ಭಾನುವಾರ, ಸೆಪ್ಟೆಂಬರ್ 19, 2021
24 °C

ಲಸಿಕಾ ಆಂದೋಲನಕ್ಕೆ ಕೈ ಜೋಡಿಸಿ: ಔಷಧ ಉದ್ದಿಮೆದಾರರಿಗೆ ಸಚಿವ ಸುಧಾಕರ್‌ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೇಂದ್ರ ಸರ್ಕಾರವು ಶೇ 25ರಷ್ಟು ಲಸಿಕೆಯನ್ನು ಖಾಸಗಿ ವಲಯಕ್ಕೆ ಹಂಚಿಕೆ ಮಾಡುತ್ತಿದೆ. ಅದನ್ನು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯ ಅಡಿಯಲ್ಲಿ ಖರೀದಿಸಿ, ದೇಣಿಗೆ ರೂಪದಲ್ಲಿ ರಾಜ್ಯ ಸರ್ಕಾರಕ್ಕೆ ನೀಡಿ. ಆ ಮೂಲಕ ಲಸಿಕಾ ಆಂದೋಲನಕ್ಕೆ ಕೈಜೋಡಿಸಿ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ರಾಜ್ಯದ ಪ್ರಮುಖ ಔಷಧ ಉದ್ದಿಮೆದಾರರಿಗೆ ಮನವಿ ಮಾಡಿದರು.  

ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು ‘ಮೂರನೇ ಅಲೆ ಅಷ್ಟೇನು ಪರಿಣಾಮಕಾರಿಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಂತ ಮೈಮರೆಯುವುದಿಲ್ಲ. ಲಸಿಕೆಯ ಎರಡು ಡೋಸ್‌ಗಳನ್ನು ಪಡೆದವರಲ್ಲಿ ಸೋಂಕಿನ ತೀವ್ರತೆ ಕಡಿಮೆ, ಅಂತಹವರು ಪ್ರಾಣಾಪಾಯದಿಂದ ಪಾರಾಗಬಲ್ಲರು ಎಂಬುದು ಸಾಬೀತಾಗಿದೆ. ಹೀಗಾಗಿ ಸಾಧ್ಯವಾದಷ್ಟು ಬೇಗನೆ ಎಲ್ಲರಿಗೂ ಲಸಿಕೆ ನೀಡಬೇಕಾಗಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ’ ಎಂದರು.

‘ಪೌಷ್ಠಿಕ ಆಹಾರ ಪೂರೈಸುವ ಹಾಗೂ ಸೌಂದರ್ಯ ವರ್ದಕ ಉದ್ದಿಮೆದಾರರ ಜೊತೆಯೂ ಶೀಘ್ರವೇ ಸಭೆ ನಡೆಸುತ್ತೇನೆ. ಲಸಿಕಾ ಅಭಿಯಾನಕ್ಕೆ ಸಹಕರಿಸುವಂತೆ ಅವರಲ್ಲೂ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.

30ಕ್ಕೂ ಹೆಚ್ಚು ಔಷಧ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲಾ ಸರ್ಕಾರದ ಬೆನ್ನಿಗೆ ನಿಲ್ಲುವ ಭರವಸೆ ನೀಡಿದರು.

ಆಮ್ಲಜನಕದ ಕೊರತೆ ನೀಗಿಸಲು ಕ್ರಮ: ಸಂಭವನೀಯ ಮೂರನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು. ಈ ಸಂಬಂಧ ಉದ್ಯಮಗಳ ಜೊತೆ ಸರ್ಕಾರ ಸಮನ್ವಯದಿಂದ ಕೆಲಸ ಮಾಡಲಿದೆ’ ಎಂದು ಸುಧಾಕರ್‌ ತಿಳಿಸಿದರು.

ಆಮ್ಲಜನಕ ಉತ್ಪಾದಕ ಕಂಪನಿಗಳ ಪ್ರತಿನಿಧಿಗಳೊಂದಿಗಿನ ಸಭೆಯ ಬಳಿಕ ಮಾತನಾಡಿ ‘ಪ್ರಸ್ತುತ ಏಳು ಕಂಪನಿಗಳು ಪ್ರತಿನಿತ್ಯ ಒಟ್ಟು 812 ಟನ್‌ಗಳಷ್ಟು ಆಮ್ಲಜನಕ ಉತ್ಪಾದಿಸುತ್ತಿವೆ. ಸದ್ಯ 5,381 ಟನ್‌ ಆಮ್ಲಜನಕ ದಾಸ್ತಾನು ಇದೆ. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲೆಗಳಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ’ ಎಂದು ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು