ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಮುಂದುವರಿದ ಮಳೆ: ಮಲೆನಾಡಿನಲ್ಲಿ ತಗ್ಗಿದ ವರುಣನ ಅಬ್ಬರ

Last Updated 9 ಜುಲೈ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರವೂ ಮಳೆ ಮುಂದು ವರಿದಿದ್ದು, ಮಲೆನಾಡಿನಲ್ಲಿ ಮಳೆಯ ಅಬ್ಬರ ಕೊಂಚ ತಗ್ಗಿದೆ. ಇತರ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಹಲವೆಡೆ ಮನೆಗಳು ಹಾನಿಗೀಡಾಗಿದ್ದು, ಕೆಲವೆಡೆ ರಸ್ತೆಗಳು ಕುಸಿದಿವೆ.

ಚಿಕ್ಕಮಗಳೂರು ಜಿಲ್ಲೆ ಮತ್ತು ಕಲಬುರಗಿ ಜಿಲ್ಲೆಯ ಹಲವೆಡೆ ಬೆಳೆಗಳಿಗೆ ಹಾನಿಯಾಗಿದೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮನೆಯ ಗೋಡೆ ಕುಸಿದು ಆರೀಫಾ ಬೇಗಂ ಸರ್ದಾರ್ ಅಲಿ ಎಂಬುವವರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಲ್ಗುಣಿ ನದಿ ತುಂಬಿ ಹರಿಯುತ್ತಿದ್ದು, ವೇಣೂರು ಬಳಿ ಮೃತದೇಹವೊಂದು ನೀರಿನಲ್ಲಿ ತೇಲಿಹೋಗುತ್ತಿರುವುದು ಗ್ರಾಮಸ್ಥರಿಗೆ ಗೋಚರಿಸಿದೆ. ಆದರೆ, ಯಾರ ಶವ ಎಂಬ ವಿವರ ತಿಳಿದುಬಂದಿಲ್ಲ. ನೇತ್ರಾವತಿ, ಶಾಂಭವಿ, ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ಶಿವಮೊಗ್ಗ ಜಿಲ್ಲೆಯ ಕಾರ್ಗಲ್‌ ಸಮೀಪದ ಜೋಗಜಲಪಾತ ಮೈದುಂಬಿದ್ದು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಮೂರು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’: ನೈರುತ್ಯ ಮುಂಗಾರು ರಾಜ್ಯದಾದ್ಯಂತ ಮತ್ತಷ್ಟು ಬಿರುಸುಗೊಂಡಿದ್ದು, ಮುಂದಿನ 48 ಗಂಟೆಗಳು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಭಾನುವಾರ ಹಾಗೂ ಸೋಮವಾರವೂ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ರಾಜ್ಯದ ಬಹುತೇಕ ಕಡೆ ಮಳೆ ಮುಂದುವರೆಯಲಿದೆ. ಕರಾವಳಿ ತೀರದಲ್ಲಿ ಮುಂದಿನ 48 ಗಂಟೆಗಳು ಬಿರುಗಾಳಿಯ ವೇಗ ಪ್ರತಿ ಗಂಟೆಗೆ ಗರಿಷ್ಠ 55 ಕಿ.ಮೀ ತಲುಪುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ತೆರಳಬಾರದು ಎಂದು ಇಲಾಖೆ ಸೂಚಿಸಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಮುಂದಿನ ಎರಡು ದಿನ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಬೀದರ್, ಯಾದಗಿರಿ, ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಹಾಸನ ಜಿಲ್ಲೆಗೆ ಭಾನುವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT