ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಎನ್ನುವುದು ಪರ್ಷಿಯನ್ನಿನ ಅಶ್ಲೀಲ ಪದ: ಕಾಂಗ್ರೆಸ್‌ ನಾಯಕ ಸತೀಶ ಜಾರಕಿಹೊಳಿ

Last Updated 7 ನವೆಂಬರ್ 2022, 19:48 IST
ಅಕ್ಷರ ಗಾತ್ರ

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ‘ಹಿಂದೂ ಎನ್ನವುದು ಭಾರತೀಯ ಪದವಲ್ಲ. ಅದು ಪರ್ಷಿಯನ್ ನೆಲಕ್ಕೆ ಸೇರಿದ್ದು, ಅದೊಂದು ಅಶ್ಲೀಲ ಪದವಾಗಿದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಮಾನವ ಬಂಧುತ್ವ ವೇದಿಕೆಯಿಂದ ಪಟ್ಟಣದಲ್ಲಿ ರಾತ್ರಿ ಆಯೋಜಿಸಿದ್ದ 'ಮನೆಮನೆಗೆ ಬುದ್ಧ, ಬಸವ, ಅಂಬೇಡ್ಕರ್'
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ಸಮಯ ಕಳೆಯಲು,ಹವ್ಯಾಸಕ್ಕಾಗಿ ಬರೆದ ಪುಸ್ತಕಗಳನ್ನೇ ಮಹಾನ್ ಗ್ರಂಥಗಳಾಗಿ ಮಾಡಲಾಗಿದೆ. ಈಗ ಅವು ನಮ್ಮನ್ನು ಆಳುತ್ತಿವೆ. ಅವುಗಳನ್ನು ಮುಂದೆ ಇಟ್ಟುಕೊಂಡು ಕೆಲವರುಧರ್ಮ, ಜಾತಿ ಎನ್ನುತ್ತ ದಿಕ್ಕು ತಪ್ಪಿಸುತ್ತಿದ್ದಾರೆ' ಎಂದೂ ದೂರಿದರು.

‘ನಮಗೆ ತಪ್ಪು ಇತಿಹಾಸವನ್ನು ಹೇಳಲಾಗುತ್ತಿದೆ. ಶಿವಾಜಿ ಮಹಾರಾಜರು, ಸಂಭಾಜಿ ಮಹಾರಾಜರು, ಬಸವೇಶ್ವರರು, ಸಂತ ತುಕಾರಾಮ ಮಹಾರಾಜರು ಸಾವನ್ನಪ್ಪಿದ ಇತಿಹಾಸ ತಿರುಚಲಾಗಿದೆ' ಎಂದು ದೂರಿದರು.

'ಶಿವಾಜಿ ಮಹಾರಾಜರ ಕಾಲದಲ್ಲಿ ಹಿಂದೂ- ಮುಸ್ಲಿಂ ಹೋರಾಟ ಇರಲಿಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಕಂಡವರು.
ಆದರೆ ಈಗ ತಮ್ಮ ಬೇಳೆ ಬೇಯಿಸಿಕೊಳ್ಳಲು ಹಿಂದೂ- ಮುಸ್ಲಿಂ- ದಲಿತರಲ್ಲಿ ಹೋರಾಟ ಮಾಡಿಸುತ್ತಿದ್ದಾರೆ. ವಿಶ್ವದಲ್ಲಿ ಶಿವಾಜಿ ಅವರದು ಒಂದೇ ಒಂದು ಪೇಂಟಿಂಗ್ ಇದೆ. ಅದನ್ನು ರಚಿಸಿದ್ದು ಕುಲಕರ್ಣಿಯೋ, ದೇಶಪಾಂಡೆಯೋ ಅಲ್ಲ. ಮಹಮ್ಮದ್ ಮದಾರಿ ಎನ್ನುವ ಮುಸ್ಲಿಂ ಕಲಾವಿದ ರಚಿಸಿದ್ದು’ ಎಂದೂ ಹೇಳಿದರು.

‘ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನಗಳು ನಡೆದಿವೆ. ಅವುಗಳನ್ನು ಪಡೆಯಲು ಮಾನವ ಬಂಧುತ್ವ ವೇದಿಕೆಯ ಮೂಲಕ ಹೋರಾಟ ಆರಂಭಿಸಲಾಗಿದೆ. ಬಹಳಷ್ಟು ಪೂಜ್ಯರು, ರಾಜಕಾರಣಿಗಳು ನಮ್ಮ ಜೊತೆ ಇದ್ದಾರೆ. ಈ ಹೋರಾಟದಲ್ಲಿ ಎಲ್ಲರ ಸಹಕಾರ ಅಗತ್ಯ’ ಎಂದು ಸತೀಶ ಕೋರಿದರು.

'ಇಂಥ ಒಂದೇ ಸಭೆಯ ಮೂಲಕ ಪರಿವರ್ತನೆ ಸಾಧ್ಯವಿಲ್ಲ. ರಾಜ್ಯದಾದ್ಯಂತ ನಿರಂತರ ಸಭೆಗಳನ್ನು ನಡೆಸಲಾಗುವುದು. ಇದು ಕೇವಲ ಟ್ರೇಲರ್. ಪಿಕ್ಚರ್ ಇನ್ನೂ ಬಾಕಿ ಇದೆ' ಎಂದರು.

ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬಸವ ಭವನದಬಸವ ಚೇತನ ದೇವರು ಆಶೀರ್ವಚನ ನೀಡಿದರು. ಚೈತನ್ಯ ಮಹಾರಾಜರು, ಮಾನವ ಬಂಧುತ್ವ ವೇದಿಕೆರಾಜ್ಯ ಸಂಚಾಲಕ ಡಾ. ಎ.ಬಿ.ರಾಮಚಂದ್ರಪ್ಪ, ಯುವ ನಾಯಕ ರಾಹುಲ್ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾ ಸಾಹೇಬಪಾಟೀಲ, ಮಹಾವೀರ ಮೋಹಿತೆ, ಪಂಕಜ ಪಾಟೀಲ, ರಾಜಣ್ಣ ವಡ್ಡರ, ಗಜಾನನ ಮಂಗಸೂಳಿ ಹಲವರು ಇದ್ದರು.

‘ನನ್ನ ಭಾಷಣ ತಪ್ಪಾಗಿ ಅರ್ಥೈಸಬೇಡಿ’
ಬೆಳಗಾವಿ:
‘ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದ್ದು ಎಂದು ನಾನು ಹೇಳಿದ್ದು ನಿಜ. ಈ ಬಗ್ಗೆ ಚರ್ಚೆ ಆಗಬೇಕು ಎಂದು ಹೇಳಿದ್ದೇನೆ ಹೊರತು, ಹಿಂದೂ ಪದದ ಬಗ್ಗೆ ನಿಂದನೆ ಮಾಡಿಲ್ಲ’ ಎಂದು ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಟ್ವಿಟರ್‌ ಹಾಗೂ ಫೇಸ್‌ಬುಕ್‌ ಖಾತೆಗಳಲ್ಲಿ ವಿಡಿಯೊ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ‘ನನ್ನ ಭಾಷಣವನ್ನು ಕೆಲ ಮಾಧ್ಯಮದವರು ತಪ್ಪಾಗಿ ಅರ್ಥೈಸಿ, ದೊಡ್ಡದಾಗಿ ಹರಿಬಿಟ್ಟಿದ್ದಾರೆ. ನಾ ಹೇಳಿದ್ದರಲ್ಲೇನೂ ತಪ್ಪಿಲ್ಲ. ಹಿಂದೂ ಪದವು ಪರ್ಷಿಯನ್‌ ಮೂಲದ್ದು ಎಂಬುದಕ್ಕೆ ದಾಖಲೆಗಳಿವೆ’ ಎಂದಿದ್ದಾರೆ.

‘ಆರ್ಯ ಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಅವರು ರಚಿಸಿದ ‘ಸತ್ಯಾರ್ಥ ಪ್ರಕಾಶ’ ಪುಸ್ತಕದಲ್ಲಿ, ಡಾ.ಜಿ.ಎಸ್‌. ಪಾಟೀಲ ಅವರು ಬರೆದ ‘ಬಸವ ಭಾರತ’ ಪುಸ್ತಕದಲ್ಲೂ ಇದರ ಉಲ್ಲೇಖವಿದೆ. ಬಾಲಗಂಗಾಧರ ತಿಲಕ ಅವರ ‘ಕೇಸರಿ’ ಪತ್ರಿಕೆಯಲ್ಲೂ ಇದರ ಮಾಹಿತಿ ನೀಡಿದ್ದರು. ಇಂಥ ಸಾಕಷ್ಟು ದಾಖಲೆಗಳಿವೆ’ ಎಂದೂ ಹೇಳಿದ್ದಾರೆ.

*
ಕಾಂಗ್ರೆಸ್‌ ಪಕ್ಷವು ಎಲ್ಲಾ ಧರ್ಮ, ನಂಬಿಕೆ ಮತ್ತು ವಿಶ್ವಾಸಗಳಿಗೆ ಗೌರವ ನೀಡುವ ದೇಶವನ್ನು ಕಟ್ಟಿದೆ. ಇದು ಭಾರತದ ಸತ್ವ. ಜಾರಕಿಹೊಳಿ ಅವರ ಹೇಳಿಕೆ ದುರದೃಷ್ಟಕರ. ಇದನ್ನು ಖಂಡಿಸುತ್ತೇವೆ.
-ರಣದೀಪ್‌ಸಿಂಗ್ ಸುರ್ಜೇವಾಲಾ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT