ಸೋಮವಾರ, ಸೆಪ್ಟೆಂಬರ್ 26, 2022
20 °C
6 ಸಾವಿರಕ್ಕೂ ಹೆಚ್ಚು ನೌಕರರ ವಜಾಕ್ಕೆ ಆಕ್ರೋಶ l ₹1 ಲಕ್ಷ ಇಡುಗಂಟಿಗೆ ಆಗ್ರಹ

ಅಕ್ಷರ ದಾಸೋಹ l ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಿಸಿಯೂಟ ತಯಾರಿಸುವ 6 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು 60 ವರ್ಷ ವಯೋಮಿತಿ ನೆಪವೊಡ್ಡಿ ಏಕಾಏಕಿ ಕೆಲಸದಿಂದ ಬಿಡುಗಡೆ ಮಾಡಲಾಗಿದ್ದು, ಇವರಿಗೆ ನಿವೃತ್ತಿ ವೇತನ ಹಾಗೂ ₹ 1 ಲಕ್ಷ ಇಡುಗಂಟು ನೀಡಬೇಕು’ ಎಂದು ಒತ್ತಾಯಿಸಿ ಮಹಿಳೆಯರು ನಗರದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಮಂಗಳವಾರ ನಗರಕ್ಕೆ ಬಂದ ಮಹಿಳೆಯರು, ಸಿಐಟಿಯು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಕುಳಿತಿದ್ದಾರೆ. ಅಹೋರಾತ್ರಿಯೂ ಪ್ರತಿಭಟನೆ ಮುಂದುವರಿಯಿತು.

‘ಮಹಿಳೆಯರನ್ನು ಕೆಲಸದಿಂದ ಏಕಾಏಕಿ ಬಿಡುಗಡೆ ಮಾಡಿರುವುದನ್ನು ರದ್ದುಪಡಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಮುಖಂಡರ ನಿಯೋಗದ ಜೊತೆ ಮಾತುಕತೆ ನಡೆಸಿದ್ದ ಸರ್ಕಾರದ ಅಧಿಕಾರಿಗಳು, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಬೇಡಿಕೆ ಈಡೇರಿಲ್ಲ. ಹೀಗಾಗಿ, ಪುನಃ ಧರಣಿ ಆರಂಭಿಸಿದ್ದೇವೆ’ ಎಂದು ಪ್ರತಿಭಟನಕಾರರು ಹೇಳಿದ್ದಾರೆ.

‘ಮಹಿಳೆಯರನ್ನು ಕೆಲಸದಿಂದ ಬಿಡುಗಡೆ ಮಾಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ಅವರ ಕುಟುಂಬಗಳು ಕಷ್ಟಕ್ಕೆ ಸಿಲುಕಿವೆ. ಸದ್ಯ ಕೆಲಸ ಮಾಡುತ್ತಿರುವ ಮಹಿಳೆಯರಿಗೂ ಆತಂಕ ಶುರುವಾಗಿದ್ದು, ಸೇವಾ ಭದ್ರತೆಯೇ ಇಲ್ಲದಂತಾಗಿದೆ. ಬಿಡುಗಡೆ ಮಾಡಿರುವ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡುವವರೆಗೂ ಹಾಗೂ ಇತರೆ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದೂ ಪಟ್ಟು ಹಿಡಿದಿದ್ದಾರೆ.

‘ಮಕ್ಕಳಿಗೆ ಬಿಸಿಯೂಟ ತಯಾರಿಸುತ್ತಿರುವ ಮಹಿಳೆಯರು, ಶಿಕ್ಷಣದ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದ್ದಾರೆ. ಬಿಸಿಯೂಟ ತಯಾರಿಸುವ ಮಹಿಳೆಯರಿಗೆ ಬಜೆಟ್‌ನಲ್ಲಿ ಹೆಚ್ಚಳ ಮಾಡಿರುವ ₹ 1,000 ವೇತನವನ್ನು 2022ರ ಜನವರಿಯಿಂದ ಅನ್ವಯಗೊಳಿಸಬೇಕು. ಬಿಸಿಯೂಟ ಯೋಜನೆ ಕಾಯಂಗೊಳಿಸಬೇಕು. ಅಲ್ಲಿಯವರೆಗೂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ವೇತನ ನೀಡಬೇಕು. ಪ್ರತಿ ಶಾಲೆಗೆ ಇಬ್ಬರು ಅಡುಗೆಯವರನ್ನು ನಿಯೋಜಿಸಬೇಕು. ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು’ ಎಂದೂ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು