ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದಯಾತ್ರೆ ಮುಗಿದರೂ ಹೋರಾಟ ನಿಲ್ಲದು: ಕಾಂಗ್ರೆಸ್

ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಆರಂಭ
Last Updated 27 ಫೆಬ್ರುವರಿ 2022, 22:00 IST
ಅಕ್ಷರ ಗಾತ್ರ

ರಾಮನಗರ: ಕಾವೇರಿ ನೀರು ಬಳಕೆಯ ಹಕ್ಕು ಜನರಿಗೆ ದೊರೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕರು ಭಾನುವಾರ ಇಲ್ಲಿ ಆರಂಭಗೊಂಡ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಯಲ್ಲಿ ಘೋಷಿಸಿದರು. ಬಿಜೆಪಿಯ ‘ಡಬಲ್‌ ಎಂಜಿನ್‌’ ಸರ್ಕಾರದ ವಿರುದ್ಧ ಹರಿಹಾಯ್ದರು.

ಇಲ್ಲಿನ ಟಿ.ಆರ್. ಮಿಲ್‌ ಮೈದಾನದಲ್ಲಿ ಪಾದಯಾತ್ರೆಗೆ ಮರು ಚಾಲನೆ ನೀಡಿದ ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ‘ಕಾವೇರಿ ನೀರಿನ ಪ್ರತಿ ಹನಿ ಮೇಲೂ ಈ ಪ್ರದೇಶದ ಜನರಿಗೆ ಹಕ್ಕು ಇದೆ. ಇದು ಚಲಾವಣೆ ಆಗಬೇಕಾದರೆ ಮೇಕೆದಾಟು ಅಣೆಕಟ್ಟೆ ನಿರ್ಮಾಣ ಆಗಬೇಕು. ಆದರೆ ಬೆಂಗಳೂರಿನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವೇ ಇದಕ್ಕೆ ಅಡ್ಡಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜನರು ತಮ್ಮ ನೀರಿನ ಹಕ್ಕಿಗಾಗಿ ನಡೆಸಿರುವ ಈ ಹೋರಾಟದಲ್ಲಿ ಯಶಸ್ಸು ಸಿಗುವವರೆಗೂ ಕಾಂಗ್ರೆಸ್ ಅವರ ಜೊತೆ ನಿಲ್ಲಲಿದೆ. ಪಾದಯಾತ್ರೆ ಮುಗಿದರೂ ಹೋರಾಟ ಮುಗಿಯದು’ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯದಲ್ಲಿಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಕೇಂದ್ರ ಪರಿಸರ ಸಚಿವಾಲಯದಿಂದ ಯೋಜನೆಗೆ ಅನುಮತಿ ಪಡೆದುಕೊಳ್ಳಲು ಆಗದಿರುವುದು ನಾಚಿಕೆಗೇಡು. ಅನುಮತಿ ನೀಡಲು ಕಾನೂನಿನ ಯಾವುದೇ ಅಡೆತಡೆಯೂ ಇಲ್ಲ. ತಮಿಳುನಾಡು ಸಹ ರಾಜಕೀಯಕ್ಕಾಗಿ ವಿರೋಧಿಸುತ್ತಿದೆಯೇ ಹೊರತು ಅದಕ್ಕೆ ಕಾನೂನಿನ ಬಲ ಇಲ್ಲ. ಆದರೂ ಬಿಜೆಪಿ ಜನರನ್ನು ಮಾತಿನಲ್ಲೇ ಮರುಳು ಮಾಡುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ‘ಕೇಂದ್ರದಿಂದ ಕೂಡಲೇ ಅನುಮತಿ ಕೊಡಿಸಬೇಕು. ಇಲ್ಲದೇ ಹೋದರೆ ಅದು ನಾಡಿನ ಜನರಿಗೆ ಮಾಡುವ ದ್ರೋಹ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ನಿಮ್ಮ ಡಬಲ್‌ ಎಂಜಿನ್‌ ಸರ್ಕಾರ ಚಾಲೂ ಮಾಡಿ ಎರಡು ದಿನಗಳಲ್ಲಿ ಅನುಮತಿ ಕೊಡಿಸಿ. ಆಗ ನಾವೇ ನಿಮಗೆ ಹಾರ ಹಾಕಿ, ಗುದ್ದಲಿ ಹಿಡಿದು ಯೋಜನೆಗೆ ಚಾಲನೆ ನೀಡಲು ಸಹಕರಿಸುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.

‘2050ರ ಹೊತ್ತಿಗೆ ಬೆಂಗಳೂರಿನ ಜನರಿಗೆ ಬೋರ್‌ವೆಲ್‌ ನೀರು ಸಹ ಸಿಗುವುದಿಲ್ಲ. ಹೀಗಾಗಿ ಜನರಿಗಾಗಿ ಈ ಯೋಜನೆ ಬೇಕೇ ಬೇಕು’ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಧ್ವನಿಗೂಡಿಸಿದರು.

ಮೇಕೆದಾಟು ಯೋಜನೆ ಕುರಿತು ಸಿದ್ದರಾಮಯ್ಯ ಬರೆದ ಕಿರುಹೊತ್ತಿಗೆಯನ್ನು ಸುರ್ಜೆವಾಲಾ ಬಿಡುಗಡೆ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್‌. ಧ್ರುವನಾರಾಯಣ, ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ, ಸಲೀಂ ಅಹಮ್ಮದ್, ರಾಮಲಿಂಗಾರೆಡ್ಡಿ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಸಂಸದ ಡಿ.ಕೆ. ಸುರೇಶ್, ಕಾಂಗ್ರೆಸ್ ಮುಖಂಡರಾದಕೆ.ಎಚ್. ಮುನಿಯಪ್ಪ, ಎಚ್‌.ಕೆ. ಪಾಟೀಲ, ಅಲ್ಲಂ ವೀರಭದ್ರಪ್ಪ, ಎಚ್‌.ಎಂ.ರೇವಣ್ಣ, ಪ್ರಿಯಾಂಕ್‌ ಖರ್ಗೆ, ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ಬಿ.ವಿ. ಶ್ರೀನಿವಾಸ್, ಆದಿಚುಂಚನಗಿರಿ ಪೀಠದ ಅರ್ಚಕರಹಳ್ಳಿ ಶಾಖಾಮಠದ ಅನ್ನದಾನೇಶ್ವರ ಸ್ವಾಮೀಜಿ,ಚಿತ್ರನಟ ‘ನೆನಪಿರಲಿ’ ಪ್ರೇಮ್‌ ಮತ್ತಿತರರು ವೇದಿಕೆಯಲ್ಲಿದ್ದರು.

ಉರಿಬಿಸಿಲಲ್ಲಿ ದಣಿದರು

ಬೆಳಿಗ್ಗೆ 9ಕ್ಕೆ ವೇದಿಕೆ ಕಾರ್ಯಕ್ರಮ ಆರಂಭ ಆಗಬೇಕಿತ್ತು. ಡಿ.ಕೆ. ಶಿವಕುಮಾರ್ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿ, ಪೀರನ್‌ ಷಾವಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಕಲಾಮೇಳಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಬಂದರು. ಆದರೆ ಸುರ್ಜೇವಾಲಾ ಮತ್ತು ಸಿದ್ದರಾಮಯ್ಯ ವೇದಿಕೆಗೆ ಬರುವುದು ತಡವಾಯಿತು. ಹೀಗಾಗಿ ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಆರಂಭಗೊಂಡಿತು. ಅಷ್ಟರಲ್ಲಿ ಸೂರ್ಯ ನೆತ್ತಿ ಮೇಲೆ ಬಂದಿದ್ದು, ಜನರು ಬೆವರು ಒರೆಸಿಕೊಳ್ಳುತ್ತಲೇ ಭಾಷಣ ಆಲಿಸಿದರು. ಇದನ್ನು ಅರಿತ ನಾಯಕರು ಚುಟುಕಾಗಿ ಭಾಷಣ ಮುಗಿಸಿ ನಡಿಗೆಗೆ ಅವಕಾಶ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT