ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಈಶ್ವರಪ್ಪ ಸಿಟ್ಟಿಗೆ ₹65 ಕೋಟಿ ಮೂಲ

ಮರಿಸ್ವಾಮಿಗೆ ನೇರ ಅನುದಾನ ಬಿಡುಗಡೆ ಮಾಡಿದ ಬಿಎಸ್‌ವೈ
Last Updated 2 ಏಪ್ರಿಲ್ 2021, 19:27 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಸಂಬಂಧಿಯೇ ಅಧ್ಯಕ್ಷರಾಗಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಗೆ ‘ತುಂಡು ಗುತ್ತಿಗೆ’ ಆಧಾರದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನೇರವಾಗಿ ₹ 65 ಕೋಟಿ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದೇಶಿಸಿದ್ದೇ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಸಿಟ್ಟಿನ ಮೂಲ.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಮರಿಸ್ವಾಮಿ ಸಲ್ಲಿಸಿದ ಕೋರಿಕೆಯನ್ನು ಆಧರಿಸಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ₹ 65 ಕೋಟಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಆದೇಶಿಸಿದ್ದರು. ಈಶ್ವರಪ್ಪ ಬಾಕಿ ಇರಿಸಿದ್ದ ಕಡತವನ್ನು ತರಿಸಿಕೊಂಡು ಯಡಿಯೂರಪ್ಪ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿರುವುದು ಇಬ್ಬರ ನಡುವಿನ ಸಂಘರ್ಷಕ್ಕೆ ಮೂಲ ಕಾರಣ.

ನಿಯಮಗಳ ಪ್ರಕಾರ, ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಪಂಚಾಯಿತಿಯ ಒಪ್ಪಿಗೆ ಪಡೆಯಬೇಕು.

ಆ ಬಳಿಕ ಅದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅನುಮೋದನೆ ಪಡೆಯಬೇಕು. ಆ ನಂತರವೇ ಅನುದಾನ ಬಿಡುಗಡೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಬೇಕು.

ಆದರೆ, ಈ ಪ್ರಕರಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಲ್ಲಿಸಿದ್ದ ಕ್ರಿಯಾ ಯೋಜನೆಯನ್ನು ಈಶ್ವರಪ್ಪ ತಡೆ ಹಿಡಿದಿದ್ದರು. ಯಡಿಯೂರಪ್ಪ ಅವರನ್ನು ಭೇಟಿಮಾಡಿ ಈ ವಿಷಯವನ್ನು ತಿಳಿಸಿದ್ದ ಮರಿಸ್ವಾಮಿ, ಕ್ರಿಯಾ ಯೋಜನೆಗೆ ಅನುಮೋದನೆ ದೊರಕಿಸಿ, ಅನುದಾನ ಒದಗಿಸುವಂತೆ ಒತ್ತಾಯಿಸಿದ್ದರು.

ತಕ್ಷಣವೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕಡತ ತರಿಸಿಕೊಂಡಿದ್ದ ಮುಖ್ಯಮಂತ್ರಿ, ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದರು. ಅನುದಾನ ಬಿಡುಗಡೆ ಮಾಡಿ, ಕಾಮಗಾರಿಗಳಿಗೆ ಮಂಜೂರಾತಿ ಆದೇಶವನ್ನೂ ಹೊರಡಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಆದೇಶಿಸಿದ್ದರು. ಆ ಬಳಿಕ ಸಚಿವರ ಗಮನಕ್ಕೆ ತರುವಂತೆಯೂ ಅಧಿಕೃತ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದರು.

‘ತುಂಡು ಗುತ್ತಿಗೆ’ಗೆ ಒಪ್ಪಿಗೆ: ₹ 65 ಕೋಟಿ ಅನುದಾನದಲ್ಲಿ 1,019 ಕಾಮಗಾರಿಗಳನ್ನು ‘ತುಂಡು ಗುತ್ತಿಗೆ’ ಆಧಾರದಲ್ಲಿ ಕೈಗೊಳ್ಳಲು ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದರು. ಅನುದಾನವನ್ನು ₹ 5 ಲಕ್ಷಕ್ಕಿಂತ ಕಡಿಮೆ ಮೊತ್ತಕ್ಕೆ ವಿಭಜಿಸಿ, ಟೆಂಡರ್‌ ನಡೆಸದೇ ನೇರವಾಗಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ವಹಿಸಲು ಷರತ್ತುಗಳನ್ನು ಸಡಿಲಿಸುವುದಕ್ಕೂ ಯಡಿಯೂರಪ್ಪ ಆದೇಶಿಸಿದ್ದರು.

ಮುಖ್ಯಮಂತ್ರಿ ಆದೇಶದಂತೆ ಕಾಮಗಾರಿಗಳಿಗೆ ಮಂಜೂರಾತಿ ಆದೇಶ ನೀಡಲಾಗಿತ್ತು. ಆ ಬಳಿಕ ವಿವಿಧೆಡೆ ಕಾಮಗಾರಿಗಳಿಗೆ ಚಾಲನೆಯನ್ನೂ ನೀಡಲಾಗಿತ್ತು. ನಂತರ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿರುವ ಈಶ್ವರಪ್ಪ, ₹ 65 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಡೆ ಹಿಡಿದಿರು
ವುದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ಅವರು, ಈ ಪ್ರಕರಣದ ಕುರಿತ ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

‘ರಾಜ್ಯದಲ್ಲಿ ಅನೇಕ ಹಿಂದುಳಿದ ಜಿಲ್ಲೆಗಳಿದ್ದರೂ ಆ ಜಿಲ್ಲೆಗೆ ನಯಾಪೈಸೆ ಬಿಡುಗಡೆ ಮಾಡದ ಯಡಿಯೂರಪ್ಪ, ಬೆಂಗಳೂರು ನಗರ ಒಂದೇ ಜಿಲ್ಲೆಗೆ ₹65 ಕೋಟಿ ಕೊಟ್ಟಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿರುವ ಈಶ್ವರಪ್ಪ, ‘ಅನುಮೋದನೆಗೊಂಡಿರುವ ಬಜೆಟ್ ಅನುದಾನವನ್ನು ಇಲಾಖೆಗೆ ಹಂಚಿಕೆ ಮಾಡಿದ ಮೇಲೆ ಖರ್ಚು ಮಾಡುವುದು ಇಲಾಖೆಯ ಹೊಣೆಗಾರಿಕೆ. ಈ ವಿಷಯದಲ್ಲಿ ಮುಖ್ಯಮಂತ್ರಿ ನಿಯಮ ಮತ್ತು ಪ್ರಕ್ರಿಯೆಯನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ನಾನು ಪ್ರಶ್ನಿಸಿದ್ದೇನೆಯೇ ವಿನಃ ಬಂಡಾಯ ಎದ್ದಿಲ್ಲ’ ಎಂದರು.

ಎರಡು ದಿನಗಳಲ್ಲಿ ಪರಿಹಾರ: ನಳಿನ್‌

ಮಂಗಳೂರು: ‘ಈಶ್ವರಪ್ಪ ನನಗೂ ಪತ್ರ ಬರೆದಿದ್ದಾರೆ. ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಪಕ್ಷದ ಚೌಕಟ್ಟಿನಲ್ಲಿ ಎರಡು ದಿನದೊಳಗೆ ಸಮಸ್ಯೆಯನ್ನು ನಾನೇ ಪರಿಹಾರ ಮಾಡುತ್ತೇನೆ’ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಶುಕ್ರವಾರ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಕೆ.ಎಸ್‌. ಈಶ್ವರಪ್ಪ ಅವರ ವಿಚಾರ ವಿಭಿನ್ನವಾದುದು. ಯತ್ನಾಳ ಅವರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದ್ದು, ಅವರು ಉತ್ತರಿಸುತ್ತಾರೆ. ಈಶ್ವರಪ್ಪ ಪತ್ರದಲ್ಲಿ ಉಲ್ಲೇಖಿಸಿರುವುದು ಅನುದಾನದ ಬಗ್ಗೆ. ಈ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮಾತುಕತೆ ನಡೆಸಿದ್ದಾರೆ’ ಎಂದರು.

ನಿವೃತ್ತ ಅಧಿಕಾರಿಯ ಸೇವೆ ವಿಸ್ತರಣೆಗೆ ಆದೇಶ:

ಬೆಂಗಳೂರು: ಮಾರ್ಚ್‌ 31ರಂದು ವಯೋನಿವೃತ್ತಿ ಹೊಂದಿರುವ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದ ಶಿವಮೊಗ್ಗ ಉ‍ಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪೀರ್‌ ಪಾಷ ಅವರ ಸೇವಾ ಅವಧಿಯನ್ನು ಒಂದು ವರ್ಷ ವಿಸ್ತರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಸಿಗಂದೂರು ಸೇತುವೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಪೀರ್‌ ಪಾಷ ಸೇವಾ ಅವಧಿ ವಿಸ್ತರಿಸುವುದು ಅಗತ್ಯ ಎಂದು ಮಾ.29ರಂದು ಯಡಿಯೂರಪ್ಪ ಅವರು ತಮ್ಮ ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

ಪಾಷ ಮಾ.31ರಂದೇ ಸೇವೆಯಿಂದ ನಿವೃತ್ತರಾಗಿದ್ದು, ಕಚೇರಿಯ ಕಾರ್ಯಭಾರವನ್ನೂ ಬೇರೆ ಅಧಿಕಾರಿಗೆ ವಹಿಸಿಕೊಟ್ಟಿದ್ದಾರೆ. ಆದರೆ, ಮುಖ್ಯಮಂತ್ರಿಯವರ ಟಿಪ್ಪಣಿ ಆಧರಿಸಿ ಒಂದು ವರ್ಷ ಅವರ ಸೇವಾ ಅವಧಿ ವಿಸ್ತರಿಸಲು ಹಣಕಾಸು ಇಲಾಖೆಯ ಒಪ್ಪಿಗೆ ಕೋರಿ ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಇದು ರಾಜ್ಯ ಸರ್ಕಾರಿ ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಸಿಗಂದೂರಿನಲ್ಲಿ 1.8 ಕಿ.ಮೀ. ಉದ್ದದ ಸೇತುವೆ ನಿರ್ಮಿಸಲಾಗುತ್ತಿದೆ. ಕಾಮಗಾರಿಯ ಅಂದಾಜು ಪಟ್ಟಿ, ಯೋಜನಾ ವರದಿ ತಯಾರಿಸುವ ಹಂತದಿಂದಲೂ ಪೀರ್‌ ಪಾಷ ಅಲ್ಲಿ ಕೆಲಸ ಮಾಡಿದ್ದಾರೆ. ದೊಡ್ಡ ಕಾಮಗಾರಿ ನಿರ್ವಹಿಸಿದ ಅನುಭವಿಗಳು ಅಗತ್ಯವಿರುವ ಕಾರಣದಿಂದ ಅವರ ಸೇವಾ ಅವಧಿ ಮುಂದುವರಿಸಲು ನಿರ್ಧರಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಆದರೆ, ಪೀರ್‌ ಪಾಷ ತಮ್ಮ ಸೇವಾ ಅವಧಿಯ ಹೆಚ್ಚಿನ ಕಾಲವನ್ನು ಶಿವಮೊಗ್ಗ ನಗರಸಭೆಯಲ್ಲೇ ಕಳೆದಿದ್ದರು. ಮೂರು ವರ್ಷಗಳಿಂದ ಈಚೆಗೆ ರಾಷ್ಟ್ರೀಯ ಹೆದ್ದಾರಿ ವಲಯದ ಶಿವಮೊಗ್ಗ ಉಪ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT