ಶುಕ್ರವಾರ, ಜನವರಿ 21, 2022
30 °C

ಒಳನೋಟ: ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸರ್ಕಾರ, ಸಮಾಜದ ಸಂಘಟಿತ ಯತ್ನ ಅಗತ್ಯ

ಪ್ರೊ। ಸೆಂಥಿಲ್‌ ರೆಡ್ಡಿ Updated:

ಅಕ್ಷರ ಗಾತ್ರ : | |

ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ಸರ್ಕಾರ, ಸಮಾಜ ಮತ್ತು ಕೌಟುಂಬಿಕ ನೆಲೆಯ ಸಂಘಟಿತ ಪ್ರಯತ್ನದ ಅಗತ್ಯವಿದೆ. ಬಹುಪಾಲು ಆತ್ಮಹತ್ಯೆಗಳ ಪ್ರಕರಣಗಳಲ್ಲಿ  ಭಾವನಾತ್ಮಕ ಅಂಶಗಳೇ ಪ್ರೇರಣೆಯಾಗಿರುತ್ತವೆ. ಆರ್ಥಿಕ ಸಮಸ್ಯೆಗಳಲ್ಲಿ ವಿಪರೀತ ಸಾಲ ಮಾಡಿ ತೀರಿಸಲಾಗದೇ ಸ್ವಯಂ ಹತ್ಯೆಯ ಕೃತ್ಯಗಳಿಗೆ ಶರಣಾಗುತ್ತಾರೆ. ಆದರೆ, ಸರ್ಕಾರ, ಸಮಾಜ ಮತ್ತು ಕುಟುಂಬ ಸಂಘಟಿತ ಪ್ರಯತ್ನ ಹಾಕಿದಾಗ ಇದನ್ನು ತಡೆಯಲು ಸಾಧ್ಯ. 

ಆತ್ಮಹತ್ಯೆ ಪ್ರಕರಣಗಳನ್ನು ತಡೆಯಲು ವೃತ್ತಿಪರವಾಗಿ ತರಬೇತಿ ಪಡೆದ ವ್ಯಕ್ತಿಗಳ ತಂಡಗಳನ್ನು ರಚಿಸಬೇಕು ಮತ್ತು ಸಮುದಾಯದಲ್ಲಿ ಇದಕ್ಕೆ ಪೂರಕವಾಗಿ ನಿರಂತರ ಕಾರ್ಯಕ್ರಮಗಳನ್ನು ರೂಪಿಸಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಉದ್ದೇಶಿಸುವ ವ್ಯಕ್ತಿಗಳ ವರ್ತನೆಯಲ್ಲೇ ಅದರ ಸುಳಿವು ಸಿಗುತ್ತದೆ. ಅಂತಹ ವ್ಯಕ್ತಿಗಳನ್ನು ಪತ್ತೆ ಮಾಡಿ ಮನೋವೈಜ್ಞಾನಿಕವಾಗಿ ಶಮನಗೊಳಿಸುವ ಕೇಂದ್ರ ಅಥವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಮುಖ್ಯ. ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿ ನಿರಂತರ ಸಂಪರ್ಕ ಸಾಧಿಸಬೇಕು. ಸರ್ಕಾರವು ಆರೋಗ್ಯದ ಎಲ್ಲ ಹಂತಗಳಲ್ಲೂ ಮನೋಸಾಂತ್ವನ ನೀಡುವ ಕಾಯಂ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು.

ಆತ್ಮಹತ್ಯೆಯ ಮುನ್ಸೂಚನೆಗಳು, ಸಮಸ್ಯೆಯ ಅಂಶಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡುವುದೂ ಸೇರಿದಂತೆ ದೀರ್ಘಾವಧಿಯ ಕಾರ್ಯತಂತ್ರ ರೂಪಿಸುವುದು ಅಗತ್ಯ. ಕುಟುಂಬಗಳ ಆತ್ಮಹತ್ಯೆ ಪ್ರಕರಣಗಳಲ್ಲಿ ಒಬ್ಬ ಸದಸ್ಯ ಉಳಿದವರ ಆತ್ಮಹತ್ಯೆಗೆ ಪ್ರೇರೇಪಿಸುವುದು ಸಾಮಾನ್ಯ. ಎಲ್ಲರಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಉದಿಸುವುದಿಲ್ಲ. ಸಮಾಜವನ್ನು ಎದುರಿಸುವುದಕ್ಕೆ ಹಿಂಜರಿಕೆಯುಳ್ಳ ಮತ್ತು ಭಾವನಾತ್ಮಕವಾಗಿ ಟೊಳ್ಳಾದ ವ್ಯಕ್ತಿ ಕುಟುಂಬದ ಉಳಿದ ಸದಸ್ಯರನ್ನೂ ಪ್ರಭಾವಿಸಿ, ಸಾಮೂಹಿಕ ಆತ್ಮಹತ್ಯೆಗೆ ಪ್ರೇರೇಪಿಸುತ್ತಾನೆ. ಉಳಿದವರು ಅವರ ಹಾದಿಯನ್ನೇ ತುಳಿಯುತ್ತಾರೆ. ಆತ್ಮಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ನಿಮ್ಹಾನ್ಸ್‌ ಈ ವಿಚಾರದಲ್ಲಿ ಸಾಕಷ್ಟು ಕಾರ್ಯನಿರ್ವಹಿಸುತ್ತಿದೆ. ಜೀವನದಲ್ಲಿ ಏರುಪೇರುಗಳು ಇದ್ದೇ ಇರುತ್ತದೆ. ಸಂಕಷ್ಟಕ್ಕೆ ಸಿಲುಕಿದಾಗ ಅದರಿಂದ ಹೊರಗೆ ಬರಲು ಪ್ರಯತ್ನಿಸಬೇಕು. ಇದಕ್ಕೆ ತಜ್ಞರ ನೆರವು ಪಡೆಯುವುದರಲ್ಲಿ ತಪ್ಪಿಲ್ಲ. ಆರ್ಥಿಕ ಮತ್ತು ಕಾನೂನಿನ ಸಮಸ್ಯೆಗಳು ಇದ್ದರೆ, ಸರ್ಕಾರ ಅಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನೂ ಮಾಡಬೇಕು.

(ಸೈಕಿಯಾಟ್ರಿ, ಅಕ್ಯೂಟ್‌ ಕೇರ್‌ ಸರ್ವಿಸ್‌ ವಿಭಾಗ ಮುಖ್ಯಸ್ಥ, ನಿಮ್ಹಾನ್ಸ್‌ )

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು