ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಅಧ್ಯಕ್ಷರ ನಡೆ ಪ್ರಜಾಪ್ರಭುತ್ವ ವಿರೋಧಿ ಎಂದ ಜನ

ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಲವು ನಿರ್ಬಂಧ: ಆಕ್ಷೇಪ
Last Updated 21 ಮಾರ್ಚ್ 2023, 19:05 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರಿಗೆ ವಿಧಿಸಿರುವ ನಿರ್ಬಂಧಗಳ ಬಗ್ಗೆ ಆಕ್ಷೇಪಗಳು ವ್ಯಕ್ತ ವಾಗಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆಗಳು ನಡೆದಿವೆ.

ಸಭೆಯಲ್ಲಿ ಸದಸ್ಯರು ಏರುಧ್ವನಿಯಲ್ಲಿ ಮಾತನಾಡಕೂಡದು, ಸಭೆಯ ನಿರ್ಣಯಗಳ ಬಗ್ಗೆ ಮಾಧ್ಯಮ ಹೇಳಿಕೆ ನೀಡಬಾ
ರದು ಸೇರಿದಂತೆ ಸೇರಿ ಹಲವು ನಿರ್ಬಂಧಗಳನ್ನು ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ವಿಧಿಸಿ ಸೋಮವಾರ ಸುತ್ತೋಲೆ ಹೊರಡಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲೇಖಕ ಜಿ. ರಾಮಕೃಷ್ಣ ಅವರು, ‘ಅಧ್ಯಕ್ಷರನ್ನು ಎತ್ತಿ ಹೊರಗೆ ಬಿ‌ಸಾಡಿದರೆ ಏನು ಶಿಕ್ಷೆ ಎಂದು ತಿಳಿಸಿಲ್ಲ. ಆತನನ್ನು ಎತ್ತಿಕೊಂಡು ಹೊರಗೆ ಬಿ‌ಸಾಡಿ ಸಾಕು’ ಎಂದಿದ್ದಾರೆ.’ಇನ್ನು‌ ಕಸಾಪ ವೇದಿಕೆಯಲ್ಲಿ ನಾವು ಭಾಷಣ ಮಾಡಲು ಕಷ್ಟ ಉಂಟು ಮಾರಾಯರೇ’ ಎಂದು ಲೇಖಕ ಅರವಿಂದ ಚೊಕ್ಕಾಡಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ನಿಜಕ್ಕೂ ಇವು ಅದ್ಭುತ ಕ್ರಮಗಳು! ನಮ್ಮ ಕಸಾಪ ಇಡೀ ದೇಶಕ್ಕೇ ಮಾದರಿಯಾಗಿದೆ. ರಾಜ್ಯದ ವಿಧಾನ ಸಭೆಯಲ್ಲೂ ಸ್ಪೀಕರ್ ಅವರು ಈ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಪತ್ರಕರ್ತ ಬಿ.ಎಂ. ಹನೀಫ್‌ ವ್ಯಂಗ್ಯವಾಡಿದ್ದಾರೆ.

‘ಈ ನಿರ್ಬಂಧಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ. ‘ಕಾರ್ಯಕಾರಿ ಸಮಿತಿ ಸದಸ್ಯರಿಗೆ ಸಭೆಯಲ್ಲಿ ಭಾಗವಹಿಸಲು ಹಲವು ಕಟ್ಟುಪಾಡುಗಳನ್ನು ವಿಧಿಸಲಾಗಿದೆ. ಚುನಾವಣೆ ಮೂಲಕ ಆಯ್ಕೆಗೊಂಡಿರುವ ಕಸಾಪದ ಜಿಲ್ಲಾ ಘಟಕಗಳ ಅಧ್ಯಕ್ಷರಿಗೂ ಅನ್ವಯ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗುತ್ತದೆ. ಚುನಾಯಿತ ಜಿಲ್ಲಾಧ್ಯಕ್ಷರಿಗೂ ಸಭಾ ಮರ್ಯಾದೆಯ ಅರಿವು ಇದೆ. ಆದ್ದರಿಂದ, ಕಟ್ಟುಪಾಡುಗಳನ್ನು ಪಾಲಿಸಲು ಚುನಾಯಿತ ಪ್ರತಿನಿಧಿಗಳಿಗೆ ಅನ್ವಯಿಸುವುದು ಸೂಕ್ತವಲ್ಲ. ನಿರ್ಬಂಧ ವಿಧಿಸಿ ಹೊರಡಿಸಿರುವ ಸುತ್ತೋಲೆಯನ್ನು ವಾಪಸ್‌ ಪಡೆಯಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಆಗ್ರಹಿಸಿದ್ದಾರೆ.

24ಕ್ಕೆ ಸಮಾನ ಮನಸ್ಕರ ಸಭೆ

ಕನ್ನಡ ಸಾಹಿತ್ಯ ಪರಿಷತ್ತಿನ ಇತ್ತೀಚಿನ ನಡವಳಿಕೆಗಳನ್ನು ಖಂಡಿಸಿ ಇದೇ 24ರಂದು ಸಮಾನ ಮನಸ್ಕರ ಸಭೆ ಕರೆಯಲಾಗಿದೆ. 24ರ ಸಂಜೆ 4.30ಕ್ಕೆ ಚಾಮರಾಜಪೇಟೆಯ 1ನೇ ಮುಖ್ಯ ರಸ್ತೆಯ ಹೋಟೆಲ್‌ ಪ್ರಕಾಶ್‌ ಕೆಫೆಯಲ್ಲಿ ಸಭೆ ಕರೆಯಲಾಗಿದೆ.

‘ಪ್ರಜಾಸತ್ತಾತ್ಮಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿತ್ತಿನ ಈಗಿನ ಅಧ್ಯಕ್ಷರ ನಡವಳಿಕೆಯನ್ನು ಪ್ರತಿರೋಧಿಸುವ ಅಗತ್ಯವಿದೆ. ಇದು ಕೇವಲ ವ್ಯಕ್ತಿ ವಿರೋಧವಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಂಸ್ಕೃತಿಕ ಘನತೆ ಮತ್ತು ಗೌರವವನ್ನು ಕಾಪಾಡುವ ಕೆಲಸವೆಂದು ಭಾವಿಸಬೇಕಾಗಿದೆ. ಸಾಹಿತಿಗಳು, ಚಿಂತಕರು, ಕನ್ನಡಪರ ಹೋರಾಟಗಾರರು ಮತ್ತು ಸಾಹಿತ್ಯ ಪರಿಷತ್ತಿನ ಒಳಿತಿಗಾಗಿ ಆಸಕ್ತರಾದ ಸಮಾನ ಮನಸ್ಕರ ಸಭೆಯನ್ನು ಕರೆಯಲಾಗಿದೆ’ ಎಂದು ಸಂಚಾಲಕರಾದ ಸಿ.ಕೆ. ರಾಮೇಗೌಡ, ಗಾಯತ್ರಿ ರಾಮಣ್ಣ, ಶೇಖರಗೌಡ ಮಾಲಿ ಪಾಟೀಲ, ಶಂಕರ ಹೂಗಾರ, ಶಾಂತಕುಮಾರಿ, ಕೆ.ಆರ್‌. ಸೌಮ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

26ಕ್ಕೆ ವಾರ್ಷಿಕ ಸಾಮಾನ್ಯ ಸಭೆ

ವಿಜಯಪುರದಲ್ಲಿ ಮಾರ್ಚ್‌ 26ರಂದು ಕಾರ್ಯಕಾರಿ ಸಮಿತಿ ಸಭೆ ಆಯೋಜಿಸಲಾಗಿದೆ. ಇದೇ ದಿನ ಬೆಳಿಗ್ಗೆ 11ಕ್ಕೆ ವಿಜಯಪುರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ 106ನೇ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT