ಮಂಗಳವಾರ, ಅಕ್ಟೋಬರ್ 4, 2022
25 °C
ಎನ್‌ಸಿಆರ್‌ಬಿ ವರದಿ 2021 l ದಿನವೊಂದಕ್ಕೆ ಸರಾಸರಿ 18 ಪ್ರಕರಣ ದಾಖಲು

ಸೈಬರ್ ಕ್ರೈಂ: ಬೆಂಗಳೂರಿನಲ್ಲೇ ಅತಿ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾದ ದೇಶದ ಮಹಾನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, 2021ರಲ್ಲಿ ದಿನವೊಂದಕ್ಕೆ ಸರಾಸರಿ 18 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

2021ನೇ ಸಾಲಿನ ಅಪರಾಧಗಳ ಅಂಕಿ–ಅಂಶವನ್ನು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೊ (ಎನ್‌ಸಿ ಆರ್‌ಬಿ) ಬಿಡುಗಡೆ ಮಾಡಿದೆ. ಸೈಬರ್ ಅಪರಾಧಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘20 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ದೇಶದ ಪ್ರಮುಖ 19 ಮಹಾನಗರಗಳಲ್ಲಿ ದಾಖಲಾದ ಸೈಬರ್ ಅಪ ರಾಧಗಳ ಮಾಹಿತಿಯನ್ನು ಪಡೆದು, ವರದಿ ಸಿದ್ಧಪಡಿಸಲಾಗಿದೆ’ ಎಂದು ಎನ್‌ಸಿಆರ್‌ಬಿ ಹೇಳಿದೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಹಾಗೂ ಇತರೆ ಕ್ಷೇತ್ರಗಳ ಕಂಪನಿಗಳು ಅಧಿಕವಾಗಿವೆ. ಜೊತೆಗೆ, ವ್ಯಾಪಾರ ಹಾಗೂ ಉದ್ಯಮ ಕ್ಷೇತ್ರದ ವ್ಯಾಪ್ತಿಯೂ ಹೆಚ್ಚಿದೆ. ಇಂಥ ನಗರದಲ್ಲಿ ಜನರನ್ನು ವಂಚಿಸಲೆಂದೇ ಸೈಬರ್ ತಂಡಗಳು ಸಕ್ರಿಯವಾಗಿದ್ದು, ಅವುಗಳ ಕೃತ್ಯದ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.

6,423 ಪ್ರಕರಣ ದಾಖಲಾಗುವ ಮೂಲಕ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣದ ಹೈದರಾಬಾದ್ ನಗರ (3,303 ಪ್ರಕರಣ) ಎರಡನೇ ಸ್ಥಾನದಲ್ಲಿದೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಗರ (2,883 ಪ್ರಕರಣ) ಮೂರನೇ ಸ್ಥಾನದಲ್ಲಿದೆ.

ಸಮಾಧಾನ ತಂದ ಇಳಿಕೆ ಪ್ರಮಾಣ: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ 2021ರಲ್ಲಿ ಸೈಬರ್ ಅಪರಾಧ ಪ್ರಕರಣ ಇಳಿಕೆಯಾಗಿದ್ದು, ಸಮಾಧಾನದ ಸಂಗತಿ.

‘2019ರಲ್ಲಿ 10,555 ಪ್ರಕರಣ ಹಾಗೂ 2020ರಲ್ಲಿ 8,892 ಪ್ರಕರಣ ಗಳು ದಾಖಲಾಗಿದ್ದವು’ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಿಭಾಗವಾರು ಸೈಬರ್ ಕ್ರೈಂ ಠಾಣೆ: ‘ಆನ್‌ಲೈನ್ ಹಾಗೂ ಇತರೆ ಮಾರ್ಗದ ಮೂಲಕ ನಡೆಯುವ ಸೈಬರ್ ವಂಚನೆ ಪ್ರಕರಣಗಳನ್ನು ಭೇದಿಸಲು ಪೊಲೀಸರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಲಯವಾರು ಸೈಬರ್ ಕ್ರೈಂ ಠಾಣೆಗಳನ್ನು ತೆರೆದು, ದೂರು ಸ್ವೀಕರಿಸುತ್ತಿದ್ದಾರೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ’ ಎಂದು ದೂರುದಾರರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ‘ನಿಯಂತ್ರಣ ಕೊಠಡಿ 112 ಸಂಖ್ಯೆ ಮೂಲಕ ಬರುವ ಸೈಬರ್ ಅಪರಾಧ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಇತ್ಯರ್ಥಪಡಿಸಲಾಗುತ್ತಿದೆ. ತ್ವರಿತವಾಗಿ ದೂರು ನೀಡಿದರೆ, ಹಣವನ್ನು ವಾಪಸು ಕೊಡಿ ಸುವ ವ್ಯವಸ್ಥೆ ಇದೆ’ ಎಂದರು.

ಸೈಬರ್ ಕ್ರೈಂ ಪ್ರಕರಣ–2021 (ಮಹಾನಗರವಾರು)

ಮಹಾನಗರ; ಪ್ರಕರಣಗಳ ಸಂಖ್ಯೆ

ಬೆಂಗಳೂರು;6,423

ಹೈದರಾಬಾದ್; 3,303

ಮುಂಬೈ; 2,883

ಲಖನೌ; 1,067

ಗಾಜಿಯಾಬಾದ್; 451

ಕಾನ್ಪುರ್; 449

ಅಹಮದಾಬಾದ್; 447

ದೆಹಲಿ; 345

ಪಾಟ್ನಾ; 304

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು