ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ಯಕ್ಕಿಲ್ಲ ಕೊರತೆ; ರೋಗಿಗಳು ಹೆಚ್ಚಾದರಷ್ಟೇ ಚಿಂತೆ

Last Updated 4 ಮೇ 2021, 4:01 IST
ಅಕ್ಷರ ಗಾತ್ರ

ಶಿವಮೊಗ್ಗ/ ದಾವಣಗೆರೆ/ ಚಿತ್ರದುರ್ಗ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 1,250 ಹಾಸಿಗೆಗಳಿವೆ. 1,100 ಹಾಸಿಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. ಸದ್ಯ 300 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ವ್ಯವಸ್ಥೆ ಒಳಗೊಂಡ 500 ಹಾಸಿಗೆಗಳು ಸಿದ್ಧವಿವೆ. ಉಳಿದ ಹಾಸಿಗೆಗಳಿಗೆಆಮ್ಲಜನಕ ಪೂರೈಕೆ ಇದ್ದರೂ ರೋಗಿಗಳ ಮುಖಕ್ಕೆ ಅಳವಡಿಸಲು ಅಗತ್ಯ ಪರಿಕರಗಳ ಕೊರತೆ ಇದೆ. ಆಸ್ಪತ್ರೆ ಆಡಳಿತ ಮಂಡಳಿ ಅಗತ್ಯ ಯಂತ್ರಗಳನ್ನು ಖರೀದಿಸಿಲ್ಲ. ಇದರಿಂದ ಇನ್ನೂ 300 ಹಾಸಿಗೆಗಳು ಬಳಕೆಗೆ ಲಭ್ಯವಾಗಿಲ್ಲ.

ಆಸ್ಪತ್ರೆ ಆವರಣದಲ್ಲಿ 16 ಸಾವಿರ ಲೀಟರ್ ಆಮ್ಲಜನಕ ಸಂಗ್ರಹದ ಟ್ಯಾಂಕ್ ಸದಾ ತುಂಬಿರುತ್ತದೆ. ಬಳ್ಳಾರಿ ಜಿಲ್ಲೆಯ ತೋರಣಗಲ್‌ನ ಜಿಂದಾಲ್‌ನಿಂದ ಪ್ರತಿ ಎರಡು ದಿನಗಳಿಗೆ ಮೆಗ್ಗಾನ್‌ ಆವರಣಕ್ಕೆ ಆಮ್ಲಜನಕ ತುಂಬಿದ ಟ್ಯಾಂಕರ್ ಬರುತ್ತವೆ. ಇದರಿಂದ ಜಿಲ್ಲೆಯ ಎಲ್ಲೂ ಆಮ್ಲಜನಕ ಕೊರತೆಯಾಗಿಲ್ಲ. ಆಮ್ಲಜನಕ ಕೊರತೆಯಿಂದ ಮೃತಪಟ್ಟ ಯಾವ ಪ್ರಕರಣಗಳೂ ವರದಿಯಾಗಿಲ್ಲ.

ಶಿಕಾರಿಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಥಳೀಯವಾಗಿ ಆಮ್ಲಜನಕ ಉತ್ಪಾದಿಸಲು ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ. ಭದ್ರಾವತಿಯ ವಿಐಎಸ್‌ಎಲ್‌ ಆವರಣದ ಬಾಲದೋಟ ಆಮ್ಲಜನಕ ಘಟಕದಿಂದ ಭದ್ರಾವತಿಯ ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ 500 ಲೀಟರ್ ಪೂರೈಸಲಾಗುತ್ತಿದೆ. ವಿಐಎಸ್‌ಎಲ್‌ ಆಸ್ಪತ್ರೆಯನ್ನೇ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಆಮ್ಲಜನಕ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಚೇನಹಳ್ಳಿಯ ಸದರನ್‌ ಘಟಕ ಕೆಲವು ಆಸ್ಪತ್ರೆಗಳಿಗೆ 15 ಕೆ.ಜಿ. ಸಿಲಿಂಡರ್‌ ಪೂರೈಸುತ್ತಿದೆ.

ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 50 ಆಮ್ಲಜನಕ ಪೂರೈಕೆಯ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಆವಶ್ಯಕತೆ ಇರುವವರಿಗೆ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಆರೋಗ್ಯ ಉದ್ದೇಶ ಹೊರತು ಇತರೆ ಕಾರ್ಯಕ್ಕೆ ಆಮ್ಲಜನಕ ಬಳಸದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಾಗೆ ಮಾರಾಟ ಮಾಡಿದ ಶಿವಮೊಗ್ಗ ಆಟೊ ಕಾಂಪ್ಲೆಕ್ಸ್‌ನ ಎರಡು ಘಟಕಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

ದಾವಣಗೆರೆಯಲ್ಲಿ ಕೊರತೆ ಇಲ್ಲ
ದಾವಣಗೆರೆ ಜಿಲ್ಲೆಯಲ್ಲಿ ಸದ್ಯಕ್ಕೆ ಆಮ್ಲಜನಕದ ಕೊರತೆ ಇಲ್ಲ. ರೋಗಿಗಳ ಸಂಖ್ಯೆ ಹೆಚ್ಚಾದರೆ ಈಗಿರುವ ವ್ಯವಸ್ಥೆ ಸಾಕಾಗುವುದಿಲ್ಲ.

ಜಿಲ್ಲಾ ಆಸ್ಪತ್ರೆಯಲ್ಲಿ 6 ಸಾವಿರ ಲೀಟರ್ ಆಮ್ಲಜನಕ ಸಂಗ್ರಹವಾಗುವ ‘ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಪ್ಲಾಂಟ್‌’ ಇದೆ. 14 ಸಾವಿರ ಲೀಟರ್‌ ಆಮ್ಲಜನಕ ಜಿಂದಾಲ್‌ನಿಂದ ಹರಿಹರದ ಸದರ್ನ್‌ ಪ್ಲಾಂಟ್‌ಗೆ ಬಂದು ಅಲ್ಲಿಂದ ದಾವಣಗೆರೆಗೆ ಪೂರೈಕೆಯಾಗುತ್ತಿದೆ. ಅದರಲ್ಲಿ 6 ಸಾವಿರ ಲೀಟರ್‌ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಟ್ಯಾಂಕ್‌ಗೆ ಹೋಗುತ್ತದೆ. 4 ಸಾವಿರ ಲೀಟರ್‌ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತದೆ. ಉಳಿದ 4 ಸಾವಿರ ಲೀಟರ್‌ಗಳು 200 ಜಂಬೋ ಸಿಲಿಂಡರ್‌ಗಳಿಗೆ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಿಗೆ ಬಳಕೆಯಾಗುತ್ತಿದೆ.

ಆಮ್ಲಜನಕ ಸಹಿತ ಬೆಡ್‌ಗಳು ಸರ್ಕಾರಿ ಆಸ್ಪತ್ರೆಯಲ್ಲಿ 300 ಇವೆ. ಇದಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ 300 ಬೆಡ್‌ಗಳಿವೆ. ರೋಗಿಗಳಿಗೆ ಬೇಕಾದಷ್ಟು ಬೆಡ್‌ಗಳಿವೆ. ಒಂದು ವೇಳೆ ರೋಗಿಗಳ ಸಂಖ್ಯೆ ದುಪ್ಪಟ್ಟುಗೊಂಡರೆ ಇಲ್ಲೂ ಆಮ್ಲಜನಕದ ಸಮಸ್ಯೆ ಎದುರಾಗಲಿದೆ.

ಆಸ್ಪತ್ರೆಗಳಿಗೆ ಬಿಟ್ಟು ಬೇರೆ ಕಾರಣಕ್ಕೆ ಬಳಕೆಯಾಗಬಾರದು ಎಂಬ ಕಾರಣಕ್ಕೆ ಜಿಂದಾಲ್‌ ಪ್ಲಾಂಟ್‌ನಿಂದ ಹರಿಹರದ ಸದರ್ನ್‌ ಪ್ಲಾಂಟ್‌ಗೆ ಮತ್ತು ಈ ಪ್ಲಾಂಟ್‌ನಿಂದ ಜಿಲ್ಲಾ ಆಸ್ಪತ್ರೆಗೆ ಪೂರೈಕೆಯನ್ನು ಪೊಲೀಸ್ ಬಂದೋಬಸ್ತಿನಲ್ಲಿ ಮಾಡಲಾಗುತ್ತಿದೆ. ಎಲ್ಲೂ ಸೋರಿಕೆಯಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಒಂದೂವರೆ ದಿನಗಳಿಗೊಮ್ಮೆ ಆಮ್ಲಜನಕ ತರಿಸಲಾಗುತ್ತಿದೆ. ಇನ್ನಷ್ಟು ಬಳಕೆ ಹೆಚ್ಚಾದರೆ ಪ್ರತಿದಿನ ತರಿಸಲೂ ತಯಾರಿದ್ದೇವೆ. ಹಿಂದೆ ಎರಡು ದಿನಗಳಿಗೊಮ್ಮೆಯೂ ಖಾಲಿಯಾಗುತ್ತಿರಲಿಲ್ಲ’ ಎಂದು ವಿವರ ನೀಡಿದ್ದಾರೆ.

ಕೊರೊನಾ ಬರುವ ಮೊದಲು ಸುಮಾರು 50 ಆಮ್ಲಜನಕ ಬೆಡ್‌ಗಳಿದ್ದವು. ಈಗ 300ಕ್ಕೆ ಏರಿದೆ. 10 ಇದ್ದ ಐಸಿಯು ಬೆಡ್‌ಗಳನ್ನು 30ಕ್ಕೆ ಏರಿಸಲಾಗಿದೆ. ಸದ್ಯ ಸಮಸ್ಯೆ ಇಲ್ಲ ಎಂದು ಡಿಎಚ್‌ಒ ಡಾ.ನಾಗರಾಜ್‌ ತಿಳಿಸಿದ್ದಾರೆ.

ಖಾಲಿ ಆಗುವ ಆತಂಕದಲ್ಲೇ ಪೂರೈಕೆ
ಆಮ್ಲಜನಕ ಯಾವಾಗ ಖಾಲಿ ಆಗುತ್ತದೆ ಎಂಬ ಆತಂಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ಕೋವಿಡ್‌ ರೋಗಿಗಳನ್ನು ಸದಾ ಕಾಡುತ್ತಿದೆ. ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ರೋಗಿಗಳು ಪರದಾಡಿದ ನಿದರ್ಶನವೂ ಇದೆ.

ಜಿಲ್ಲೆಯಲ್ಲಿ ಆಮ್ಲಜನಕ ಸೌಲಭ್ಯ ಹೊಂದಿದ 375 ಬೆಡ್‌ಗಳಿದ್ದು, ಬಹುತೇಕ ಎಲ್ಲವೂ ಭರ್ತಿಯಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿ 6.2 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ ಇದೆ. ತಾಲ್ಲೂಕು ಆಸ್ಪತ್ರೆಗಳಿಗೆ 50 ಲೀಟರ್‌ ಸಾಮರ್ಥ್ಯದ 60 ಜಂಬೋ ಸಿಲಿಂಡರ್‌ಗಳನ್ನು ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಗೆ ನಿತ್ಯ 3 ಸಾವಿರ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ನಿತ್ಯವೂ ತಲಾ 100 ಲೀಟರ್‌ ಆಮ್ಲಜನಕದ ಅಗತ್ಯವಿದೆ.

ಬಳ್ಳಾರಿ ಜಿಲ್ಲೆಯ ಜಿಂದಾಲ್‍ನಿಂದ ಹರಿಹರಕ್ಕೆ ಬರುವ ಆಮ್ಲಜನಕ ಚಿತ್ರದುರ್ಗಕ್ಕೂ ಸರಬರಾಜು ಆಗುತ್ತಿದೆ. ಎರಡು ದಿನಕ್ಕೆ ಒಂದು ಟ್ಯಾಂಕರ್‌ ಆಮ್ಲಜನಕವನ್ನು ಜಿಲ್ಲೆಗೆ ಒದಗಿಸಲಾಗುತ್ತಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಇದ್ದರೂ ಅಲ್ಲಿನ ರೋಗಿಗಳಿಗಷ್ಟೇ ಅದು ಸಾಕಾಗುತ್ತಿದೆ.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕೆ ಸಮಸ್ಯೆ ಉಂಟಾಗುತ್ತಿದೆ. ಆಮ್ಲಜನಕ ಪೂರೈಕೆಯಲ್ಲಿ ಏಕಗವಾಕ್ಷಿ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆ ಹೆಚ್ಚಿಸಿದೆ. ರೋಗಿಗಳ ಅಗತ್ಯಕ್ಕೆ ತಕ್ಕಷ್ಟು ಆಮ್ಲಜನಕ ಪಡೆಯಲು ವೈದ್ಯರು ಹೆಣಗಾಡುತ್ತಿದ್ದಾರೆ. ಪ್ರತಿ ತಾಲ್ಲೂಕಿನಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT