ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಗ್ಗೆ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಆರೋಪಿಯೂ ಆಗಿರುವ ಸಂಗೀತ ನಿರ್ದೇಶಕ ಹಂಸಲೇಖ ಗುರುವಾರ ಹಾಜರಾದರು. ಇದೇ ಸಂದರ್ಭದಲ್ಲೇ ಬಜರಂಗದಳ ಸದಸ್ಯರು, ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹಂಸಲೇಖ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ವಿ–ಪ್ರ ವೇದಿಕೆ ಸದಸ್ಯರು ಬಸವನಗುಡಿ ಠಾಣೆಗೆ ದೂರು ನೀಡಿದ್ದರು.
ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಹಂಸಲೇಖ ಅವರಿಗೆ ನೋಟಿಸ್ ನೀಡಿದ್ದರು. ಅನಾರೋಗ್ಯ ಕಾರಣ ನೀಡಿದ್ದ ಹಂಸಲೇಖ ಎರಡು ಬಾರಿ ವಿಚಾರಣೆಗೆ ಗೈರಾಗಿದ್ದರು. ಮೂರನೇ ನೋಟಿಸ್ ಬರುತ್ತಿದ್ದಂತೆ ಬಸವನಗುಡಿ ಠಾಣೆಗೆ ಬಂದು, ವಿಚಾರಣೆ ಎದುರಿಸಿದರು.
ಠಾಣೆ ಎದುರು ಪ್ರತಿಭಟನೆ: ಹಂಸಲೇಖ ವಿಚಾರಣೆಗೆ ಬರುತ್ತಿದ್ದ ಸುದ್ದಿ ತಿಳಿದು ಬಜರಂಗದಳ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಠಾಣೆ ಎದುರು ಸೇರಿದ್ದರು. ಹಂಸಲೇಖ ಅವರ ಜೊತೆಯಲ್ಲಿ ನಟ ಚೇತನ್ ಠಾಣೆಗೆ ಬಂದಿದ್ದರು. ಇದನ್ನು ಖಂಡಿಸಿದ ಸದಸ್ಯರು, ಕಪ್ಪು ಬಾವುಟ ಪ್ರದರ್ಶಿಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು, ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಇದನ್ನೂ ಓದಿ.. ಪೇಜಾವರ ಸ್ವಾಮೀಜಿ ಕುರಿತ ಹೇಳಿಕೆ: ಕ್ಷಮೆಯಾಚಿಸಿದ ಹಂಸಲೇಖ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.