ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ: ‘ಹಳಬರ’ ಮಧ್ಯೆ ಸಮಬಲದ ಹೋರಾಟ

ಬಿಜೆಪಿ–ಕಾಂಗ್ರೆಸ್‌ನಿಂದ ಜಾತಿವಾರು ಸಭೆ l ‘ಸರ್ವಶಕ್ತಿ’ ಧಾರೆ ಎರೆಯುತ್ತಿವೆ ಪಕ್ಷಗಳು
Last Updated 12 ಏಪ್ರಿಲ್ 2021, 19:34 IST
ಅಕ್ಷರ ಗಾತ್ರ

ಮಸ್ಕಿ (ರಾಯಚೂರು ಜಿಲ್ಲೆ): ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.

ಅನುಷ್ಠಾನಗೊಳ್ಳಬೇಕಾದ ನೀರಾವರಿ ಯೋಜನೆಗಳು, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಭತ್ತದ ಬೆಳೆಗೆ ಸಮರ್ಪಕ ಕಾಲುವೆ ನೀರು ಒದಗಿಸುವಂತಹ ಅಭಿವೃದ್ಧಿ ವಿಷಯಗಳ ಜತೆಗೆ ‘ಸ್ವಾಭಿಮಾನ’ ಮತ್ತು ‘ಪಕ್ಷಾಂತರ’ ವಿಷಯಗಳೂ ಚರ್ಚೆಯಾಗುತ್ತಿವೆ.

ವಿಧಾನಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ವೇಳೆ 2008ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಈವರೆಗೆ ನಡೆದ ಮೂರೂ ಚುನಾವಣೆಗಳಲ್ಲಿ ಪ್ರತಾಪಗೌಡ ಪಾಟೀಲ ಮೊದಲು ಬಿಜೆಪಿಯಿಂದ, ಆ ನಂತರ ಎರಡು ಬಾರಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು.

‘ಆಪರೇಷನ್‌ ಕಮಲ’ದ ಭಾಗವಾಗಿ 2019ರಲ್ಲಿ ರಾಜ್ಯದ ವಿವಿಧ ಕಡೆಗಳ 17 ಶಾಸಕರೊಟ್ಟಿಗೆ ಇವರೂ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ನೆರವಾದರು. ಅವಧಿಗೂ ಮುನ್ನ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ನಡೆಯುತ್ತಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 213 ಮತಗಳಿಂದ ಪರಾಭವಗೊಂಡಿದ್ದಬಸನಗೌಡ ತುರ್ವಿಹಾಳ ಈಗ ಕಾಂಗ್ರೆಸ್‌ ಅಭ್ಯರ್ಥಿ. ಇವರು ಮೊದಲು ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಆ ನಂತರ ಬಿಜೆಪಿ ಸೇರಿದ್ದರು.

ಈಗ ಇವರಿಬ್ಬರೂ ಪಕ್ಷ ಬದಲಿಸಿ ಮತ್ತೆ ಎದುರಾಳಿಗಳಾಗಿದ್ದಾರೆ. ‘ವ್ಯಕ್ತಿ ಕೇಂದ್ರಿತ’ವಾಗಿದ್ದ ಈ ಕ್ಷೇತ್ರದಲ್ಲಿ ಮೊದಲ ಬಾರಿ ಪಕ್ಷದ ಪ್ರತಿಷ್ಠೆ ಮುನ್ನೆಲೆಗೆ ಬಂದಿದೆ. ಜೆಡಿಎಸ್‌ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಈ ಕ್ಷೇತ್ರ ಗೆಲ್ಲಲೇಬೇಕು ಎಂಬ ಪಣತೊಟ್ಟಂತಿರುವ ಬಿಜೆಪಿ, ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ಬೇರೆ ಬೇರೆ ಜಿಲ್ಲೆಗಳ ಕಾರ್ಯಕರ್ತರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷದ ಜಿಲ್ಲಾ ಹಾಗೂ ಸುತ್ತಲಿನ ಜಿಲ್ಲೆಗಳ ನಾಯಕರು, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಇಲ್ಲಿಯೇ ಬಿಡಾರ ಹೂಡಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ.

ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಜನರು ‘ದೇಣಿಗೆ’ ನೀಡುತ್ತಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಬಿಜೆಪಿ ಕಾರ್ಯಕರ್ತರು ಎನ್ನಲಾದ ಕೆಲವರು ಮತದಾರರಿಗೆ ಹಣ ಹಂಚಿದ್ದಾರೆ ಎನ್ನುವ ವಿಡಿಯೊ ವೈರಲ್‌ ಆಗಿರುವ ಕುರಿತು ಉಂಟಾಗಿರುವ ವಿವಾದವೂ ಹೆಚ್ಚು ಸದ್ದು ಮಾಡುತ್ತಿದೆ. ‘ಹಾಲಾಪುರದಲ್ಲಿ ನಮ್ಮ ಕಾರ್ಯಕರ್ತನನ್ನು ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಹತ್ಯೆ ಮಾಡಿದ್ದಾನೆ’ ಎಂದು ಹೇಳುತ್ತಾ ಬಿಜೆಪಿಯವರು ಇದನ್ನು ಚುನಾವಣಾ ವಿಷಯವನ್ನಾಗಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಸಂಚರಿಸಿದಾಗ ‘ಹಳಬರ’ ಮಧ್ಯೆ ಸಮಬಲದ ಹೋರಾಟ ಇರುವುದು ಗೋಚರಿಸುತ್ತದೆ.

ಸಂಪೂರ್ಣ ಗ್ರಾಮೀಣ ಕ್ಷೇತ್ರ

ಪಟ್ಟಣ ಪಂಚಾಯಿತಿಯನ್ನು ಹೊಂದಿದ್ದ ಮಸ್ಕಿ, 2017 ರಲ್ಲಿ ಹೊಸ ತಾಲ್ಲೂಕು ಕೇಂದ್ರವಾಗಿದೆ. ಮಸ್ಕಿ ವಿಧಾನಸಭೆ ಕ್ಷೇತ್ರವು ಭೌಗೋಳಿಕವಾಗಿ ಮೂರು ತಾಲ್ಲೂಕುಗಳನ್ನು ಒಳಗೊಂಡಿದೆ. ಮಾನ್ವಿ ತಾಲ್ಲೂಕಿನ 42 ಗ್ರಾಮಗಳು, ಲಿಂಗಸುಗೂರು ತಾಲ್ಲೂಕಿನ 54 ಗ್ರಾಮಗಳು ಹಾಗೂ ಸಿಂಧನೂರು ತಾಲ್ಲೂಕಿನ 74 ಹೀಗೆ ಒಟ್ಟು 170 ಗ್ರಾಮಗಳು ಹಾಗೂ 30 ಆಂಧ್ರ ಕ್ಯಾಂಪ್‌ಗಳು, 30 ಲಂಬಾಣಿ ತಾಂಡಾಗಳು ಹಾಗೂ 17 ಗೊಲ್ಲರಹಟ್ಟಿಗಳು ಈ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ.

ಎನ್‌ಆರ್‌ಬಿಸಿ 5ಎ ಕಾಲುವೆ

ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ)ಗೆ 5ಎ ಉಪಕಾಲುವೆ ನಿರ್ಮಿಸುವಂತೆ ರೈತರು 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು138 ದಿನಗಳಿಂದ ನಿರಂತರ ಧರಣಿ ಮಾಡುತ್ತಿರುವುದು ಚುನಾವಣೆಯ ಪ್ರಮುಖ ವಿಷಯವಾಗಿದೆ.

‘ಉಪಚುನಾವಣೆ ಮುಗಿಯುತ್ತಿದ್ದಂತೆ ಕಾಲುವೆ ಮಾಡಲು ತಜ್ಞರ ತಂಡ ನೇಮಿಸುತ್ತೇವೆ. ಈ ಭಾಗಕ್ಕೆ ನೀರು ತಲುಪಿಸುತ್ತೇವೆ’ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ‘ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಪ್ರತಾಪಗೌಡ ಈ ಬಗ್ಗೆ ಗಮನ ಸೆಳೆಯಲಿಲ್ಲ. 2023 ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಎಷ್ಟೆ ವೆಚ್ಚವಾದರೂ 5ಎ ಕಾಲುವೆ ಮಾಡುತ್ತೇವೆ’ ಎಂದು ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ. ಹೋರಾಟ ನಿರತ ರೈತರಲ್ಲೂ ಈಗಎರಡು ಬಣ ರೂಪುಗೊಂಡಿವೆ.

ಕಾನೂನು ಹೋರಾಟದಿಂದ ವಿಳಂಬ

2018ರ ಚುನಾವಣೆಯಲ್ಲಿಪ್ರತಾಪಗೌಡ ಪಾಟೀಲ ಅವರ ಪುತ್ರಿ ಅಮೆರಿಕದಲ್ಲಿದ್ದರೂ ಅವರ ಹೆಸರಿನಲ್ಲಿ ಮತದಾನವಾಗಿದೆ. ಮರಣ ಹೊಂದಿದವರ ಹೆಸರಿನಲ್ಲಿ ಮತದಾನವಾಗಿದ್ದು,ಅಕ್ರಮ ನಡೆದಿದೆ ಎಂದು ಪರಾಜಿತ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಹೈಕೋರ್ಟ್‌ ಮೊರೆ ಹೋಗಿದ್ದರು. ಹೀಗಾಗಿ ಈ ಕ್ಷೇತ್ರದ ಉಪ ಚುನಾವಣೆ ವಿಳಂಬವಾಗಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಬಸನಗೌಡರಿಗೆ ಟಿಎಲ್‌ಬಿಸಿ ಕಾಡಾ ಅಧ್ಯಕ್ಷಸ್ಥಾನ ನೀಡಿ ಪ್ರಕರಣ ವಾಪಸ್‌ ಪಡೆಯುವಂತೆ ಮಾಡಲಾಯಿತು. ಕೆಲದಿನಗಳ ನಂತರ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿದ ಅವರು ಪ್ರತಾಪಗೌಡರಿಗೆ ಮತ್ತೆ ಶೆಡ್ಡು ಹೊಡೆದಿದ್ದಾರೆ.

ಮಹಿಳಾ ಮತದಾರರೇ ಹೆಚ್ಚು

ಒಟ್ಟು ಮತದಾರರು: 2,06,988

ಮಹಿಳಾ ಮತದಾರರು: 1,04,941

ಪುರುಷ ಮತದಾರರು: 1,01,234

ಇತರೆ ಮತದಾರರು: 28

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT