ಬುಧವಾರ, ನವೆಂಬರ್ 25, 2020
22 °C
ಮಸ್ಕಿ, ಬಸವಕಲ್ಯಾಣ ಉಪಚುನಾವಣೆ

ಮಸ್ಕಿ, ಬಸವಕಲ್ಯಾಣ ಉಪಚುನಾವಣೆ: ವಿಜಯೇಂದ್ರ ಉಸ್ತುವಾರಿಗೆ ಹೆಚ್ಚಿದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ವೈ.ವಿಜಯೇಂದ್ರ

ಬೆಂಗಳೂರು: ರಾಯಚೂರು ಜಿಲ್ಲೆ ಮಸ್ಕಿ ಮತ್ತು ಬೀದರ್‌ ಜಿಲ್ಲೆ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆಗೆ ಬಿಜೆಪಿ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರೇ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳಬೇಕು ಎಂಬ ಒತ್ತಾಯ ಕ್ಷೇತ್ರಗಳ ನಾಯಕರ ವಲಯದಿಂದ ವ್ಯಕ್ತವಾಗಿದೆ.

ಕೆ.ಆರ್‌.ಪೇಟೆ ಮತ್ತು ಶಿರಾ ಉಪಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸುವಲ್ಲಿ ವಿಜಯೇಂದ್ರ ಅವರ ತಂತ್ರಗಾರಿಕೆ ಪ್ರಮುಖ ಪಾತ್ರವಹಿಸಿದೆ ಎಂಬ ಕಾರಣ ಮುಂದಿಟ್ಟಿರುವ ಮಸ್ಕಿಯಿಂದ ಸ್ಪರ್ಧಿಸಲು ಬಯಸಿರುವ ಪ್ರತಾಪ್‌ ಗೌಡ ಪಾಟೀಲ ಅವರು ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಬೇಕು ಮನವಿ ಮಾಡಿದ್ದಾರೆ.

ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ಉಪಚುನಾವಣೆ ಸದ್ಯವೇ ಘೋಷಣೆ ಆಗುವ ಸಾಧ್ಯತೆ ಇರುವುದರಿಂದ ಆ ಕ್ಷೇತ್ರಗಳ ನಾಡಿ ಮಿಡಿತ ಅರಿಯುವ ಉದ್ದೇಶದಿಂದ ವಿಜಯೇಂದ್ರ ಎರಡೂ ಕ್ಷೇತ್ರಗಳಲ್ಲಿ ಶುಕ್ರವಾರದಿಂದ ಪ್ರವಾಸ ಕೈಗೊಂಡಿದ್ದಾರೆ. ಮಸ್ಕಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ ಅವರು ಮೈತ್ರಿಸರ್ಕಾರವನ್ನು ಪತನಗೊಳಿಸಿದ ಶಾಸಕರ ಪೈಕಿ ಒಬ್ಬರಾಗಿದ್ದು, ಬಳಿಕ ಅವರು ಬಿಜೆಪಿ ಸೇರಿದರು. ಬಸವಕಲ್ಯಾಣ ಶಾಸಕ ನಾರಾಯಣರಾವ್‌ ಅವರು ಕೋವಿಡ್‌ನಿಂದ ಮೃತಪಟ್ಟ ಕಾರಣ ಅಲ್ಲಿ ಉಪಚುನಾವಣೆ ನಡೆಯಬೇಕಿದೆ.

‘ಈ ಎರಡೂ ಕ್ಷೇತ್ರಗಳ ಕಾರ್ಯಕರ್ತರು ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಬೇಕು ಒತ್ತಾಯಿಸುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರು ನಿರ್ಣಾಯಕರಾಗಿದ್ದಾರೆ. ಅಲ್ಲದೆ, ಇತರ ಸಮುದಾಯಗಳನ್ನು ಸೆಳೆಯುವ ಚಾಕಚಕ್ಯತೆ ಹೊಂದಿರುವುದರಿಂದ ಗೆಲುವಿಗೆ ಕಷ್ಟವಾಗಲಾರದು ಎಂಬ ಭಾವನೆ ಅವರಲ್ಲಿ ಬೇರೂರಿದೆ’ ಎಂದು ವಿಜಯೇಂದ್ರ ಅವರ ಆಪ್ತ ಮೂಲಗಳು ತಿಳಿಸಿವೆ.

ಆದರೆ, ಪಕ್ಷವಾಗಲಿ ಮುಖ್ಯಮಂತ್ರಿಯವರಾಗಲಿ ಈ ಉಪಚುನಾವಣೆಗಳ ಉಸ್ತುವಾರಿಗಳ ಬಗ್ಗೆ ಇನ್ನೂ ಚಿಂತನೆ ನಡೆಸಿಲ್ಲ. ಚುನಾವಣೆಯೇ ಘೋಷಣೆ ಆಗದಿರುವುದರಿಂದ ಉಸ್ತುವಾರಿ ಯಾರೆಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪಕ್ಷ ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು