ಬುಧವಾರ, ಅಕ್ಟೋಬರ್ 20, 2021
24 °C

ಹೊಸದುರ್ಗ: ಹಿಂದೂ ಧರ್ಮಕ್ಕೆ ಮರಳಿದ ಶಾಸಕ ಗೂಳಿಹಟ್ಟಿ ಶೇಖರ್‌ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಕ್ಷೇತ್ರದ ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಅವರ ತಾಯಿ ಪುಟ್ಟಮ್ಮ ಕ್ರಿಶ್ಚಿಯನ್‌ ಧರ್ಮದ ಆಚರಣೆ, ಸಂಸ್ಕೃತಿಗೆ ಮಾರುಹೋಗಿದ್ದರು. ಈಗ ಹಿಂದೂ ಧರ್ಮಕ್ಕೆ ಮರಳಿದ್ದಾರೆ.

‘ಆರು ವರ್ಷಗಳ ಹಿಂದೆ ನನ್ನ ಸಹೋದರ, ತಂದೆ ಮೃತಪಟ್ಟರು. ಈ ನೋವಿನಲ್ಲಿ ಜೀವನ ಸಾಗಿಸುತ್ತಿದ್ದ ನನ್ನ ತಾಯಿಗೆ ಅನಾರೋಗ್ಯ ಉಂಟಾಯಿತು. ಕ್ರಿಶ್ಚಿಯನ್‌ ಧರ್ಮಾಚರಣೆ ಮಾಡಿದರೆ ನೋವು ನಿವಾರಣೆಯಾಗುತ್ತದೆ ಎಂದು ಹಲವರು ನಂಬಿಸಿದ್ದರು. ಇದನ್ನು ಒಪ್ಪಿದ ನನ್ನ ತಾಯಿ ನಮ್ಮ ಆಚರಣೆ, ಸಂಸ್ಕೃತಿ ಬಿಟ್ಟರು. ಊರಲ್ಲಿದ್ದ ಸ್ವಂತ ಮನೆ ತೊರೆದು ಪಟ್ಟಣಕ್ಕೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿ ಚರ್ಚ್‌ನ ಆಚರಣೆಯಲ್ಲಿ ಭಾಗವಹಿಸುತ್ತಿದ್ದರು’ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

‘ಮತಾಂತರದ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ನಾನು ಪ್ರಸ್ತಾಪಿಸಿದ್ದ ವಿಚಾರ ನನ್ನ ತಾಯಿಗೆ ತಿಳಿದಿದೆ. ಮಗನ ಒಳ್ಳೆಯ ಕಾರ್ಯಕ್ಕೆ ಕೈಜೋಡಿಸಬೇಕು ಎಂಬ ಉದ್ದೇಶದಿಂದ ಪುನಃ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ಪಟ್ಟಣದ ಬಾಡಿಗೆ ಮನೆಯಲ್ಲಿದ್ದ ಸಾಮಗ್ರಿ ತೆಗೆದುಕೊಂಡು ಸ್ವಗ್ರಾಮ ಗೂಳಿಹಟ್ಟಿ ಭೋವಿಹಟ್ಟಿ ಗ್ರಾಮದಲ್ಲಿರುವ ನಮ್ಮ ಮನೆಗೆ ಬಂದಿದ್ದಾರೆ. ಹಂತ ಹಂತವಾಗಿ ನಮ್ಮ ಧರ್ಮದ ಪೂಜೆ–ಪುನಸ್ಕಾರ, ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ’ ಎಂದು ಹೇಳಿದರು.

‘ಮತಾಂತರ ಹೊಂದಿರುವವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ವಿಶ್ವ ಹಿಂದೂ ಪರಿಷತ್‌ನವರು ರೂಪಿಸಿರುವ ‘ಘರ್‌ ವಾಪಸಿ’ ಕಾರ್ಯವನ್ನು ತಾಲ್ಲೂಕು, ರಾಜ್ಯದೆಲ್ಲೆಡೆ ಆರಂಭಿಸಲಾಗುವುದು’ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ತಿಳಿಸಿದರು.

ಕ್ರಿಶ್ಚಿಯನ್‌ ಧರ್ಮದಿಂದ ಹಿಂದೂ ಧರ್ಮಕ್ಕೆ ಮರಳಿದ ಗೂಳಿಹಟ್ಟಿ ಶೇಖರ್‌ ತಾಯಿ ಪುಟ್ಟಮ್ಮ ಅವರು ‘ಪ್ರಜಾವಾಣಿ’ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.