ಮಂಗಳವಾರ, ಜನವರಿ 18, 2022
15 °C

ಬೇನಾಮಿ ಜಾಹೀರಾತಿನಿಂದ ಕುಡಿಯುವ ನೀರು ದೊರಕುತ್ತದೆಯೇ: ಎಂ.ಬಿ.ಪಾಟೀಲ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಕೆದಾಟು ವಿಚಾರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ನಡುವಿನ ವಾಕ್ಸಮರ ಮುಂದುವರೆದಿದೆ. 

ಕಾರಜೋಳ ಅವರಿಗೆ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ನಾಯಕ ಎಂ.ಬಿ.ಪಾಟೀಲ್‌, ‘ನಾವು ಮಾಡಿದ್ದನ್ನು ಜನರ ಮುಂದಿಟ್ಟಿದ್ದೀವಿ. ನಮ್ಮ ಕಾರ್ಯವನ್ನು ಜಿ.ಮಾದೇಗೌಡ ಅಂತಹವರು ಶ್ಲಾಘಿಸಿದ್ದಾರೆ. ಅದನ್ನು ಬಿಡಿ. ಕಳೆದ ಮೂರು ವರ್ಷಗಳಿಂದ ನಿಮ್ಮ ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ದಯಮಾಡಿ ರಾಜ್ಯದ ಜನತೆಯ ಮುಂದಿಡಿ. 3 ವರ್ಷದ ತಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿಯಲ್ಲಿ ಮಾಡಿರುವ ಸಾಧನೆ ದೊಡ್ಡ ಶೂನ್ಯ ಬಿಟ್ಟು ಬೇರೇನಿಲ್ಲ’ ಎಂದು ಟೀಕಿಸಿದ್ದಾರೆ.

‘ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 3 ತಿಂಗಳಲ್ಲೇ ಚಾಲನೆ ದೊರೆಯಿತು. ನೀರಾವರಿ ಸಚಿವನಾಗಿ ಹೆಗಲೇರಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ ನನಗಿದೆ’ ಎಂದು ಪಾಟೀಲ ತಿಳಿಸಿದ್ದಾರೆ.

‘ಕೆಲವರ ಅನಗತ್ಯ ಟೀಕೆಗೆ ನೊಂದು ರಾಜ್ಯದ ಪರ ವಾದ ಮಂಡಿಸುತ್ತಿದ್ದ ನ್ಯಾಯವಾದಿ ಫಾಲಿ ನಾರಿಮನ್ ಮುನಿಸಿಕೊಂಡಾಗ ಮನವೊಲಿಸಿ ನ್ಯಾಯಾಲಯಕ್ಕೆ ಕರೆತಂದು ಸೂಕ್ತ ನ್ಯಾಯ ಮಂಡಿಸಿ ರಾಜ್ಯಕ್ಕೆ ಹೆಚ್ಚುವರಿ ನೀರು ಪಡೆದಿದ್ದು ಇತಿಹಾಸ. ತಿಂಗಳುಗಳ ಕಾಲ ದೆಹಲಿಯಲ್ಲಿ ವಾಸ್ತವ್ಯವಿದ್ದು ಕೋರ್ಟ್ ಕಲಾಪಗಳಲ್ಲಿ ಸ್ವತಃ ನಾನೇ ಭಾಗವಹಿಸಿದೆ’ ಎಂದೂ ಅವರು ಹೇಳಿದ್ದಾರೆ.

‘ತಮಿಳುನಾಡಿನ ವರದಿಗಾರರೊಬ್ಬರು ನನ್ನಂತಹ ದಿಟ್ಟ, ಬದ್ಧತೆ ಉಳ್ಳ ಸಚಿವರು ತಮಿಳುನಾಡಿಗೂ ಅಗತ್ಯವೆಂದು ಬರೆದಿದ್ದರು. ನೆಲ ಜಲ ಭಾಷೆ ವಿಷಯಗಳು ಬಂದಾಗ ರಾಜಕೀಯ ಪಕ್ಷಗಳು ಪರಸ್ಪರ ಕಚ್ಚಾಡದೆ ಸಕಾರಾತ್ಮಕವಾಗಿ ಹೆಜ್ಜೆಗಳನ್ನು ಹಾಕಿ ರಚನಾತ್ಮಕ ಕಾರ್ಯ ಮಾಡಬೇಕು’ ಎಂದು ಪಾಟೀಲ ಟ್ವೀಟ್‌ ಮಾಡಿದ್ದಾರೆ.

‘ಅಧಿಕಾರ ಸಿಕ್ಕಾಗ, ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡು ಕೆಲಸ ಮಾಡುವುದನ್ನು ಬಿಟ್ಟು, ಪುಟಗಟ್ಟಲೆ ಬೇನಾಮಿ ಜಾಹೀರಾತು ನೀಡಿದರೆ ಮೇಕೆದಾಟುವಿನಲ್ಲಿ ನೀರು ಸಂಗ್ರಹಗೊಂಡು, ಬೆಂಗಳೂರಿಗೆ ಕುಡಿಯುವ ನೀರು ದೊರಕುತ್ತದೆಯೇ?’ ಎಂದೂ ಪಾಟೀಲ ಪ್ರಶ್ನಿಸಿದ್ದಾರೆ.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು