ಶುಕ್ರವಾರ, ಜನವರಿ 21, 2022
29 °C
ಯಾವ ಸಚಿವರೂ ಪೋಸ್ಟ್‌ ಮ್ಯಾನ್ ಅಲ್ಲ

ನಳಿನ್, ರವಿ ಮಾತಿನಂತೆ ಅನುದಾನಕ್ಕೆ ತಡೆ: ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಿಯಮ ಉಲ್ಲಂಘಿಸಿ ಮುಖ್ಯಮಂತ್ರಿ ಬಿಡುಗಡೆ ಮಾಡಿದ್ದ ಅನುದಾನವನ್ನು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೂಚನೆ ಅನ್ವಯ ಅನುದಾನ ತಡೆಹಿಡಿದಿದ್ದೇನೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

‘ನಿಯಮ ಉಲ್ಲಂಘಿಸಿ ಅನುದಾನ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಕ್ರಮದ ಬಗ್ಗೆ ಪಕ್ಷದ ಮೂವರು ಪ್ರಮುಖರ ಗಮನಕ್ಕೆ ತಂದಿದ್ದೆ. ಅವರು ಮಾತಿನಂತೆ ನಡೆದುಕೊಂಡಿದ್ದೇನೆ’ ಎಂದು ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ವಿವರಿಸಿದರು.

‘ಅನುದಾನ ಹಂಚಿಕೆಯು ಮುಖ್ಯಮಂತ್ರಿಯ ಪರಮಾಧಿಕಾರ ನಿಜ. ಒಂದು ಇಲಾಖೆಗೆ ಹಂಚಿಕೆಯಾದ ಬಳಿಕ ಅದನ್ನು ಬಿಡುಗಡೆ ಮಾಡುವುದು ಆಯಾ ಇಲಾಖೆಯ ಮಂತ್ರಿಯ ಜವಾಬ್ದಾರಿ. ಯಾವುದೇ ಇಲಾಖೆಯ ಸಚಿವರೂ ಪೋಸ್ಟ್‌ಮ್ಯಾನ್ ಅಲ್ಲ’ ಎಂದರು.

‘ಇಲಾಖೆಯ ದುಡ್ಡನ್ನು ಕೆಲವು ಶಾಸಕರಿಗೆ ನೀಡಲು ಮುಂದಾಗಿರುವ ಮುಖ್ಯಮಂತ್ರಿ ಕ್ರಮವನ್ನು ಸ್ವಾಗತಿಸು
ತ್ತೇನೆ. ಅವರು ಯಾರಿಗೆ ಕೊಡಲು ಬಯಸಿದ್ದಾರೋ, ಒಂದು ಪೈಸೆಯೂ ವ್ಯತ್ಯಾಸವಾಗದಂತೆ ಅಷ್ಟೂ ದುಡ್ಡನ್ನು ಅವರಿಗೇ ಕೊಡಲು ವ್ಯವಸ್ಥೆ ಮಾಡುತ್ತೇವೆ. ಆದರೆ ಕಾನೂನಿನ ಪ್ರಕಾರ, ನನ್ನ ಇಲಾಖೆಯ ಮೂಲಕವೇ ಬಿಡುಗಡೆ ಆಗಲಿ’ ಎಂದರು.

‘ಇದು ನನ್ನ ಹಾಗೂ ಮುಖ್ಯಮಂತ್ರಿ ನಡುವಿನ ವೈಯಕ್ತಿಕ ವಿಚಾರವಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಅನುದಾನವನ್ನು ನನ್ನ ಗಮನಕ್ಕೆ ತಾರದೆ ನೇರವಾಗಿ ಶಾಸಕರಿಗೆ ಬಿಡುಗಡೆ ಮಾಡಿದ್ದಕ್ಕಾಗಿಯಷ್ಟೇ ಅಸಮಾಧಾನ ವ್ಯಕ್ತಪಡಿಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರು ಅಥವಾ ಕೇಂದ್ರದ ನಾಯಕರ ಬಳಿ ದೂರು ಕೊಟ್ಟಿಲ್ಲ. ಹಲವು ವರ್ಷ ಗುಜರಾತ್‌ನ ಹಣಕಾಸು ಸಚಿವರಾಗಿದ್ದ, ರಾಜ್ಯಪಾಲ ವಜುಭಾಯಿವಾಲಾ ಅವರ ಸಲಹೆ ಪಡೆದಿದ್ದೇನೆ. ಈ ಬಗ್ಗೆ ಅರುಣ್‌ ಸಿಂಗ್,ನಳಿನ್‌ ಕುಮಾರ್‌ ಕಟೀಲ್, ಸಿ.ಟಿ.ರವಿ ಗಮನಕ್ಕೂ ತಂದಿದ್ದೆ. ನಿಯಮ ಉಲ್ಲಂಘಿಸಿ ಹಂಚಿಕೆಯಾಗಿರುವ ಅನುದಾನವನ್ನು ತಕ್ಷಣವೇ ತಡೆ ಹಿಡಿಯುವಂತೆ ಈ ಮೂವರೂ ನನಗೆ ಸೂಚಿಸಿದ್ದರು. ಅವರ ಮಾತಿನಂತೆ ತಡೆಹಿಡಿದಿದ್ದೇನೆ’ ಎಂದರು.

‘ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿ ಮನವಿ ಮೇರೆಗೆ ₹ 65 ಕೋಟಿ ಅನುದಾನ
ವನ್ನು ನೇರವಾಗಿ ಆ ಜಿಲ್ಲಾ ಪಂಚಾಯಿತಿಯೊಂದಕ್ಕೇ ನೀಡಲಾಗಿದೆ. ಇದನ್ನೂ ನಾನು ತಡೆಹಿಡಿದಿದ್ದೆ. ಆದರೆ, ಅದಾದ ನಂತರವೂ ಹಣಕಾಸು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು, ಹಣ ಬಿಡುಗಡೆಗೆ ಆದೇಶ ಮಾಡಿದ್ದಾರೆ. ಇಲಾಖೆಗೆ ಬಂದ ಹಣವನ್ನು ಮುಖ್ಯಮಂತ್ರಿಯೇ ಹಂಚಿಕೆ ಮಾಡುವುದಾದರೆ ಸಚಿವರು ಇರುವುದು ಏಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರಿಗೂ ಹೆದರಲ್ಲ: ‘ನನ್ನ ಜೀವಮಾನದಲ್ಲಿ ಒಮ್ಮೆಯೂ ರೆಬೆಲ್‌ ಆಗಿಲ್ಲ. ಆದರೆ, ನ್ಯಾಯವನ್ನು ಎಂದಿಗೂ ಬಿಡುವುದಿಲ್ಲ. ನಾನು ಈಗಲೂ ಪಕ್ಷಕ್ಕೆ ನಿಷ್ಠನಾಗಿಯೇ ಇದ್ದೇನೆ. ನಾನು ರಾಜ್ಯಪಾಲರಿಗೆ ಪತ್ರ ಬರೆದಿರುವುದಕ್ಕೆ ಕೆಲವು ಸಚಿವರು ಹಾಗೂ ಶಾಸಕರು ಪತ್ರಿಕಾಗೋಷ್ಠಿ ಮಾಡಿ ಟೀಕಿಸಿದ್ದು, ನನ್ನ ವಿರುದ್ಧ ಸಹಿ ಸಂಗ್ರಹ ಮಾಡುವುದಾಗಿಯೂ ಹೇಳಿದ್ದಾರೆ. ವಜಾ ಮಾಡುವ ಮತ್ತು ರಾಜೀನಾಮೆಯ ಮಾತುಗಳೂ ಹರಿದಾಡುತ್ತಿವೆ. ಇಂತಹ ಬೆದರಿಕೆಗೆ ನಾನು ಬಗ್ಗುವವನಲ್ಲ’ ಎಂದು ತಿರುಗೇಟು ನೀಡಿದರು.

ಪಕ್ಷದ ಅನೇಕ ಸಚಿವರು, ಶಾಸಕರು, ಸಂಸದರು ತಮಗೆ ಕರೆ ಮಾಡಿ, ಬೆಂಬಲ ವ್ಯಕ್ತಪಡಿಸಿದ್ದಾಗಿ ತಿಳಿಸಿದ ಈಶ್ವರಪ್ಪ, ‘ನೀವು ಗಟ್ಟಿ ನಿಲುವು ತೆಗೆದುಕೊಂಡಿದ್ದು, ನಿಮ್ಮ ಜತೆ ಇದ್ದೇವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ಹೇಳಿದರು.

‘ಆಪ್ತರ ಮಾತು ಕೇಳಿರಬಹುದು’

‘ಯಡಿಯೂರಪ್ಪ ಕೆಲವರನ್ನು ಬೇಗನೇ ನಂಬುತ್ತಾರೆ. ಅವರು ಕೆಜೆಪಿ ಕಟ್ಟಲು ಮುಂದಾದಾಗ ನಾನು ಬೇಡವೆಂದಿದ್ದೆ. ಆದರೆ, ಅವರದೇ ಆಪ್ತ ವಲಯದ ಕೆಲವರು ಅಂದು ಅವರನ್ನು ದಾರಿ ತಪ್ಪಿಸಿದ್ದರು. ಕೆಲವರ ಮಾತು ಕೇಳಿ ದಾರಿ ತಪ್ಪಿದ್ದಾಗಿ, ಯಡಿಯೂರಪ್ಪ ಆ ಬಳಿಕ ನನ್ನಲ್ಲಿ ಹೇಳಿದ್ದರು. ಈಗಲೂ ಅಂಥ ಆಪ್ತರ ಮಾತು ಕೇಳಿಯೇ ನೇರವಾಗಿ ಹಣ ಬಿಡುಗಡೆ ಮಾಡಿರಬಹುದು ಎಂಬುದು ನನ್ನ ಭಾವನೆ’ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು