ಭಾನುವಾರ, ನವೆಂಬರ್ 27, 2022
26 °C

ಚೆಕ್‌ಗೆ ಸಹಿ ಕೋರಿ ಮುರುಘಾ ಶ್ರೀ ಅರ್ಜಿ: ಮೂರು ದಿನಗಳ ಅವಕಾಶ ನೀಡಿದ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕೆ ಪೊಕ್ಸೊ ಮತ್ತು ಎಸ್ಸಿ-ಎಸ್ಟಿ  ಜಾತಿನಿಂದನೆ ಆರೋಪದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿರುವ ಚಿತ್ರದುರ್ಗದ ‘ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠ’ದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಜೈಲಿನಿಂದಲೇ ಬ್ಯಾಂಕ್ ಖಾತೆಯ ಚೆಕ್‌ಗಳಿಗೆ  ಸಹಿ ಮಾಡಲು ಅವಕಾಶ ನೀಡಬೇಕು ಎಂಬ ಕೋರಿಕೆಗೆ ಹೈಕೋರ್ಟ್ ಷರತ್ತು ಬದ್ಧ ತಾತ್ಕಾಲಿಕ ಅನುಮತಿ ನೀಡಿದೆ.

ಈ ಸಂಬಂಧ ಆರೋಪಿ ಶಿವಮೂರ್ತಿ ಶರಣರು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಲೇವಾರಿ ಮಾಡಿತು.

ವಿಚಾರಣೆ ವೇಳೆ ಶರಣರ ಪರ ಹಾಜರಾಗಿದ್ದ ವಕೀಲೆ ಸ್ವಾಮಿನಿ ಗಣೇ‌ಶ್ ಮೋಹನಂಬಾಳ್, ಶರಣರು ಯಾವೆಲ್ಲಾ ಚೆಕ್ ಗಳಿಗೆ ಸಹಿ ಮಾಡುತ್ತಾರೆ ಎಂಬ ಪರಿಷ್ಕೃತ ದಾಖಲೆಗಳನ್ನು ನ್ಯಾಯಪೀಠಕ್ಕೆ ಮಂಡಿಸಿದರು. ಅಂತೆಯೇ ಶರಣರ ಪರವಾದ ಮತ್ತೊಬ್ಬ ವಕೀಲ ಸಂದೀಪ್ ಪಾಟೀಲ ವಿಡಿಯೊ ಕಾನ್ಫರೆನ್ಸ್ ಮುಖಾಂತರ ಹಾಜರಾಗಿ, ಒಂದು ಬಾರಿಗೆ ಮಾತ್ರವೇ ಚೆಕ್ ಗಳಿಗೆ ಸಹಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ದಾಖಲೆಗಳನ್ನು ಮೇಲೆ ಕಣ್ಣಾಡಿಸಿದ ನ್ಯಾಯಪೀಠ, ‘ಎಲ್ಲಾ ಚೆಕ್‌ಗಳೂ ಬರೀ ಸೆಲ್ಫ್ ಕಾಣ್ತಾ ಇವೆಯೆಲ್ಲಾ’ ಎಂದು ಮತ್ತೊಮ್ಮೆ ಅನುಮಾನ ವ್ಯಕ್ತಪಡಿಸಿ ಮೆಮೊ ಅನ್ನು ಕೂಲಂಕಷವಾಗಿ ಪರಿಶೀಲಿಸಿತು. ನಂತರ, ಅರ್ಜಿದಾರರು ಅಕ್ಟೋಬರ್, 3, 6 ಮತ್ತು 10ರಂದು ಮೂರು ದಿನಗಳ ಕಾಲ ಚೆಕ್‌ಗಳಿಗೆ ಸಹಿ ಮಾಡಲು ಅವಕಾಶ ನೀಡಿ ಆದೇಶಿಸಿತು.

‘ಯಾವುದೇ ಕಾರಣಕ್ಕೂ ನೌಕರರು ಸಂಬಳವಿಲ್ಲದೆ ಬಳಲಬಾರದು. ಇದು ಕೋರ್ಟ ನ ಕಾಳಜಿ. ಆದ್ದರಿಂದ, ತಾತ್ಕಾಲಿಕವಾಗಿ ಈ ಅನುಮತಿ ನೀಡಲಾಗುತ್ತಿದೆ. ಹಾಗಾಗಿ, ಅರ್ಜಿದಾರರು ಸಹಿ ಮಾಡಿದ ಚೆಕ್ ಗಳ ವಿವರವನ್ನು ತನಿಖಾಧಿಕಾರಿಗಳಿಗೆ ನೀಡಬೇಕು. ತನಿಖಾಧಿಕಾರಿ ಈ ದಾಖಲೆಗಳನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸಬೇಕು’ ಎಂದು ನಿರ್ದೇಶಿಸಿತು. ಪ್ರಾಸಿಕ್ಯೂಷನ್ ಪರ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಜವಳಿ ಹಾಜರಾಗಿದ್ದರು.

ಪ್ರಕರಣವೇನು?: 

‘ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಅನುವಾಗುವಂತೆ ಮತ್ತು ಮಠದ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ಇತರೆ ದಾಖಲೆಗಳಿಗೆ ಜೈಲಿನಿಂದಲೇ ಸಹಿ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಪರಿಣಾಮ ಶರಣರ ಪರ ವಕೀಲರು ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಈ ಕುರಿತಂತೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಬಿ.ಕೆ.ಕೋಮಲಾ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

ಅರ್ಜಿಯಲ್ಲಿ ಏನಿತ್ತು?: 

‘ಶಿವಮೂರ್ತಿ ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್‌) ಟ್ರಸ್ಟೀ ಮತ್ತು ಅಧ್ಯಕ್ಷರಾಗಿರತಕ್ಕದ್ದು ಎಂದು 2010ರ ನವೆಂಬರ್‌ 26ರಂದು ಟ್ರಸ್ಟ್‌ ಡೀಡ್‌ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದು, ಮಠ ಮತ್ತು ವಿದ್ಯಾಪೀಠದ ಬ್ಯಾಂಕ್‌ ಖಾತೆಯು ಅವರ ಹೆಸರಿನಲ್ಲೇ ಇರತಕ್ಕದ್ದು, ಕೇವಲ ಅಧ್ಯಕ್ಷರು ಮಾತ್ರವೇ ಇದರ ಬ್ಯಾಂಕ್‌ ಖಾತೆಯ ನಿರ್ವಹಣೆ ನೋಡಿಕೊಳ್ಳಬೇಕು. ಇದರ ಲೆಕ್ಕಪರಿಶೋಧನೆಯನ್ನು ಅರ್ಹ ವ್ಯಕ್ತಿ ವರ್ಷಕ್ಕೊಮ್ಮೆ ನಡೆಸತಕ್ಕದ್ದು’ ಎಂದು ಟ್ರಸ್ಟ್‌ ದಾಖಲೆಯಲ್ಲಿ ವಿವರಿಸಲಾಗಿತ್ತು.

‘ಬೃಹನ್ಮಠವು, ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ಎಸ್‌ಜೆಎಂ ವಿದ್ಯಾಪೀಠದ ಅಡಿಯಲ್ಲಿ ಹತ್ತಿರತ್ತಿರ 150 ವಿದ್ಯಾಸಂಸ್ಥೆಗಳನ್ನು ಹೊಂದಿದೆ. ಶರಣರು ಜೈಲಿನಲ್ಲಿ ಇರುವ ಕಾರಣ ಮಠದ ವಿದ್ಯಾಸಂಸ್ಥೆಗಳ ಸುಮಾರು 3,500 ನೌಕರರು ಸಂಬಳ ಇಲ್ಲದೆ ಪರದಾಡುವಂತಾಗಿದೆ. 

ನೌಕರರ ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್ ಗಳಿಗೆ ಸಹಿ ಮಾಡಲು ಅವಕಾಶ ಕಲ್ಪಿಸಿಕೊಡಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು. ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿರುತ್ತದೆ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು