ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆಗೆ ಅನುಮೋದನೆ ಸಿಕ್ಕರೆ ಪಾದಯಾತ್ರೆ ಸ್ಥಗಿತ: ಡಿ.ಕೆ. ಸುರೇಶ್‌

Last Updated 20 ಜನವರಿ 2022, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರವು ಕೋವಿಡ್ ಬಿಕ್ಕಟ್ಟು ಮುಗಿಯುವುದರೊಳಗೇ ಅನುಮೋದನೆ ನೀಡಿದರೆ ಪಾದಯಾತ್ರೆಯನ್ನು ಮುಂದುವರಿಸುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಹೇಳಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಪಾದಯಾತ್ರೆಯೇ ನಮ್ಮ ಉದ್ದೇಶವಲ್ಲ. ಸರ್ಕಾರದ ಗಮನ
ಸೆಳೆಯಬೇಕಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ. ಯೋಜನೆಗೆ ಅನುಮೋದನೆ ನೀಡಿದರೆ ಕೇಂದ್ರಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.

ಸಂದರ್ಶನದ ಸಂಕ್ಷಿಪ್ತ ಭಾಗ ಇಲ್ಲಿದೆ:

* ಈ ಯೋಜನೆಯಿಂದ ಗುತ್ತಿಗೆದಾರರಿಗೆ, ರಾಜಕಾರಣಿಗಳಿಗೆಮಾತ್ರ ಲಾಭ, ಪರಿಸರಕ್ಕೆ ಹಾನಿ ಎಂಬುದು ಪರಿಸರವಾದಿಗಳ ಆಕ್ಷೇಪ.

-ಪರಿಸರವಾದಿಗಳಿಗೆ ಕೆಲವು ಸಮಸ್ಯೆಗಳಿವೆ. ಜನರಿಗೆ ಹಲವು ಸಮಸ್ಯೆಗಳಿವೆ. ಬೆಂಗಳೂರು ಬೆಳೆಯುವುದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಂಪೇಗೌಡರ ಕಾಲದಲ್ಲಿ ಬೆಂಗಳೂರಿನಲ್ಲಿ 15 ಲಕ್ಷದಿಂದ 20 ಲಕ್ಷ ಜನರಿದ್ದರು. ಆಗಿನ ಕೆರೆ–ಕಟ್ಟೆಗಳ ನೀರು ಎಲ್ಲರಿಗೂ ಸಾಕಾಗುತ್ತಿತ್ತು. ಈಗ 1.40 ಕೋಟಿ ಜನರಿದ್ದಾರೆ. ಅವರೆಲ್ಲರಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು ಎಂದರೆ ಈ ಯೋಜನೆ ಅಗತ್ಯ. ಅಣೆಕಟ್ಟು ನಿರ್ಮಾಣದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ವನ್ಯಸಂಪತ್ತು ವೃದ್ಧಿಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಕಬಿನಿ ಜಲಾಶಯದ ಸುತ್ತ–ಮುತ್ತ ಆಗಿರುವ ಬದಲಾವಣೆ ನೋಡಿದರೆ, ಮೇಕೆದಾಟು ಅಣೆಕಟ್ಟು ಎಷ್ಟು ಅವಶ್ಯಕ ಎಂಬುದು ತಿಳಿಯುತ್ತದೆ.

* ತಮಿಳುನಾಡಿನಲ್ಲಿ ನಿಮ್ಮದೇ ಮಿತ್ರಪಕ್ಷ ಡಿಎಂಕೆ ಅಧಿಕಾರದಲ್ಲಿದೆ. ಆ ಸರ್ಕಾರದ ಮನವೊಲಿಸಿದ್ದರೆ ಪಾದಯಾತ್ರೆಯ ಅವಶ್ಯಕತೆಯೇ ಇರಲಿಲ್ಲವಲ್ಲ

-ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಬೇಕಾಗಿರುವುದು ಕರ್ನಾಟಕದಲ್ಲಿ. ನಮ್ಮ ನೀರನ್ನು ಬಳಸುವುದಕ್ಕೆ ಆ ರಾಜ್ಯದ ಅನುಮತಿಯ ಅಗತ್ಯವೇ ಇಲ್ಲ. ಅವರ ಕಾವೇರಿ ನೀರಿನ ಪಾಲನ್ನು ಕೊಡುತ್ತೇವೆ ಎಂದು ನಾವು ಸುಪ್ರೀಂ
ಕೋರ್ಟ್‌ಗೆ ಹೇಳಿದ್ದೇವೆ. ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಮೇಕೆದಾಟು ಅಣೆಕಟ್ಟೆ ಮೂಲಕ ಬಳಸಿಕೊಳ್ಳುತ್ತೇವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆಯೇ ವಿನಾ ತಮಿಳುನಾಡು ಸರ್ಕಾರದ್ದಲ್ಲ.

* ಉತ್ತರ ಕರ್ನಾಟಕದ ಕುಡಿಯುವ ನೀರಿನ ಯೋಜನೆಗಳಿಗೂ ಕಾಂಗ್ರೆಸ್‌ ಇಷ್ಟೇ ಆಸಕ್ತಿಯಿಂದ ಹೋರಾಟ ಮಾಡಲಿದೆಯೇ?

-ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಕೇಂದ್ರ ಸರ್ಕಾರವು ಗಡುವಿನೊಳಗೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸದಿದ್ದರೆ ಕಾಂಗ್ರೆಸ್‌ನಿಂದ ಹೋರಾಟ ಹಮ್ಮಿಕೊಳ್ಳುತ್ತೇವೆ

* ಅಭಿವೃದ್ಧಿ ವಿಚಾರಗಳ ಬದಲಿಗೆ, ‘ಗಂಡಸುತನ’ ಎಂಬ ಪದ ಪ್ರಯೋಗಗಳ ಮೂಲಕ ನಾಯಕರು ಬೀದಿ ಜಗಳವಾಡುವುದು ಎಷ್ಟು ಸರಿ?

-ಗಂಡಸುತನಕ್ಕೆ ಸವಾಲು ಹಾಕಿದರೂ ಸುಮ್ಮನಿರಬೇಕೇ? ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡುವ ಅಶ್ವತ್ಥನಾರಾಯಣ ಅವರು ರಾಮನಗರಕ್ಕೆ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬರುವುದನ್ನು ತಡೆಯುತ್ತಿದ್ದಾರೆ. ಮುಂದೆ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ

*ಮುಂದೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆಯೇ?

-ಜನರ ಅಭಿಪ್ರಾಯ ಆ ರೀತಿ ಇದೆ. ಆದರೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ. ಪರಮೇಶ್ವರ್, ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲರಂತಹ ಹಿರಿಯ ನಾಯಕರೂ ಪಕ್ಷದಲ್ಲಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT