ಶನಿವಾರ, ಸೆಪ್ಟೆಂಬರ್ 25, 2021
29 °C

ಕುಮಾರಕೃಪಾ ಅತಿಥಿ ಗೃಹಕ್ಕೆ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮೊದಲು ಕುಮಾರಕೃಪಾ ಅತಿಥಿ ಗೃಹಕ್ಕೆ ಬಂದು ಅಲ್ಲಿ ವಾಸ್ತವ್ಯ ಹೂಡಿದ್ದ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ವೀಕ್ಷರಾಗಿ ಬಂದಿದ್ದ ಧರ್ಮೇಂದ್ರ ಪ್ರಧಾನ್, ಕಿಷನ್ ರೆಡ್ಡಿ ಜೊತೆ ಮಾತುಕತೆ ನಡೆಸಿದರು.

ಅದೇ ವೇಳೆ ಅಲ್ಲಿಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವು ನಾಯಕರು ಬಂದರು. ಅಲ್ಲದೆ, ಮುರುಗೇಶ್ ನಿರಾಣಿ, ಎಸ್.ಟಿ, ಸೋಮಶೇಖರ್, ಸುಧಾಕರ್ ಕೂಡಾ ಬಂದರು. ಆ ಮೂಲಕ, ಕುಮಾರಕೃಪಾ ಆತಿಥಿಗೃಹ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿ ಬದಲಾಯಿತು. ಸಚಿವ ಸ್ಥಾನದ ಆಕಾಂಕ್ಷಿಗಳೂ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿದರು.

ಅತಿಥಿ ಗೃಹದ ಬಳಿ ಮಾತನಾಡಿದ ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ, ‘ನಮ್ಮ ನಾಯಕರನ್ನು ಭೇಟಿ ಮಾಡಲು ಬಂದಿದ್ದೆ. ನನಗೆ ವಿಶ್ವಾಸ ಇದೆ. ಕಳೆದ ಬಾರಿ ನನಗೆ ಅವಕಾಶ ಕೊಟ್ಟಿಲ್ಲ. ನನಗೆ ಈ ಬಾರಿ ಅವಕಾಶ ಮಾಡಿಕೊಡುತ್ತಾರೆ ಅಂದುಕೊಂಡಿದ್ದೇನೆ. ಚಿತ್ರದುರ್ಗಕ್ಕೆ ಸಚಿವ ಸ್ಥಾನ ನೀಡುತ್ತಾರೆ. ನ್ಯಾಯ ಕೊಡುತ್ತಾರೆ. ಬೊಮ್ಮಯಿ ಸಂಪುಟದಲ್ಲಿ ಅವಕಾಶ ಸಿಗುತ್ತೆ ಅಂತ ಅಂದುಕೊಂಡಿದ್ದೇನೆ’ ಎಂದರು.

ಸಚಿವ ಸ್ಥಾನ ಕೊಟ್ಟರೂ  ಕೊಡದಿದ್ದರು ಕೆಲಸ ಮಾಡುತ್ತೇನೆ. ವರಿಷ್ಠರ ಜೊತೆಗೆ ಮಾತಾಡಿದ್ದೇನೆ, ಸಚಿವ ಸ್ಥಾನದ ಬಗ್ಗೆ ಮಾತಾಡಿಲ್ಲ. ನಾನು ತುಂಬಾ ಹಿರಿಯ ಶಾಸಕ. ಹೀಗಾಗಿ, ನನ್ನನ್ನು ಪರಿಗಣಿಸಬೇಕು. ಸಮ್ಮಿಶ್ರ ಸರ್ಕಾರದಲ್ಲಿ, 20-20 ಸರ್ಕಾರದಲ್ಲಿ ಮತ್ತೆ ಯಡಿಯೂರಪ್ಪ ಸರ್ಕಾರದಲ್ಲಿ ಪದೇ ಪದೇ ಸಚಿವರನ್ನಾಗಿ ಮಾಡುತ್ತಿದ್ದಾರೆ. ಇದು ಸಮಾಧಾನ ಅಲ್ಲ , ಕೆಲವರನ್ನು ಬದಲಾವಣೆ ಮಾಡಿ ಹೊಸಬರಿಗೆ ಅವಕಾಶ ಕೊಡಬೇಕು. ಈ ರಾಜ್ಯದ ಮೂಲೆ ಮೂಲೆಗಳಲ್ಲಿ ಯಾವ ಸಮಸ್ಯೆಗಳು ಇದೆ ಎಂದು ಬೊಮ್ಮಯಿ ಅವರಿಗೆ ಗೊತ್ತಿದೆ ಬೊಮ್ಮಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯಾಗಲಿ’ ಎಂದೂ ಹೇಳಿದರು.

ಎಚ್. ವಿಶ್ವನಾಥ್ ಮಾತನಾಡಿ,  ‘ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುತ್ತಿರುವುದು ಸಂತೋಷ. ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಸಮರ್ಥವಾಗಿ ಕೆಲಸ ಮಾಡುತ್ತಾರೆಂಬ ವಿಶ್ವಾಸ ಇದೆ. ಹಳಬರು, ಹೊಸಬರನ್ನ ಸೇರಿಸಿಕೊಂಡು ಸಂಪುಟ ರಚನೆ ಮಾಡಬೇಕು. ನನಗೆ ಯಾವ ಖಾತೆಯೂ ಬೇಡ. ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ಮೋದಿ ಮಾಡಿದಂತೆ ಇಲ್ಲಿನ ಸಂಪುಟದಲ್ಲೂ ಮಾಡಬೇಕು. ನಾನು ಯಾರ ಮನೆ ಬಾಗಿಲಿಗೂ ಹೋಗೋದಿಲ್ಲ. ಸಚಿವ ಸ್ಥಾನ ಕೊಡಿ ಎಂದು ಕೇಳೋದಿಲ್ಲ’ ಎಂದರು.

ಆರ್. ಅಶೋಕ ಮಾತನಾಡಿ, ‘ಸಚಿವ ಸಂಪುಟ ರಚನೆ ಸಂಬಂಧ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಆ ಬಳಿಕ ಸಂಪುಟ ರಚನೆಯಾಗಲಿದೆ. ಬಹುಶಃ ಒಂದು ವಾರದಲ್ಲೇ ಆಗಬಹುದು. ಹಿರಿತನ ನೋಡಿ ಸಚಿವ ಸ್ಥಾನ ನೀಡಲಿದ್ದಾರೆ’ ಎಂದೂ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು