ವಿಜಯನಗರ ಮೆಡಿಕಲ್ ಕಾಲೇಜಿನ 35 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೋವಿಡ್ ದೃಢ

ಬಳ್ಳಾರಿ: ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್) 35 ವೈದ್ಯರು, ವಿದ್ಯಾರ್ಥಿಗಳೂ ಸೇರಿದಂತೆ ಬುಧವಾರ ಒಂದೇ ದಿನ ಜಿಲ್ಲೆಯಲ್ಲಿ 66 ಮಂದಿಗೆ ಕೋವಿಡ್ ಸೋಂಕು ತಗುಲಿದ್ದು, ಆತಂಕ ಸೃಷ್ಟಿಯಾಗಿದೆ.
35 ವಿಮ್ಸ್ ವಿದ್ಯಾರ್ಥಿಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಇವರೆಲ್ಲರೂ ಹಾಸ್ಟೆಲ್ ವಿದ್ಯಾರ್ಥಿಗಳಾಗಿದ್ದರಿಂದ ಹಾಸ್ಟೆಲ್‌ನ ಎಲ್ಲ 250 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ 100 ವಿದ್ಯಾರ್ಥಿಗಳ ಪರೀಕ್ಷೆ ಮುಗಿದಿದೆ. ಮಹಿಳಾ ಹಾಸ್ಟೆಲ್‌ನ 650 ವಿದ್ಯಾರ್ಥಿನಿಯರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ತಿಳಿಸಿದರು.
ವಿದ್ಯಾರ್ಥಿಗಳಿಗೆ ಹೊಸ ವೈರಾಣು ‘ಓಮೈಕ್ರಾನ್’ ಸೋಂಕು ತಗುಲಿದೆಯೇ ಎಂಬುದು ವೈದ್ಯಕೀಯ ವರದಿ ಬಂದ ಬಳಿಕ ಖಚಿತವಾಗಲಿದೆ. ಸದ್ಯಕ್ಕೆ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಕೋವಿಡ್ ಸೋಂಕಿತರ ಸಂಪರ್ಕದಿಂದ ವೈದ್ಯರಿಗೆ ರೋಗ ಹರಡಿರಬಹುದು ಎಂದೂ ಗಂಗಾಧರಗೌಡ ಸ್ಪಷ್ಟಪಡಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ 35 ವಿದ್ಯಾರ್ಥಿಗಳು ಮತ್ತು 18 ಮಂದಿ ಹೊರಗಿನವರು ದಾಖಲಾಗಿದ್ದು, ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಜಿಲ್ಲಾ ಸರ್ಜನ್ ಡಾ. ಬಸರೆಡ್ಡಿ ತಿಳಿಸಿದರು.
ಈ ಮಧ್ಯೆ, ತೋರಣಗಲ್ಲು ಹೋಬಳಿಯ ವಿವಿಧೆಡೆ 13 ಕೋವಿಡ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಭೇಟಿ ನೀಡಿ ಪರಿಶೀಲಿಸಿದರು.
ಸೋಂಕಿತರನ್ನು ತೋರಣಗಲ್ಲು ಸಮೀಪದ ಬನಹಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.