ಮಂಗಳವಾರ, ಜನವರಿ 31, 2023
27 °C
ಶ್ರದ್ಧಾಂಜಲಿ ಸಭೆಯಲ್ಲಿ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಅಚ್ಚರಿ

ಆರ್‌ಎಸ್‌ಎಸ್‌ ಕಾರ್ಯಾಗಾರಕ್ಕೆ ಪ್ರಣಬ್ ಹೋಗಿದ್ದೇಕೆನ್ನುವುದು ಇನ್ನೂ ನಿಗೂಢ:ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪಕ್ಷದಲ್ಲಿ ಹಲವು ಹುದ್ದೆಗಳೂ ಸೇರಿ, ರಾಷ್ಟ್ರಪತಿಯಂಥ ಅತ್ಯುನ್ನತ ಹುದ್ದೆಗೇರಿ ಎಲ್ಲವನ್ನೂ ನಿಭಾಯಿಸಿದ್ದ ಮೇಧಾವಿ, ಪ್ರಣಬ್ ಮುಖರ್ಜಿ ಕೊನೆಗೆ ಆರ್‌ಎಸ್‌ಎಸ್‌ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಹೋಗಿದ್ದು ಯಾಕೆ ಎನ್ನುವುದು ಇನ್ನೂ ನಿಗೂಢ’ ಎಂದು ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಣಬ್‌ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ‘ಪ್ರಣಬ್‌ ಮುಖರ್ಜಿ ಇಂದಿರಾ ಗಾಂಧಿಯವರ ತತ್ವದ ಮೇಲೆ ನಂಬಿಕೆ ಇಟ್ಟವರು. ಅಂಥವರು ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಹೋಗಿದ್ದು ಕುತೂಹಲ ಮೂಡಿಸಿತ್ತು. ಅದರ ಬಗ್ಗೆ ಅವರ ಜೊತೆ ನಾನು ಮಾತನಾಡಬೇಕಿತ್ತು. ಆದರೆ, ಮುಖಾಮುಖಿ ಮಾತನಾಡಲು ಕೊನೆಗೂ ಅವಕಾಶ ಸಿಗಲಿಲ್ಲ’ ಎಂದರು.

‘ಮುಖರ್ಜಿ ಅವರು ಮಾತನಾಡುವಾಗ ಸಿದ್ಧತೆ ಮಾಡಿಕೊಂಡೇ ಬರುತ್ತಿದ್ದರು. ಅವರ ಮಗ ಅಭಿಜಿತ್ ಮುಖರ್ಜಿ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಮಗನನ್ನು ಬೆಂಬಲಿಸುವಂತೆ ಪದೇ ಪದೇ ಪ್ರಣಬ್ ಹೇಳುತ್ತಿದ್ದರು. ಅಬಿಜಿತ್ ಒಬ್ಬ ಸಂಭಾವಿತ ವ್ಯಕ್ತಿ’ ಎಂದರು.

‘ಕಾಂಗ್ರೆಸ್ ಪಕ್ಷವನ್ನು ಪ್ರಣಬ್ ಎತ್ತರಕ್ಕೇರಿಸಿದವರು. ಅವರ ನಿಧನ ತುಂಬಲಾರದ ನಷ್ಟ. ನನಗೂ ಅವರ ನಿಧನ ಸಾಕಷ್ಟು ನೋವು ತಂದಿದೆ’ ಎಂದರು.

‘ಪ್ರಣಬ್ ಮುಖರ್ಜಿ ದೊಡ್ಡ ವಿಚಾರವಾದಿ. 1977ರಲ್ಲಿಯೇ ನನಗೆ ಅವರ ಪರಿಚಯವಾಗಿತ್ತು. 78ರಲ್ಲಿ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದರು. ಆಗ ಪ್ರಣಬ್ ಜೊತೆ ನಾವೂ ಕೆಲಸ ಮಾಡಿದ್ದೆವು. ಬೆಳ್ತಂಗಡಿಯ ಅತಿಥಿಗೃಹದಲ್ಲಿ ತಂಗಿದ್ದೆವು. ಅಲ್ಲಿ ಎರಡು ಕೊಠಡಿಗಳಲ್ಲಿ‌ ನಾವು, ಪ್ರಣಬ್ ಇದ್ದೆವು. ಎಲ್ಲ ಹಳ್ಳಿಗಳಿಗೆ ನಾವು ಭೇಟಿ ನೀಡಿದ್ದೆವು. ಆಗ ಪ್ರಣಬ್ ಅವರಿಗೆ ಓದುವ ಚಟ ಹೆಚ್ಚಿತ್ತು. ಅಂದಿನಿಂದ ಅವರ ಜೊತೆ ಹತ್ತಿರದ ಸಂಬಂಧವಿತ್ತು. ಕಲಬುರ್ಗಿಗೂ ಎರಡು ಭಾರಿ ಅವರನ್ನು ಕರೆಸಿದ್ದೆ’ ಎಂದೂ ಖರ್ಗೆ ನೆನಪಿಸಿಕೊಂಡರು.

‘ಕಲಬುರ್ಗಿಯಲ್ಲಿ ಬೌದ್ಧವಿಹಾರ ಕಟ್ಟಿದ್ದೆವು. ಆಗ ಪಾಲಿ ಇನ್ಸಿಟಿಟ್ಯೂಟ್ ಮಾಡುವಂತೆ ಪ್ರಣಬ್ ಮುಖರ್ಜಿಯವರೇ ಸಲಹೆ ನೀಡಿದ್ದರು. ಆದರೆ, ಪಾಲಿ ಭಾಷೆ ವಿದ್ಯಾರ್ಥಿಗಳು ಬರುವುದಿಲ್ಲ. ಆ ಭಾಷೆಯ ಶಿಕ್ಷಕರೂ ಸಿಗುವುದಿಲ್ಲ ಎಂದಿದ್ದೆ. ಆಗ ನಾನೇ ಪಶ್ಚಿಮ ಬಂಗಾಳದಿಂದ ಕಳುಹಿಸಿಕೊಡುತ್ತೇನೆ ಎಂದಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಅದಕ್ಕೆ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಅದನ್ನು ಜಾರಿಗೆ ತರಲು ಸಾಧ್ಯವಾಗಲೇ ಇಲ್ಲ’ ಎಂದರು.

ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಹೋಗುವ ಮೊದಲು ಅವರನ್ನು ಭೇಟಿ ಮಾಡಿದ್ದೆ. ಇಲ್ಲಿಯವರೆಗೆ ನೀವು ಪಕ್ಷವನ್ನು ಕಟ್ಟಿದ್ದೀರಾ. ಈಗ ಕೋಮುವಾದಿ ಪಕ್ಷದ ಕಡೆಗೆ ಹೋಗುತ್ತಿದ್ದೀರಾ. ನಿಮ್ಮ‌ ಹೆಸರಿಗೆ ಕಳಂಕ ಬರುವುದಿಲ್ಲವೇ ಎಂದಿದ್ದೆ. ಅವರ ಜೊತೆ ಅರ್ಧ ತಾಸು ಮಾತುಕತೆ ನಡೆಸಿದ್ದೆ. ಸಂದರ್ಭ ಬಂದಾಗ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದರು. ಇವತ್ತು ಅವರು ಅಗಲಿದ್ದಾರೆ. ಇಡೀ ದೇಶ ಅವರ ನಿಧನ ನೋವಿನಲ್ಲಿದೆ’ ಎಂದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಪ್ರಣಬ್ ಸುದೀರ್ಘ ರಾಜಕೀಯ ಜೀವನ ನಡೆಸಿದವರು. ದೇಶ ಕಂಡ ಕೆಲವೇ ಬುದ್ದಿಜೀವಿಗಳಲ್ಲಿ ಒಬ್ಬರು. ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಆಗಿದ್ದವರು. ಸಮಸ್ಯೆ ಎದುರಾದಾಗ ಅವರು ಜವಾಬ್ದಾರಿ ಹೊರುತ್ತಿದ್ದರು. ತಮ್ಮ ಬುದ್ಧಿವಂತಿಕೆಯಿಂದ ಸಮಸ್ಯೆ ನಿವಾರಿಸುತ್ತಿದ್ದರು’ ಎಂದರು.

‘ನಾನು ಕಾಂಗ್ರೆಸ್ ಸೇರಿದ ಮೇಲೆ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಕೆಲವು ಸಲಹೆ, ಸೂಚನೆಗಳನ್ನು ಕೊಟ್ಟಿದ್ದರು. ಮುಖ್ಯಮಂತ್ರಿ ಆದ ನಂತರವೂ ಅವರನ್ನು ಭೇಟಿ ಮಾಡುತ್ತಿದ್ದೆ. ಇದೇ ಕೆಪಿಸಿಸಿ ಕಚೇರಿಗೆ ಬಂದು ಶಾಸಕರ ಮತ ಕೇಳಿದ್ದರು. ನಮ್ಮ ಶಕ್ತಿಗಿಂತ ಹೆಚ್ಚಿನ ಮತಗಳು ರಾಜ್ಯದಿಂದ ಅವರಿಗೆ ಸಿಕ್ಕಿದ್ದವು’ ಎಂದು ನೆನಪಿಸಿಕೊಂಡರು.

‘ಅವರು ಆರ್‌ಎಸ್‌ಎಸ್‌ಗೆ ಹೋಗಿದ್ದೇ ಯಕ್ಷಪ್ರಶ್ನೆ. ಆರ್‌ಎಸ್‌ಎಸ್‌ ಕೋಮುವಾದಿ ಸಂಘಟನ. 50 ವರ್ಷ ರಾಜಕಾರಣ ಮಾಡಿದವರು. ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾರೆ ಎಂದರೆ ಹೇಗೆ’ ಎಂದು ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದರು.

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ,  ‘ಅವರೊಬ್ಬ ನಿರ್ವಿವಾದ ವ್ಯಕ್ತಿ. ಮಾಸ್ ಲೀಡರ್ ಆಗಿರಲಿಲ್ಲ. ಅವರು ನೇರ ಚುನಾವಣೆಗೆ ನಿಂತಿದ್ದೇ ಕಡಿಮೆ. ಚಿಕ್ಕ ವಯಸ್ಸಿನಲ್ಲೇ ರಾಜ್ಯಸಭೆಗೆ ಹೋಗಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಹಣಕಾಸು ಖಾತೆ ಕೊಟ್ಟಿದ್ದರು. ನಮ್ಮ‌ ತಂದೆಯವರಿಗೆ ಅವರು ಹತ್ತಿರದಲ್ಲಿದ್ದವರು. ನಮ್ಮ ತಂದೆಯವರಿಗೆ ಹೆಚ್ಚಿನ ಗೌರವ ಕೊಡುತ್ತಿದ್ದರು. ತಂದೆಯ ಅಂತ್ಯಕ್ರಿಯೆಗೆ ಬೆಂಗಳೂರಿಗೆ ಬಂದಿದ್ದರು, ನನಗೂ ಅವರು ಮಾರ್ಗದರ್ಶಕರಾಗಿದ್ದರು. ನಮ್ಮ ಕುಟುಂಬದ ಜೊತೆ ನಿಕಟ ಸಂಬಂಧವಿತ್ತು’ ಎಂದು ನೆನಪಿಸಿಕೊಂಡರು.

‘13 ಪ್ರಣಬ್ ಅವರಿಗೆ ಅದೃಷ್ಟದ ಸಂಖ್ಯೆ. ಅನಿರೀಕ್ಷಿತವೆಂಬಂತೆ 13ನೇ ರಾಷ್ಟ್ರಪತಿಯಾಗಿದ್ದರು. ಹಲವು ಕ್ಷೇತ್ರಗಳಲ್ಲಿ ನೈಪುಣ್ಯತೆ ಪಡೆದುಕೊಂಡಿದ್ದರು. ಅವರಿಗೆ ಪ್ರಧಾನಿಯಾಗುವ ಆಸೆಯಿತ್ತು. ಎಲ್ಲ ಪಕ್ಷದವರು ಅವರಿಗೆ ಗೌರವ ಕೊಡುತ್ತಿದ್ದರು. ಎಲ್ಲರ ಪ್ರೀತಿಗೆ ಅವರು ಪಾತ್ರರಾಗಿದ್ದರು’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಮುಖಂಡರಾದ ಬಿ.ಎಲ್. ಶಂಕರ್, ವಿ.ಆರ್. ಸುದರ್ಶನ್, ಬಿ.ಎನ್‌. ಚಂದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು