ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಲ್ಲಿ ನೆಲೆಸಿರುವ ಮರಾಠಿಗರೂ ಕನ್ನಡಿಗರೇ’

ಕರ್ನಾಟಕ ಬಂದ್ ಕೈಬಿಡಲು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಮನವಿ
Last Updated 24 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ನೆಲೆಸಿರುವ ಮರಾಠಿಗರು ಕನ್ನಡಿಗರಾಗಿದ್ದು, ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ ಅನ್ನು ಕನ್ನಡಪರ ಸಂಘಟನೆಗಳು ಕೈಬಿಡಬೇಕು’ ಎಂದು ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ವಿ.ಎಸ್. ಶ್ಯಾಮಸುಂದರ್ ಗಾಯಕ್ವಾಡ್ ಮನವಿ ಮಾಡಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ ಎಂದು ನಾವು ಬಲವಾಗಿ ಪ್ರತಿಪಾದಿಸುತ್ತಿದ್ದೇವೆ. ಇಲ್ಲಿನ ನೆಲ, ಜಲ ಮತ್ತು ಭಾಷೆಯು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ನಾವೂ ಕನ್ನಡಿಗರಾಗಿದ್ದೇವೆ. ಕೆಲ ಕನ್ನಡ ಪರ ಹೋರಾಟಗಾರರು, ಸಂಘಟನೆಗಳು ಮಾಡುತ್ತಿರುವ ಆರೋಪವು ಭಾಷಾ ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮರಾಠರು ದೇಶದ ನಾಲ್ಕನೇ ಅತಿ ದೊಡ್ಡ ಜನಾಂಗವಾಗಿದ್ದು, ಇಲ್ಲಿಯೂ ಅಧಿಕ ಸಂಖ್ಯೆಯಲ್ಲಿದ್ದಾರೆ. 32 ಕ್ಷತ್ರಿಯ ಪಂಗಡಗಳಾಗಿ, ಶತಮಾನಗಳಿಂದ ಅಪ್ಪಟ ಕನ್ನಡಿಗರಾಗಿ ಶಾಂತಿಯುತ ಜೀವನ ಸಾಗಿಸುತ್ತಿದ್ದಾರೆ. ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬ ಹೋರಾಟಕ್ಕೆ ಮರಾಠ ಮುಖಂಡರು ಕೈಜೋಡಿಸಿ ಸಹಿ ಮಾಡಿದ್ದಾರೆ. ಮರಾಠ ಎಂದರೆ ಭಾಷೆಯಲ್ಲ. ಬದಲಾಗಿ ಜನಾಂಗ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.‌ ಭಾಷೆಯ ಹೆಸರಿನಲ್ಲಿ ನಮ್ಮನ್ನು ವಿಭಜಿಸುವುದು ಸರಿಯಲ್ಲ. ಮರಾಠ ಸಮಾಜದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ನಿಗಮ ರಚಿಸಲಾಗಿದೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಹೇಳಿಕೆಯನ್ನು ಖಂಡಿಸುತ್ತೇವೆ’ ಎಂದರು.

ಜಾಗ ಬಿಟ್ಟುಕೊಡುವುದಿಲ್ಲ: ‘ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿಯ ಒಂದು ಇಂಚು ಜಾಗವನ್ನು ನಾವು ಬಿಟ್ಟುಕೊಡುವುದಿಲ್ಲ. ಅಖಂಡ ಕರ್ನಾಟಕ ನಿರ್ಮಾಣವಾಗಬೇಕಾದಲ್ಲಿ ಸೊಲ್ಲಾಪುರ ಹಾಗೂ ಕೊಲ್ಲಾಪುರವನ್ನೂ ಪಡೆಯಬೇಕೆಂಬ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಗಡಿ ಭಾಗದ ಕೆಲ ಪುಂಡ ಮರಾಠಿಗರಿಗೆ ಖ್ಯಾತೆ ತೆಗೆಯುವುದೇ ಕೆಲಸವಾಗಿದೆ. ಅವರು ಮಾಡಿದ ತಪ್ಪಿಗಾಗಿ ಇಡಿ ಮರಾಠ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಮಹಾರಾಷ್ಟ್ರದ ಮೇಲೆ ಅಭಿಮಾನ ಇದ್ದವರು ಕರ್ನಾಟಕ ಬಿಟ್ಟು ತೊಲಗಲಿ ಎನ್ನುವುದು ನಮ್ಮ ಅಚಲ ನಿಲುವು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT