ಸೋಮವಾರ, ಮೇ 16, 2022
21 °C
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ

ಗಣಿಗಾರಿಕೆ ಪ್ರಸ್ತಾವಸನೆಗೆ 'ಏಕಗವಾಕ್ಷಿ ಪದ್ಧತಿ'ಯಡಿ ಒಪ್ಪಿಗೆ: ಮುರುಗೇಶ್ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು: ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆಗಳಿಗೆ ಸುಲಭವಾಗಿ ಹಾಗೂ ಸರಳವಾಗಿ ಅನುಮೋದನೆ ನೀಡಲು ಸಾಧ್ಯವಾಗುವಂಥ ‘ಏಕಗವಾಕ್ಷಿ’ ಪದ್ಧತಿ ಅಳವಡಿಸಲು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮುಂದಾಗಿದ್ದಾರೆ.

ಆ ಮೂಲಕ, ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ದಿಮೆದಾರರಿಗೆ ಸುಲಭವಾಗಿ ಹಾಗೂ ಸುಲಲಿತವಾಗಿ ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗುವಂತೆ ಈ ಪದ್ಧತಿ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ.

ಇಲಾಖೆಯ ಅಧಿಕಾರಿಗಳು, ಉದ್ಯಮಿಗಳ ಜೊತೆ ಸಭೆ ನಡೆಸಿದ ಸಚಿವರು, ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

‘ಅನೇಕ ವರ್ಷಗಳಿಂದ ಅನುಮೋದನೆಗಾಗಿ ಕಾಯುತ್ತಿರುವ ಪ್ರಸ್ತಾವನೆಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಬೇಕು. ಉದ್ದಿಮೆದಾರರ ಮನೆ ಬಾಗಿಲಿಗೆ ನಾವೇ ಹೋಗಬೇಕೆಂಬುದು ನಮ್ಮ ಗುರಿಯಾಗಿದೆ' ಎಂದು ಸಚಿವರು ಹೇಳಿದರು.

‘ಏಕಗವಾಕ್ಷಿ ಪದ್ಧತಿ ಜಾರಿ ಮಾಡಿದರೆ, ಉದ್ದಿಮೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಇಲಾಖೆಯಿಂದ ಇಲಾಖೆಗೆ ಪರವಾನಗಿ ಪಡೆಯಲು ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಯನ್ನು ನಿವಾರಣೆ ಮಾಡಬೇಕಾದರೆ ಈ ಪದ್ಧತಿ ಜಾರಿ ಮಾಡುವುದೇ ಏಕೈಕ ಪರಿಹಾರ’ ಎಂದು ಸಚಿವರು ಅಭಿಪ್ರಾಯಪಟ್ಟರು.

ಯೋಜನೆಗಳನ್ನು ಅನುಮೋದಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಏಕಗವಾಕ್ಷಿ ಪದ್ಧತಿ ಜಾರಿ ಮಾಡಬೇಕು. ₹ 5 ಕೋಟಿಗಿಂತ ಕಡಿಮೆ ಮೊತ್ತದ ಪ್ರಸ್ತಾವನೆಗೆ ಜಿಲ್ಲಾ ಮಟ್ಟದಲ್ಲಿ ಸಮಿತಿಯ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿ ಅನುಮೋದನೆ ನೀಡಬೇಕು. ₹ 5 ಕೋಟಿಗಿಂತ ಹೆಚ್ಚಿನ ಮೊತ್ತದ ಪ್ರಸ್ತಾವನೆಗಳಿಗೆ ರಾಜ್ಯಮಟ್ಟದ ಸಮಿತಿಗೆ ಮುಖ್ಯಸ್ಥರಾಗಿರುವ ಸಚಿವರು' ಒಪ್ಪಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಮರಳು, ಕಲ್ಲು ಮತ್ತು ಗ್ರಾನೈಟ್‍ನಂಥ ಸಣ್ಣ ಉದ್ದಿಮೆದಾರರು ನಿರಪೇಕ್ಷಣಾ ಪತ್ರವನ್ನು (ಎನ್‍ಒಸಿ) ನಾಲ್ಕು ಇಲಾಖೆಗಳಿಂದ ಪಡೆಯಬೇಕು. ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕು’ ಎಂದೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ಉದ್ದಿಮೆದಾರರು ಕಂದಾಯ ಇಲಾಖೆ (ಜಿಲ್ಲಾಧಿಕಾರಿ), ಅರಣ್ಯ (ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ), ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್‍ಒಸಿ ಪತ್ರ ಪಡೆಯಬೇಕು. ಪಟ್ಟಾ ಭೂಮಿಯಲ್ಲಿ ತಹಶೀಲ್ದಾರ್ ಅವರಿಂದ ಅನುಮತಿ ಪಡೆಯಬೇಕು. ಯೋಜನೆಯು 25 ಹೆಕ್ಟೇರ್‌ಗಿಂತ ಕಡಿಮೆಯಿದ್ದರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪತ್ರ ಪಡೆಯಬೇಕು. 25 ಹೆಕ್ಟೇರ್‌ಗಿಂತ ಹೆಚ್ಚಿದ್ದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆಯಬೇಕು. ಪರವಾನಗಿ ಪಡೆಯಲು ಹಲವು ವರ್ಷಗಳು ತಗಲುತ್ತಿದೆ. ಇದನ್ನು ತಪ್ಪಿಸಲು ಏಕಗವಾಕ್ಷಿ ಪದ್ಧತಿ ಜಾರಿ ಅಗತ್ಯವಿದೆ’ ಸಚಿವರು ಪ್ರತಿಪಾದಿಸಿದರು.

ಏಕಗವಾಕ್ಷಿ ಪದ್ಧತಿಯಲ್ಲಿ ಸಮಿತಿ ಅನುಮೋದಿಸಿದ ಯೋಜನೆಗಳಿಗೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಾಲದ ಸೌಲಭ್ಯ ಒದಗಿಸಲಿದೆ’ ಎಂದೂ ಸಚಿವರು ಹೇಳಿದರು.

***

ಏಕಗವಾಕ್ಷಿ ಪದ್ದತಿಯಲ್ಲಿ ಸಮಿತಿ  ಅನುಮೋದಿಸಿದ ಯೋಜನೆಗಳಿಗೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಾಲದ ಸೌಲಭ್ಯ ಒದಗಿಸಲಿದೆ

- ಮುರುಗೇಶ ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು