ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಸಿಗದ ಪರಿಹಾರ: ಆಕ್ರೋಶ

ಅರಣ್ಯ ಭವನಕ್ಕೆ ಮುತ್ತಿಗೆ: ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಎಚ್ಚರಿಕೆ
Last Updated 12 ಜುಲೈ 2021, 13:27 IST
ಅಕ್ಷರ ಗಾತ್ರ

ಮಡಿಕೇರಿ: ‘2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ ಮನೆ, ತೋಟ, ಗದ್ದೆಗಳನ್ನು ಕಳೆದುಕೊಂಡ ನೂರಾರು ಮಂದಿಗೆ ಇನ್ನೂ ಸೂಕ್ತ ಪರಿಹಾರವನ್ನು ಸರ್ಕಾರ ನೀಡಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಅವರು ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡಗು ಜಿಲ್ಲೆಯನ್ನು ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ’ ಎಂದು ದೂರಿದರು.

‘ಹಿಂದಿನ ‘ಮೈತ್ರಿ’ ಸರ್ಕಾರವು ಮಳೆಹಾನಿ ಸಂತ್ರಸ್ತರಿಗೆ ಸುಮಾರು 800 ಮನೆಗಳನ್ನು ನಿರ್ಮಿಸಿಕೊಟ್ಟಿದ್ದರೆ ಈಗಿನ ಸರ್ಕಾರವು ನಿರ್ಲಕ್ಷ್ಯ ತೋರುತ್ತಿದೆ. ಸಂತ್ರಸ್ತರಿಗೆ ತಲಾ ₹5 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಬಿಜೆಪಿ ನೇತೃತ್ವದ ಸರ್ಕಾರ ಭರವಸೆಯ ನೀಡಿತು. ಆದರೆ ಕೊಡಗಿನ ಅನೇಕ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲು ಇಲ್ಲಿಯವರೆಗೆ ಜಾಗವನ್ನೇ ಸರ್ಕಾರ ಗುರುತಿಸಿಲ್ಲ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಾಳಿ–ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡವರು ಇಂದಿಗೂ ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

‘ಪರಿಹಾರ ನೀಡಿ ಎಂದು ಸಂತ್ರಸ್ತರು ಕಂದಾಯ ಇಲಾಖೆಗೆ ಅಲೆಯುತ್ತಿದ್ದಾರೆ. ಆದರೆ, ಕಡತಗಳು ಮಾತ್ರ ವಿಲೇವಾರಿ ಆಗುತ್ತಿಲ್ಲ. 2018ರಿಂದ ಈಚೆಗೆ ಅನೇಕ ತೋಟ ಮತ್ತು ಗದ್ದೆಗಳು ನಾಶವಾಗಿವೆ. ಬಿದ್ದ ಮರಗಳನ್ನು ತೆರವುಗೊಳಿಸಲು ಕೂಡ ಅವಕಾಶ ನೀಡುತ್ತಿಲ್ಲ. ಅನೇಕರು ಕೃಷಿ ಮಾಡಲಾಗದ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಜಾಣ ಮೌನಕ್ಕೆ ಶರಣಾಗಿದೆ’ ಎಂದು ಆಪಾದಿಸಿದರು.

ಕಂದಾಯ ಇಲಾಖೆ ಸಮಸ್ಯೆ:

ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಿದ್ದಾರೆ. ಆದರೆ, ಕಂದಾಯ ಇಲಾಖೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ. ತೋಟ ಮತ್ತು ಗದ್ದೆಗೆ ಸಂಬಂಧಿಸಿದ ಕಡತಗಳ ವಿಲೇವಾರಿಗೆ ಇಲ್ಲಸಲ್ಲದ ನಿಯಮಗಳನ್ನು ಎಳೆದು ತಂದು ಅಡ್ಡಿ ಪಡಿಸಲಾಗುತ್ತಿದೆ. ಬೇರೆ ಯಾವುದೇ ಜಿಲ್ಲೆಯಲ್ಲಿ ಅನ್ವಯವಾಗದ ಕಂದಾಯ ಕಾನೂನುಗಳನ್ನು ಕೊಡಗಿನಲ್ಲಿ ಜಾರಿಗೆ ತರಲಾಗುತ್ತಿದೆ. ವಿನಾಕಾರಣ ಭೂಮಾಲೀಕರಿಗೆ ತೊಂದರೆ ನೀಡಲಾಗುತ್ತಿದೆ. ಜಮೀನಿಗೆ ಸಂಬಂಧಿಸಿದ ಕಡತಗಳ ಶೀಘ್ರ ವಿಲೇವಾರಿಗೆ ಕಂದಾಯ ಸಚಿವರು ಜಿಲ್ಲೆಯ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಜನವಸತಿ ಪ್ರದೇಶ ಮತ್ತು ತೋಟಗಳಲ್ಲಿ ಸುಮಾರು 100ಕ್ಕೂ ಅಧಿಕ ಕಾಡಾನೆಗಳ ಬೀಡು ಬಿಟ್ಟಿರುವ ಬಗ್ಗೆ ಸಂಶಯವಿದೆ. ಯಾವ ಬೆಳೆಗಾರ ಮತ್ತು ಕಾರ್ಮಿಕರಿಗೂ ನಿರಾತಂಕವಾಗಿ ತೋಟ, ಗದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಾವು–ನೋವುಗಳ ಸಂಭವಿಸಿದರೂ ಅರಣ್ಯ ಇಲಾಖೆ ಮಾತ್ರ ಸತ್ತವರಿಗೆ ಪರಿಹಾರ ನೀಡಿದ ಮಾಹಿತಿ ನೀಡಿ ಕೈತೊಳೆದುಕೊಳ್ಳುತ್ತಿದೆ. ಕಳೆದ 3 ವರ್ಷಗಳಿಂದ ಪರಿಸ್ಥಿತಿ ಕೈಮೀರುವ ಹಂತದಲ್ಲಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು.

ತಕ್ಷಣ ಸರ್ಕಾರ ಮತ್ತು ಅರಣ್ಯ ಇಲಾಖೆ ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಯೋಜನೆಯನ್ನು ರೂಪಿಸದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ, ಮಡಿಕೇರಿಯ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೊಡಗಿನಲ್ಲಿ ಹಲವರ ಹೋರಾಟದ ಫಲವಾಗಿ ಪೊನ್ನಂಪೇಟೆ ಮತ್ತು ಕುಶಾಲನಗರ ಪ್ರತ್ಯೇಕ ತಾಲ್ಲೂಕಾಗಿ ರಚನೆಯಾಗಿದೆ. ಆದರೆ ಎರಡೂ ನೂತನ ತಾಲ್ಲೂಕುಗಳ ಉದ್ಘಾಟನೆ ಸಂದರ್ಭ ಹೋರಾಟಗಾರರನ್ನು ಕಡೆಗಣಿಸಿರುವುದು ಖಂಡನೀಯ ಎಂದರು.

ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿದಿನ ಏರಿಕೆಯಾಗುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಇದೇ ಕಾರಣಕ್ಕೆ ಗಗನಕ್ಕೇರಿದೆ. ಕಡು ಬಡವರು, ಕಾರ್ಮಿಕರು ಜನ ಸಾಮಾನ್ಯರು ಆರ್ಥಿಕ ಹಿನ್ನಡೆಯಿಂದ ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇಳಿಕೆಯಾಗಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT