ಮಂಗಳವಾರ, ನವೆಂಬರ್ 24, 2020
22 °C
34 ಸಾವಿರ ಸೆಟ್‌ ಟಾಪ್‌ ಬಾಕ್ಸ್‌ ವಿತರಣೆ– ಒಪ್ಪಿಕೊಂಡ ಬಿಜೆಪಿ ಅಭ್ಯರ್ಥಿ?

ಮುನಿರತ್ನಗೆ ಉರುಳಾಗಲಿದೆಯೇ ಚುನಾವಣಾ ವೆಚ್ಚ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರರಿಗೆ ಸೆಟ್‌ ಟಾಪ್‌ ಬಾಕ್ಸ್‌ ವಿತರಿಸಿರುವುದು ಆರ್‌.ಆರ್‌.ನಗರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಈ ಬಾರಿ ದುಬಾರಿಯಾಗಲಿದೆಯೇ? 

ಹೌದು ಎನ್ನುತ್ತವೆ ಚುನಾವಣಾ ಆಯೋಗದ ಮೂಲಗಳು. ಮುನಿರತ್ನ ಅವರು ವಿತರಣೆ ಮಾಡಿರುವ ಸೆಟ್‌ ಟಾಪ್‌ ಬಾಕ್ಸ್‌ ಆನ್‌ ಮಾಡಿ ಟಿ.ವಿ ವೀಕ್ಷಿಸುವಾಗ ಪರದೆಯಲ್ಲಿ ಅವರ ಭಾವಚಿತ್ರ ಹಾಗೂ ಹೆಸರು ಕಾಣಿಸಿಕೊಳ್ಳುತ್ತಿದೆ. ಇದು ಕೂಡ ಪ್ರಚಾರ ಆಗುತ್ತದೆ. ಈ ವೆಚ್ಚವನ್ನು ಅಭ್ಯರ್ಥಿಯ ಚುನಾವಣಾ ವೆಚ್ಚವೆಂದೇ ಪರಿ
ಗಣಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ.  

ಪ್ರತಿ ಸೆಟ್‌ಟಾಪ್‌ ಬಾಕ್ಸ್‌ ಬಳಕೆಗೆ ಚುನಾವಣಾ ವೆಚ್ಚ ವೀಕ್ಷಕರು ದಿನಕ್ಕೆ ಎಷ್ಟು ದರ ನಿಗದಿ ಮಾಡಲಿದ್ದಾರೆ ಎಂಬುದರ ಆಧಾರದಲ್ಲಿ ಮುನಿರತ್ನ ಅವರ ಒಟ್ಟು ಚುನಾವಣಾ ವೆಚ್ಚವು ಆಯೋ ಗವು ನಿಗದಿಪಡಿಸಿದ ಮಿತಿಯನ್ನು ಮೀರುತ್ತದೆಯೋ ಇಲ್ಲವೋ ಎಂಬುದು ನಿರ್ಧಾರ ಆಗಲಿದೆ.

ಮುನಿರತ್ನ ಅವರು ಹೆಚ್ಚುವರಿ ನಿರ್ದೇಶಕರಾಗಿರುವ ರಾಕ್‌ಲೈನ್‌ ಟೆಲಿಕಮ್ಯುನಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಆರ್‌.ಆರ್‌.ನಗರ ಕ್ಷೇತ್ರದ ಮತದಾರರಿಗೆ ಉಚಿತವಾಗಿ ಸೆಟ್‌ಟಾಪ್‌ ಬಾಕ್ಸ್‌ ವಿತರಿಸಿದೆ. ಈ ಸೆಟ್‌ಟಾಪ್ ಬಾಕ್ಸ್‌ ಮೂಲಕ ಮುನಿರತ್ನ ತೆಲುಗು, ಮುನಿರತ್ನ ಸಿನಿಮಾ ಇತ್ಯಾದಿ ಹೆಸರುಗಳ ಟಿ.ವಿ.ವಾಹಿನಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ವೇಳೆ ಮುನಿರತ್ನ ಅವರ ಹೆಸರು ಮತ್ತು ಭಾವಚಿತ್ರ ಟಿ.ವಿ. ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಚುನಾವಣಾ ಅಕ್ರಮ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು (ಕೆಪಿಸಿಸಿ) ಮುಖ್ಯ ಚುನಾವಣಾ ಆಯುಕ್ತರಿಗೆ ಅ.26ರಂದು ದೂರು ನೀಡಿತ್ತು. ಒಂದು ಸೆಟ್‌ ಟಾಪ್‌ ಬಾಕ್ಸ್‌ ದರ ₹ 1 ಸಾವಿರ ಎಂದು ಪರಿಗಣಿಸಿದರೂ ಅವರು ಮಾಡಿರುವ ವೆಚ್ಚ ₹5 ಕೋಟಿ ದಾಟುತ್ತದೆ ಎಂದುಕೆಪಿಸಿಸಿ ಹೇಳಿತ್ತು. ಈ ಬಗ್ಗೆ ಪರಿಶೀಲಿಸು
ವಂತೆ ಮುಖ್ಯ ಚುನಾವಣಾ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

‘ಜನರಿಂದ ಹಣ ಪಡೆದೇ ಸೆಟ್‌ ಟಾಪ್‌ ಬಾಕ್ಸ್‌ ನೀಡಿದ್ದೇವೆ. ಚುನಾವಣೆ ಘೋಷಣೆ ಆಗುವುದಕ್ಕೆ ಮುನ್ನವೇ ಇವುಗಳನ್ನು ವಿತರಣೆ ಮಾಡಲಾಗಿದೆ ಎಂದು ಮುನಿರತ್ನ ಹೇಳಿದ್ದಾರೆ. ಅದನ್ನು ವೆಚ್ಚಕ್ಕೆ ಸೇರಿಸಲಾಗದು. ಆದರೆ, ಅವರು ನೀಡಿರುವ ಸೆಟ್‌ ಟಾಪ್‌ ಬಾಕ್ಸ್ ಬಳಸಿದಾಗ ಅವರ ಹೆಸರು ಮತ್ತು ಭಾವಚಿತ್ರಕಾಣಿಸಿಕೊಳ್ಳುತ್ತಿರುವುದರಿಂದ ಅದನ್ನು ಚುನಾವಣಾ ಪ್ರಚಾರ ಎಂದೇ ಪರಿಗಣಿಸಲು ಆಯೋಗ ಹೇಳಿದೆ. ಈ ವೆಚ್ಚವನ್ನು ಅಭ್ಯರ್ಥಿಯ ಚುನಾವಣೆಯ ವೆಚ್ಚಕ್ಕೆ ಸೇರಿಸಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್‌ ತಿಳಿಸಿದರು.

ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ₹ 28 ಲಕ್ಷ ಮಿತಿ ನಿಗದಿಪಡಿಸಿದ್ದ ಚುನಾವಣಾ ಆಯೋಗವು ಅದನ್ನು ಶೇ 10ರಷ್ಟು ಹೆಚ್ಚಳ ಮಾಡಿದೆ. ಹಾಗಾಗಿ ಚುನಾವಣಾ ವೆಚ್ಚವು ₹ 30.80 ಲಕ್ಷ ಮೀರುವಂತಿಲ್ಲ. 

‘ಕ್ಷೇತ್ರದಲ್ಲಿ ಒಟ್ಟು 34 ಸಾವಿರ ಸೆಟ್‌ ಟಾಪ್‌ ಬಾಕ್ಸ್‌ ವಿತರಿಸಿರುವುದಾಗಿ ಅಭ್ಯರ್ಥಿ ಒಪ್ಪಿಕೊಂಡಿದ್ದಾರೆ. ರಾಕ್‌ಲೈನ್‌ ಕಮ್ಯುನಿಕೇಷನ್ಸ್‌ನ ಟಿ.ವಿ.ವಾಹಿನಿಗಳ ಮೂಲಕ ಪ್ರಸಾರ ಮಾಡಲಾದ ಕಾರ್ಯಕ್ರಮಕ್ಕೆ ಪ್ರತಿ ಸೆಟ್‌ಟಾಪ್‌ ಬಾಕ್ಸ್‌ಗೆ ಎಷ್ಟು ವೆಚ್ಚವಾಗಲಿದೆ ಎಂದು ಚುನಾವಣಾ ವೆಚ್ಚ ವೀಕ್ಷಕರು ಲೆಕ್ಕ ಹಾಕಿ ಆಯೋಗಕ್ಕೆ ವರದಿ ನೀಡಲಿದ್ದಾರೆ’ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.

 ‘ವೆಚ್ಚ ವೀಕ್ಷಕರು, ಮುನಿರತ್ನ ಅವರು ನಾಮಪತ್ರ ಸಲ್ಲಿಸಿದ ಬಳಿಕದ 20 ದಿನಗಳ ಅವಧಿಯಲ್ಲಿ ಪ್ರತಿ ಸೆಟ್‌ ಟಾಪ್ ಬಾಕ್ಸ್‌ಗೆ ಕಾರ್ಯಕ್ರಮದ ಶುಲ್ಕ ₹ 1ರಂತೆ ವೆಚ್ಚ ಪರಿಗಣಿಸಿದರೆ ಇದರ ಮೊತ್ತ ₹ 6.80 ಲಕ್ಷ ಆಗಲಿದೆ. ದಿನಕ್ಕೆ ₹ 5ರಂತೆ ಪರಿಗಣಿಸಿದರೆ ಈ ವೆಚ್ಚವೇ ₹ 34 ಲಕ್ಷ ದಾಟಲಿದೆ. ಜತೆಗೆ ಅವರು ಚುನಾವಣಾ ಪ್ರಚಾರಕ್ಕೆ ಮಾಡಿರುವ ಇತರ ವೆಚ್ಚವನ್ನೂ ಲೆಕ್ಕ ಹಾಕಬೇಕಾಗುತ್ತದೆ. ಚುನಾವಣಾ ವೆಚ್ಚ ವೀಕ್ಷಕರ ಅಂಗಳದಲ್ಲಿ ಅಭ್ಯರ್ಥಿಯ ಭವಿಷ್ಯ ಅಡಗಿದೆ’ ಎಂದರು.

ಕಾರ್ಯಕ್ರಮ ಪ್ರಸಾರ ಮಾಡದಂತೆ ಸೂಚನೆ

‘ಚುನಾವಣಾ ಪ್ರಚಾರ ಅಂತ್ಯಗೊಂಡ ಬಳಿಕ ರಾಕ್‌ಲೈನ್‌ ಕಮ್ಯುನಿಕೇಷನ್ಸ್‌ನ ಟಿ.ವಿ. ವಾಹಿನಿಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡಬಾರದು ಎಂದು ಸೂಚನೆ ನೀಡಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವೆಚ್ಚ ಮಿತಿ ದಾಟಿದರೆ ಆಯ್ಕೆ ಅನರ್ಹ’

‘ಅಭ್ಯರ್ಥಿಯು ಚುನಾವಣಾ ಆಯೋಗವು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವೆಚ್ಚ ಮಾಡಿದರೆ ಅವರ ಆಯ್ಕೆಯನ್ನು ಅನರ್ಹಗೊಳಿಸಲು ಅವಕಾಶ ಇದೆ’ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಚುನಾವಣಾ ಪ್ರಚಾರಕ್ಕೆ ಮಾಡಿರುವ ವೆಚ್ಚದ ಬಗ್ಗೆ ಅಭ್ಯರ್ಥಿಯು ಆಯೋಗಕ್ಕೆ ಲೆಕ್ಕ ಕೊಡಬೇಕು. ಜೊತೆಗೆ ಆಯೋಗದ ಸಂಚಾರಿ ತಂಡಗಳ ಹಾಗೂ ವಿಡಿಯೊ ನಿಗಾ ತಂಡಗಳ ಅಧಿಕಾರಿಗಳು ಕೂಡಾ ಈ ಬಗ್ಗೆ ದಾಖಲೆಗಳನ್ನು ಕಲೆಹಾಕುತ್ತಾರೆ. ಇವುಗಳನ್ನು ಚುನಾವಣಾ ವೆಚ್ಚ ವೀಕ್ಷಕರು ತಾಳೆ ಹಾಕಲಿದ್ದಾರೆ. ಒಂದು ವೇಳೆ ಅಭ್ಯರ್ಥಿಯು ನಿಗದಿತ ಮಿತಿಗಿಂತ ಹೆಚ್ಚು ವೆಚ್ಚ ಮಾಡಿದರೆ ವೀಕ್ಷಕರು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುತ್ತಾರೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು