ಮಂಗಳವಾರ, ಜೂನ್ 28, 2022
25 °C
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ

ತೈಲ ಸುಂಕ ಹೆಚ್ಚಳ ರಾಜ್ಯಗಳಿಗೆ ಮಾಡಿದ ಅನ್ಯಾಯ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಪೆಟ್ರೋಲ್, ಡೀಸೆಲ್‌ ಸೇರಿದಂತೆ ತೈಲಗಳ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಬೇಕಾಬಿಟ್ಟಿಯಾಗಿ ಹೆಚ್ಚಳ ಮಾಡಿದೆ. ಇದೇ ಕಾರಣಕ್ಕೆ ಇಂಧನ ದರ ವಿಪರೀತ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರಗಳಿಗೆ ಮಾಡಿದ ದ್ರೋಹವಿದು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದರು.

‘ತೈಲ ದರ ಇಳಿಸುವ ಆಗ್ರಹ ಕೇಳಿಬಂದರೆ ಕೇಂದ್ರ ಸರ್ಕಾರ ರಾಜ್ಯಗಳತ್ತ ಬೊಟ್ಟು ಮಾಡುತ್ತಿದೆ. ಆದರೆ, ಸುಂಕ ಏರಿಸಿದ್ದು ರಾಜ್ಯ ಸರ್ಕಾರಗಳೋ ಕೇಂದ್ರ ಸರ್ಕಾರವೋ’ ಎಂದು ಅವರು ನಗರದಲ್ಲಿ ಶುಕ್ರವಾರ ಮಾಧ್ಯಮದವರ ಮುಂದೆ ಪ್ರಶ್ನೆ ಮಾಡಿದರು.

‘ಒಂದೆಡೆ ಸೆಸ್‌ ಹೆಚ್ಚಳ ಮಾಡಿ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನೊಂದೆಡೆ ’ಜಿಎಸ್‌ಟಿ‘ ಸಂಗ್ರಹದಲ್ಲಿ ರಾಜ್ಯಗಳ ಪಾಲು ನೀಡುತ್ತಿಲ್ಲ. ಈ ಎರಡೂ ದಾರಿಗಳಲ್ಲಿ ರಾಜ್ಯ ಸರ್ಕಾರಗಳನ್ನು ಅಸಹಾಯಕ ಸ್ಥಿತಿಗೆ ತಂದುನಿಲ್ಲಿಸಿದ ಕೀರ್ತಿ ಪ್ರಧಾನಿ ಅವರಿಗೆ ಸಲ್ಲುತ್ತದೆ. ಈ ಬಗ್ಗೆ ನಾವು ಸಾಕಷ್ಟು ಬಾರಿ ಪ್ರಶ್ನೆ ಎತ್ತಿದ್ದೇವೆ. ಆದರೆ, ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಮೋದಿ ಅವರಿಲ್ಲ. ಹೀಗಾಗಿ, ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಕೂಗನ್ನು ಅವರು ಕೇಳಿಸಿಕೊಳ್ಳಲು ಸಿದ್ಧರಿಲ್ಲ’ ಎಂದರು.

‘ಪಿ.ಎಂ ಕೇರ್ಸ್‌ ಯೋಜನೆ ಅಡಿ ಎಷ್ಟು ಸಂದಾಯವಾಗಿದೆ ಎಂಬ ವಿವರವನ್ನು ಇದೂವರೆಗೂ ನೀಡಿಲ್ಲ. ಈ ಬಗ್ಗೆ ಸಂಸತ್ತಿನಲ್ಲೂ ಪ್ರಶ್ನಿಸಿದ್ದೇನೆ, ಕೆಲವರು ಆರ್‌ಟಿಐ ಮೂಲಕವೂ ಮಾಹಿತಿ ಕೋರಿದ್ದಾರೆ. ಆದರೆ, ಕೇಂದ್ರ ಸರ್ಕಾರ ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ, ಈ ಯೋಜನೆಯು ಇದೆಲ್ಲದರ ಹೊರತಾಗಿದೆ ಎನ್ನುತ್ತಾರೆ. ಇವರಿಗೆ ಯಾವುದು ಬೇಕೋ ಅದು ಒಳಗೆ, ಯಾವುದು ಬೇಡವೋ ಅದು ಹೊರಗೆ ಎನ್ನುವ ಮನೋಭಾವ ಸರಿಯಲ್ಲ’ ಎಂದೂ ದೂರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಬಿ.ಆರ್.ಪಾಟೀಲ, ಸೈಯದ್ ಮಜರ್ ಹುಸೇನ್, ಅಲ್ಲಮಪ್ರಭು ಪಾಟೀಲ, ಚಂದ್ರಿಕಾ ಪರಮೇಶ್ವರ, ರಾಜಗೋಪಾಲರಡ್ಡಿ ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು