ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಮಹಾದೇವಿ ಮಹಿಳಾ ವಿವಿ ಮುಚ್ಚುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥನಾರಾಯಣ

Last Updated 24 ಜನವರಿ 2022, 10:35 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಜಯಪುರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ಈ ವಿಶ್ವವಿದ್ಯಾಲಯವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದರು.

ಅಲ್ಲದೆ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂತನ ಕ್ಯಾಂಪಸ್‌ ನಿರ್ಮಾಣ ಮಾಡುವುದರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದೂ ಹೇಳಿದರು.

ಸಮಕಾಲೀನ ಜಗತ್ತಿನಲ್ಲಿ ಮಹಿಳೆಯರ ಕುರಿತ ಅಧ್ಯಯನ ವಿಸ್ತೃತವಾಗಿ ನಡೆಯಬೇಕಾಗಿದೆ. ಅದಕ್ಕೆ ತಕ್ಕಂತೆ ಮಹಿಳಾ ವಿಶ್ವವಿದ್ಯಾಲಯದ ಚಟುವಟಿಕೆಯನ್ನು ವಿಸ್ತರಿಸುವ ಕುರಿತು ಸಮಾಲೋಚಿಸಲಾಗುತ್ತಿದೆ. ಆದರೆ, ಕೆಲವರು ವಿನಾ ಕಾರಣ ಗುಲ್ಲೆಬ್ಬಿಸುತ್ತಿರುವುದು ವಿಷಾದನೀಯ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣ ಕುರಿತಂತೆ ಕೇಳಿದ ಪ್ರಶ್ನೆಗೆ ಅವರು, ಈ ವಿಶ್ವವಿದ್ಯಾಲಯ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆದರೆ, ಅದಕ್ಕೊಂದು ಸ್ವತಂತ್ರ ಮತ್ತು ಸುಸಜ್ಜಿತ ಕ್ಯಾಂಪಸ್ ಇರಲಿಲ್ಲ. ನಮ್ಮ ಸರ್ಕಾರ ಅದನ್ನು ಮಾಡುತ್ತಿದೆ ಅಷ್ಟೆ. ಮ್ಯಾಕ್ಸ್ ಮುಲ್ಲರ್ ಭವನಕ್ಕೆ ಹೋಗಿ ನೋಡಿದರೆ ಸಂಸ್ಕೃತ ಅಧ್ಯಯನವನ್ನು ನಾವು ಏಕೆ ಮಾಡಬೇಕು ಎನ್ನುವುದು ಗೊತ್ತಾಗುತ್ತದೆ ಎಂದರು.

ಸ್ವಾಗತಿಸಲೂ ಇಲ್ಲ: ಕನ್ನಡಕ್ಕೆ ನಮ್ಮ ಸರ್ಕಾರ ಕೊಟ್ಟಿರುವಷ್ಟು ಆದ್ಯತೆಯನ್ನು ಯಾರೂ ಕೊಟ್ಟಿರಲಿಲ್ಲ. ಪದವಿಯಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿದಾಗ ನಮ್ಮ ಕನ್ನಡ ಹೋರಾಟಗಾರರು ಕನಿಷ್ಠಪಕ್ಷ ಅದನ್ನು ಸ್ವಾಗತಿಸಲೂ ಇಲ್ಲ. ಈಗ ಹೈಕೋರ್ಟ್ ತಡೆ ನೀಡಿದೆ. ಅದನ್ನು ಪುರಸ್ಕರಿಸಿ ನಾವು ಕನ್ನಡ ಕಲಿಕೆಯನ್ನು ಸದ್ಯಕ್ಕೆ ತಡೆಹಿಡಿದಿದ್ದೇವೆ ಎಂದು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಕೋವಿಡ್ ಸಮಸ್ಯೆಯ ಕಾರಣ ಪ್ರಸಾರಾಂಗ ಸ್ಥಗಿತವಾಗಿದೆ. ಇದರಿಂದಾಗಿ, ಅವರಿಗೆ ವರ್ಷಕ್ಕೆ ಬರುತ್ತಿದ್ದ ₹ 4 ಕೋಟಿ ಆದಾಯ ನಿಂತುಹೋಗಿದೆ. ಆ ವಿಶ್ವವಿದ್ಯಾಲಯಕ್ಕೆ ಅನುದಾನ ಕೊಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ ಎಂದು ಅಶ್ವತ್ಥನಾರಾಯಣ ಹೇಳಿದರು.

60 ಸಾವಿರಕ್ಕೂ ಹೆಚ್ಚು ಅರ್ಜಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪ್ರಕ್ರಿಯೆಯ ಮುಂದಿನ ಹೆಜ್ಜೆಗಳನ್ನು ಇನ್ನು ಎರಡು ದಿನಗಳಲ್ಲಿ ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಅತಿಥಿ ಉಪನ್ಯಾಸಕರ ವೇತನವನ್ನು ಎರಡೂವರೆ ಪಟ್ಟಿಗಿಂತಲೂ ಹೆಚ್ಚಿಸಲಾಗಿದೆ. ಈ ಹಂತದಲ್ಲಿ ಅವರ ಸಂಘಟನೆಗಳು ಮತ್ತು ವಿಧಾನಪರಿಷತ್ತಿನ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿತ್ತು. ಆದರೂ ಅತಿಥಿ ಉಪನ್ಯಾಸಕರು ಮುಷ್ಕರ ಮುಂದುವರಿಸುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT