ಭಾನುವಾರ, ಆಗಸ್ಟ್ 14, 2022
20 °C
‘ಮೀಸಲಾತಿ ಭ್ರಮೆ ಮತ್ತು ವಾಸ್ತವ’ ಕೃತಿ ಬಿಡುಗಡೆ ಸಮಾರಂಭ

‘ಮೇಲ್ಜಾತಿಗೆ ಮೀಸಲಾತಿ: ಮಾನದಂಡವಿಲ್ಲ’: ಸಿದ್ದರಾಮಯ್ಯ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಅದೇ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿಗೆ ಮೀಸಲಾತಿ ಕಲ್ಪಿಸುವ ಮಾನದಂಡ ಸಂವಿಧಾನದಲ್ಲಿ ಎಲ್ಲಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದಲ್ಲಿ ಭಾನುವಾರ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅವರ ‘ಮೀಸಲಾತಿ ಭ್ರಮೆ ಮತ್ತು ವಾಸ್ತವ’ ಕೃತಿ (ಕನ್ನಡ ಹಾಗೂ ಇಂಗ್ಲಿಷ್‌ ಆವೃತ್ತಿ) ಬಿಡುಗಡೆಗೊಳಿಸಿ ಮಾತನಾಡಿದರು.

‘ನರೇಂದ್ರ ಮೋದಿ ಸಂವಿಧಾನಕ್ಕೆ ವಿರುದ್ಧವಾಗಿ ಅಂಥವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿದ್ದರೂ ಹಿಂದುಳಿದವರು ಮೌನ ವಹಿಸಿದ್ದಾರೆ. ಗುಲಾಮಗಿರಿಯ ಮನಃಸ್ಥಿತಿ ಒಳ್ಳೆಯದಲ್ಲ. ಶಿಕ್ಷಣ ಪಡೆಯುವುದು ಮಾತ್ರವಲ್ಲ, ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಸ್ವಾಭಿಮಾನ ಇಲ್ಲದಿದ್ದರೆ ಗೌರವದಿಂದ ನಡೆಯಲು ಅಸಾಧ್ಯ. ಮೌನ ತ್ಯಜಿಸಿ ಪ್ರಶ್ನಿಸುವ, ಹೋರಾಟದ ಗುಣ ಬೆಳೆಸಿಕೊಳ್ಳಬೇಕು’ ಎಂದು ಅವರು ಹೇಳಿದರು. 

‘ಮೀಸಲಾತಿ ಭಿಕ್ಷೆ ಅಲ್ಲ. ಅದು ಸಾಂವಿಧಾನಿಕ ಹಕ್ಕು. ನ್ಯಾಯಾಲಯದ ಅಸ್ಪಷ್ಟ ತೀರ್ಪುಗಳಿಂದ ಶೋಷಿತ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಬೇಕಿದೆ. ಬರೀ ಬಾಯಿಮಾತಿನ ಸಮಾನತೆ ಪ್ರತಿಪಾದನೆಯಿಂದ ಬದಲಾವಣೆ ಅಸಾಧ್ಯ. ಸ್ವಾತಂತ್ರ್ಯ ಲಭಿಸಿ, 75 ವರ್ಷವಾದರೂ ಶೋಷಿತರ ಬದುಕಿನಲ್ಲಿ ಬದಲಾವಣೆಯ ಬೆಳಕು ಕಂಡಿಲ್ಲ. ಎಸ್‌.ಟಿ, ಎಸ್‌.ಸಿಸಮುದಾಯಕ್ಕೆ ಸಂವಿಧಾನಬದ್ಧ ಮೀಸಲಾತಿ ಇತ್ತು. ಆದರೆ, ಹಿಂದುಳಿದ ವರ್ಗಕ್ಕೆ 1990ರ ವೇಳೆಗೆ ಶೇ 27ರಷ್ಟು ಮೀಸಲಾತಿ ಲಭಿಸಿತ್ತು. ಅದನ್ನೂ ನಾಶಪಡಿಸುವ ಹುನ್ನಾರ ನಡೆಯುತ್ತಿದೆ’ ಎಂದರು.

ಚಿಂತಕ ಬಂಜಗೆರೆ ಜಯಪ್ರಕಾಶ ಮಾತನಾಡಿ, ‘ಮೀಸಲಾತಿ ವ್ಯವಸ್ಥೆಯಿಂದ ದೇಶ ಹಿಂದುಳಿದಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಮೀಸಲಾತಿಯ ಬಗ್ಗೆ ಮತ್ಸರ ಏಕೆ’ ಎಂದು ಪ್ರಶ್ನಿಸಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್, ‘ವರ್ಗ, ಜಾತಿಯ ಅಸಮಾನತೆ ಸಮಾಜದಲ್ಲಿ ಬೆರೆತುಹೋಗಿದೆ. ಪ್ರತಿಭಟಿಸಿದರೆ ಬಂಧಿಸುವ ಮೂಲಕ ಧ್ವನಿಯನ್ನೇ ಅಡಗಿಸುತ್ತಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಂಗದ ಪ್ರತಿಕ್ರಿಯೆ ನೋವು ತರಿಸುತ್ತಿದೆ’ ಎಂದು ಹೇಳಿದರು.

ಸಂಗೀತ ನಿರ್ದೇಶಕ ಹಂಸಲೇಖ ಅವರು, ‘ಪರರಿಗೆ ಕೀ ಕೊಟ್ಟು ಮನೆ ಕಾಯುತ್ತಿದ್ದೇವೆ. ಹಂಗಿಲ್ಲದ ಮೀಸಲಾತಿ ಬೇಕಿದೆ. ಸಂವಿಧಾನ, ಪ್ರಜಾಪ್ರಭುತ್ವ ಕಾವ್ಯವಾಗಬೇಕು. ನಾಗಮೋಹನ ದಾಸ್‌ ಅವರ ಕೃತಿಯನ್ನು 22 ಗಾಯಕರ ಮೂಲಕ ಕಾವ್ಯದ ರೂಪದಲ್ಲಿ ಚಿರಂತನ ಆಗಿಸಲು ಪ್ರಯತ್ನಿಸಲಾಗುವುದು’ ಎಂದರು.

ಪತ್ರಕರ್ತ ಬಿ.ಎಂ.ಹನೀಫ್‌ ಅವರು, ‘ಶೋಷಿತರ ಅನುಕೂಲಕ್ಕಿರುವ ಶೇ 2ರ ಮೀಸಲಾತಿ ಮೇಲೆ ಕೆಲವರ ಕಣ್ಣುಬಿದ್ದಿದೆ. ಮೀಸಲಾತಿ ವ್ಯವಸ್ಥೆ ಹಳ್ಳ ಹಿಡಿಸುವ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಲ್ಲಿ ಎಸ್‌.ಸಿ, ಎಸ್‌.ಟಿಗೆ ಮೀಸಲಾತಿ ಕಲ್ಪಿಸಿ ಈ ಸಮುದಾಯಗಳ ನಡುವೆ ವೈರತ್ವ ಮೂಡಿಸಲಾಗುತ್ತಿದೆ’ ಎಂದರು.

ಆರ್ಥಿಕ ತಜ್ಞ ಟಿ.ಆರ್.ಚಂದ್ರಶೇಖರ, ಜನಪ್ರಕಾಶನ ಸಂಸ್ಥೆಯ ಬಿ.ರಾಜಶೇಖರಮೂರ್ತಿ, ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆಯ ಕಿಗ್ಗ ರಾಜಶೇಖರ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು