ರಾಜ್ಯದ ಪಾಲಿನ ಉಳಿದ ಸೀಟು ಕೇಂದ್ರಕ್ಕೆ ನೀಡದಿರಿ: ಕರವೇ

ಬೆಂಗಳೂರು: ‘ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್) ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ನಲ್ಲಿ ರಾಜ್ಯಕ್ಕೆ ದೊರೆತ ಸೀಟುಗಳಲ್ಲಿ ಕೌನ್ಸೆಲಿಂಗ್ ನಂತರ ಹಂಚಿಕೆಯಾಗದೇ ಉಳಿದಿರುವ ಸೀಟುಗಳನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೆ ಮರಳಿಸುತ್ತಿದೆ. ಇದು ರಾಜ್ಯದ ಅಭ್ಯರ್ಥಿಗಳಿಗೆ ಮಾಡುವ ಅನ್ಯಾಯದ ಪರಮಾವಧಿ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಟೀಕಿಸಿದೆ.
‘ರಾಜ್ಯದ ಕಿರಿಯ ವೈದ್ಯರು ವೈದ್ಯಕೀಯ ಸ್ನಾತಕೋತ್ತರ ಪದವಿಯಸೀಟುಗಳು ಪಡೆಯಲು ಅನುಕೂಲವಾಗುವಂತೆ 2022ರ ಮಾರ್ಚ್ 12ರಂದು ಕಟ್-ಆಫ್ ಅಂಕಗಳನ್ನು ಕಡಿಮೆ ಮಾಡಲಾಗಿತ್ತು. ಇದರಿಂದಾಗಿ ಕರ್ನಾಟಕದ ಸೇವಾನಿರತ ವೈದ್ಯರು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ಆದರೆ, ರಾಜ್ಯ ಸರ್ಕಾರವು ಸೇವಾನಿರತ ವೈದ್ಯರಿಗೆ ಕಾಯ್ದಿರಿಸಿದ್ದ ಸೀಟುಗಳನ್ನು ಕೇಂದ್ರ ಸರ್ಕಾರಕ್ಕೆ ಮಾರ್ಚ್ 16ರಂದು ಮರಳಿಸಿದೆ. ಈ ನಿರ್ಧಾರದಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ’ ಎಂದು ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಸುಧಾಕರ್ ಅವರ ಪ್ರಯತ್ನದಿಂದಲೇ ಕಿರಿಯ ವೈದ್ಯರು ಸ್ನಾತಕೋತ್ತರ ಸೀಟು ಗಿಟ್ಟಿಸಿಕೊಳ್ಳಲು ಕಟ್-ಆಫ್ ಅಂಕದಲ್ಲಿ ಕಡಿತ ಸಾಧ್ಯವಾಗಿತ್ತು. ಸಚಿವರ ಪ್ರಯತ್ನವನ್ನು ವಿಫಲಗೊಳಿಸಿದ ಕಾಣದ ಶಕ್ತಿಗಳು ಯಾವುವು’ ಎಂದು ಅವರು ಪ್ರಶ್ನಿಸಿದ್ದಾರೆ.
‘ತಮಿಳುನಾಡಿನಲ್ಲಿ ಕೌನ್ಸೆಲಿಂಗ್ ನಂತರ ಉಳಿದ ಸೀಟುಗಳನ್ನು ಮರುಹಂಚಿಕೆ ಮಾಡುತ್ತಾರೆ. ಕಟ್ ಆಫ್ ಅಂಕ ಕಡಿಮೆ ಮಾಡುವ ಮೂಲಕ ರಾಜ್ಯದ ಅಭ್ಯರ್ಥಿಗಳಿಗೆ ಉಳಿಕೆ ಸೀಟುಗಳು ಸಿಗುವಂತೆ ನೋಡಿಕೊಳ್ಳುತ್ತಾರೆ. ನಾಡಿನ ಹಕ್ಕುಗಳನ್ನು ಅವರು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಅಲ್ಲಿನ ಸರ್ಕಾರದಿಂದ ನಮ್ಮವರು ಕಲಿಯುವುದು ತುಂಬಾ ಇದೆ’ ಎಂದರು.
ಮೊದಲೇ ನೀಟ್ ಪರೀಕ್ಷೆ ಜಾರಿಯಾದ ಬಳಿಕ ರಾಜ್ಯದ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್ ಹಾಗೂ ಎಂಡಿ ಸೀಟುಗಳು ಪರಭಾಷಿಕರ ಪಾಲಾಗುತ್ತಿವೆ. ಈಗ ರಾಜ್ಯದ ಪಟ್ಟಿಯಲ್ಲಿರುವ ಸೀಟುಗಳನ್ನು ಮತ್ತೆ ಕೇಂದ್ರಕ್ಕೆ ಮರಳಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಕರ್ನಾಟಕದ ಕಿರಿಯ ವೈದ್ಯರು ಪ್ರಾಣದ ಹಂಗು ತೊರೆದು ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿದಿದ್ದರು. ಈ ಕೊರೊನಾ ಯೋಧರ ಹಕ್ಕುಗಳನ್ನು ಸರ್ಕಾರ ಕಸಿಯುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.