೆ ಒತ್ತರ ಹೇರಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗಂಭೀರ ಆರೋಪ ಮಾಡಿದರು.

ಆ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಅವರು. ಪಾಪ ಅವರು ಹೆದರಿಕೊಂಡು ನಮ್ಮ ಬಳಿ ಇರುವ ವಿಚಾರ ಹೇಳಿದ್ದಾರೆ. ಅದನ್ನೆಲ್ಲಾ ಇಲ್ಲಿ ಹೇಳಲು ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಘಟನೆ ನಡೆದಿದ್ದು ನಿಜ ತಾನೇ ಹೆಣ್ಣು ಮಕ್ಕಳನ್ನು ಎಳೆದಿದ್ದು, ತುಳಿದಿದ್ದು ನಿಜ ತಾನೇ ಎಂದು ಮಾಧ್ಯಮದವರನ್ನು ಮರುಪ್ರಶ್ನಿಸಿದರು. ಘಟನೆಯ ನಂತರ ಗರ್ಭಪಾತಕ್ಕೀಡಾದ ಸದಸ್ಯೆ ಚಾಂದನಿ ಅವರ ಪತಿ ನಾಗೇಶ ನಾಯಕ ಹೇಳಿಕೆ ಬದಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು