ಶನಿವಾರ, ಸೆಪ್ಟೆಂಬರ್ 25, 2021
29 °C
ರಾಜ್ಯದಲ್ಲಿ 600ಕ್ಕೂ ಅಧಿಕ ಪ್ರಕರಣ ದೃಢ

ಮೂರನೇ ಅಲೆ: ಮಕ್ಕಳಿಗೆ ‘ಮಿಸ್‌–ಸಿ’ ಅಪಾಯ- ವೈದ್ಯಕೀಯ ತಜ್ಞರ ಎಚ್ಚರಿಕೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಮೂರನೇ ಅಲೆಯಲ್ಲಿ ಕೊರೊನಾ ಸೋಂಕಿನ ಜತೆಗೆ ಬಹು ಅಂಗಾಂಗ ಉರಿಯೂತ ಸಮಸ್ಯೆ (ಮಿಸ್‌–ಸಿ) ಕೂಡ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕಾಡುವ ಸಾಧ್ಯತೆಯಿದ್ದು, ಇದು ಕೋವಿಡ್‌ಗಿಂತ ಹೆಚ್ಚಿನ ಅಪಾಯಕಾರಿ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಮೊದಲ ಅಲೆಯಲ್ಲಿ ಅಪರೂಪವಾಗಿದ್ದ ಮಿಸ್‌–ಸಿ ಸಮಸ್ಯೆಯು ಎರಡನೇ ಅಲೆಯಲ್ಲಿ ಚೇತರಿಸಿಕೊಂಡ ಕೆಲವು ಮಕ್ಕಳನ್ನು ಕಾಡಲಾರಂಭಿಸಿದೆ. ಮಕ್ಕಳ ತಜ್ಞರ ಪ್ರಕಾರ ಕೊರೊನಾ ಸೋಂಕಿನಿಂದ ಗುಣಮುಖರಾದ ಪ್ರತಿ ನೂರು ಮಕ್ಕಳಲ್ಲಿ ಒಂದು ಮಗುವಿಗೆ ಈ ಸಮಸ್ಯೆ ಕಾಣಿಸಿಕೊಳ್ಳಲಿದೆ. ರಾಜ್ಯದಲ್ಲಿ ಈಗಾಗಲೇ 600ಕ್ಕೂ ಅಧಿಕ ಹಾಗೂ ಬೆಂಗಳೂರಿನಲ್ಲಿ 400 ಅಧಿಕ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿಯೇ (ಐಜಿಐಸಿಎಚ್) 130 ಪ್ರಕರಣಗಳು ದೃಢಪಟ್ಟಿವೆ.

ಮೂರನೇ ಅಲೆಯಲ್ಲಿ ಈ ಪ್ರಕರಣಗಳುಅಧಿಕ ಸಂಖ್ಯೆಯಲ್ಲಿ ವರದಿಯಾಗುವ ಬಗ್ಗೆ ಮಕ್ಕಳ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಮೂರನೇ ಅಲೆಗೆ ಸಂಬಂಧಿಸಿದಂತೆ ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞ ವೈದ್ಯರ ಸಮಿತಿ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಬೆಂಗಳೂರಿನಲ್ಲಿಯೇ 45,958 ಮಕ್ಕಳು ಸೇರಿದಂತೆ ರಾಜ್ಯದಲ್ಲಿ 3.4 ಲಕ್ಷ ಮಕ್ಕಳು ಸೋಂಕಿತರಾಗುವ ಬಗ್ಗೆ ಉಲ್ಲೇಖಿಸಲಾಗಿದೆ. ಇದಕ್ಕೆ ಪೂರಕ ಎಂಬಂತೆ ಮಕ್ಕಳಲ್ಲಿನ ಸೋಂಕು ದೃಢ ಪ್ರಮಾಣ ಕೂಡ ಏರುಗತಿ ಪಡೆದಿದೆ. ಮೇ ತಿಂಗಳಲ್ಲಿ ವರದಿಯಾದ ಕೋವಿಡ್ ಪ್ರಕರಣಗಳಲ್ಲಿ 10 ವರ್ಷದೊಳಗಿನವರಲ್ಲಿ ಸೋಂಕು ದೃಢ ಪ್ರಮಾಣ ಸರಾಸರಿ ಶೇ 3.5ರಷ್ಟಿತ್ತು. ಇದು ಜೂನ್ ತಿಂಗಳಲ್ಲಿ ಶೇ 4ಕ್ಕೆ ಏರಿಕೆಯಾಗಿತ್ತು. ಜುಲೈ ತಿಂಗಳಲ್ಲಿ ಶೇ 4.4ಕ್ಕೆ ತಲುಪಿದೆ. 

ಐಜಿಐಸಿಎಚ್ ನೋಡಲ್ ಕೇಂದ್ರ: ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪೀಡಿತರಾದಲ್ಲಿ ಚಿಕಿತ್ಸೆ ಒದಗಿಸಲು ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿ, ಮಿಸ್‌–ಸಿ ಸಮಸ್ಯೆಗೆ ಐಜಿಐಸಿಎಚ್ ಸಂಸ್ಥೆಯನ್ನು ನೋಡಲ್ ಕೇಂದ್ರವಾಗಿ ಗುರುತಿಸಲಾಗಿದೆ. ಈ ಸಮಸ್ಯೆಯ ಚಿಕಿತ್ಸೆ ಬಗ್ಗೆ ಕೇಂದ್ರದ ಮೂಲಕ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ.

‘ಮಿಸ್‌–ಸಿ ಸಮಸ್ಯೆಗೆ ಚಿಕಿತ್ಸೆ ವಿಳಂಬವಾದಲ್ಲಿ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಎರಡನೇ ಅಲೆಯಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾಗುವ ಸಾಧ್ಯತೆ ಇರುವುದರಿಂದ ಈ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಬಹುದು. ಕೆಲ ಮಕ್ಕಳಿಗೆ ಐಸಿಯು ಹಾಸಿಗೆ ಕೂಡ ಅಗತ್ಯವಿರುತ್ತದೆ’ ಎಂದು ಐಜಿಐಸಿಎಚ್ ನಿರ್ದೇಶಕ ಡಾ.ಕೆ.ಎಸ್. ಸಂಜಯ್ ‘ಪ್ರಜಾವಾಣಿ’ಗೆ  ತಿಳಿಸಿದರು.

‘ಲಕ್ಷಣ ರಹಿತ ಸೋಂಕಿತರಿಗೂ ಸಮಸ್ಯೆ’

‘ಮಿಸ್‌–ಸಿ ಸಮಸ್ಯೆಯು 10ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಕೆಲ ಮಕ್ಕಳು ಕೋವಿಡ್‌ ಪೀಡಿತರಾಗಿರದಿದ್ದರೂ ಈ ಸಮಸ್ಯೆ ಕಾಣಿಸಿಕೊಂಡಲ್ಲಿ ಅಂತಹವರಿಗೆ ಪ್ರತಿಕಾಯ ಪರೀಕ್ಷೆ ನಡೆಸಲಾಗುತ್ತದೆ. ಆಗ ಅವರು ಈ ಮೊದಲು ಸೋಂಕಿತರಾಗಿದ್ದರೇ ಎನ್ನುವುದು ಖಚಿತವಾಗುತ್ತದೆ. ಕೋವಿಡ್‌ಗಿಂತ ಮಿಸ್‌–ಸಿ ಸಮಸ್ಯೆಯು ಹೆಚ್ಚಿನ ಅಪಾಯವನ್ನು ಉಂಟುಮಾಡುತ್ತದೆ. ವಿವಿಧ ಅಂಗಾಂಗಗಳಿಗೆ ಹಾನಿಯಾಗಲಿದೆ’ ಎಂದು ಮಕ್ಕಳ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಕ್ಕಳ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಎಸ್. ಶ್ರೀನಿವಾಸ್  ತಿಳಿಸಿದರು. 

‘ಶೇ 2ರಿಂದ ಶೇ 3ರಷ್ಟು ಮರಣ ಪ್ರಮಾಣವನ್ನು ಇದು ಹೊಂದಿದೆ. ಕಣ್ಣಿನ ಸುತ್ತ ಕೆಂಪಾಗುವಿಕೆ, ದೇಹದಲ್ಲಿ ಊತ, ವಿಪರೀತ ಮೈ ತುರಿಕೆ, ಜ್ವರ, ಹೊಟ್ಟೆನೋವು, ವಾಂತಿ ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು