ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣ: ಪ್ರತ್ಯೇಕ ಆದೇಶ ಹಿಂಪಡೆಯಲು ಸೂಚನೆ

ಮೈಸೂರು ಜಿಲ್ಲಾಧಿಕಾರಿ ಆದೇಶದ ಬೆನ್ನಲ್ಲೇ ಕಂದಾಯ ಇಲಾಖೆ ಸುತ್ತೋಲೆ
Last Updated 8 ಏಪ್ರಿಲ್ 2021, 21:28 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಕೋವಿಡ್‌–19 ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೆಲವು ನಿರ್ಬಂಧ ವಿಧಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಅನುಮೋದನೆ ಹಾಗೂ ಮುಖ್ಯ ಕಾರ್ಯದರ್ಶಿ ಸಹಿ ಇಲ್ಲದೇ ಯಾವುದೇ ಆದೇಶ ಹೊರಡಿಸಬಾರದೆಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಸುತ್ತೋಲೆ ಹೊರಡಿಸಿದೆ.

‘ಕೆಲ ಜಿಲ್ಲೆಗಳ ಆಡಳಿತವು ಪ್ರತ್ಯೇಕ ಸಲಹೆ/ಸೂಚನೆ ಹೊರಡಿಸುತ್ತಿರುವುದು ಕಂಡುಬಂದಿದೆ. ಇದು ಮುಖ್ಯಮಂತ್ರಿಯವರು ನೀಡಿರುವ ನಿರ್ದೇಶನಕ್ಕೆ ವ್ಯತಿರಿಕ್ತವಾಗಿದೆ’‌ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಎನ್‌.ಮಂಜುನಾಥ್‌ ಪ್ರಸಾದ್‌ ಸುತ್ತೋಲೆಯಲ್ಲಿ ಹೇಳಿದ್ದಾರೆ.

‘ಕೋವಿಡ್‌ ನಿಯಂತ್ರಣ, ನಿರ್ವಹಣೆಗೆ ಸಂಬಂಧಿಸಿದಂತೆ ಇಲಾಖೆಗಳ ಮುಖ್ಯಸ್ಥರು, ಜಿಲ್ಲಾಡಳಿತ, ಪ್ರಾಧಿಕಾರ, ಪಾಲಿಕೆಗಳು, ಸ್ಥಳೀಯ ಸಂಸ್ಥೆಗಳು ಯಾವುದೇ ಪ್ರತ್ಯೇಕ ಆದೇಶ ಹೊರಡಿಸಬಾರದು. ಈಗಾಗಲೇ ಆದೇಶ ಹೊರಡಿಸಿದ್ದರೆ ತಕ್ಷಣವೇ ಹಿಂಪಡೆಯಬೇಕು. ನಿರ್ದಿಷ್ಟ ಪ್ರಸ್ತಾವಗಳಿದ್ದರೆ ಸರ್ಕಾರಕ್ಕೆ ಸಲ್ಲಿಸಬೇಕು. ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಜೊತೆ ಸಮಾಲೋಚಿಸಿ ಕಂದಾಯ ಇಲಾಖೆಯಿಂದ (ವಿಪತ್ತು ನಿರ್ವಹಣೆ) ನಿರ್ದೇಶನ ನೀಡಲಾಗುವುದು’ ಎಂದಿದ್ದಾರೆ.

ಬೆಳಿಗ್ಗೆಯಷ್ಟೇ ಆದೇಶ: ಮೈಸೂರಿನ ಪ್ರವಾಸಿ ತಾಣಗಳು, ರೆಸಾರ್ಟ್‌ಗಳು, ಕನ್ವೆನ್ಷನ್‌ ಹಾಲ್‌, ಪಾರ್ಟಿ, ರಿಕ್ರಿಯೇಷನ್‌ ಕ್ಲಬ್‌ ಹಾಗೂ ಚಿತ್ರಮಂದಿರ ಪ್ರವೇಶಕ್ಕೆ ಕೋವಿಡ್‌–19 ನೆಗೆಟಿವ್‌ ವರದಿ ತರುವುದನ್ನು ಕಡ್ಡಾಯ ಮಾಡಿರುವು
ದಾಗಿ ಗುರುವಾರ ಬೆಳಿಗ್ಗೆಯಷ್ಟೇ ಜಿಲ್ಲಾಧಿಕಾರಿ ಸಿಂಧೂರಿ ಹೇಳಿದ್ದರು.

‘ಏ.10ರಿಂದ ಏ.20ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಈ ಸ್ಥಳಗಳಿಗೆ ಭೇಟಿ ನೀಡುವ 72 ಗಂಟೆಯೊಳಗೆ ಕೋವಿಡ್‌ ನೆಗೆಟಿವ್‌ ವರದಿ ಪಡೆದಿರಬೇಕು. ಆದರೆ, ಯಾವುದೇ ಪ್ರವಾಸಿ ತಾಣವನ್ನು ಮುಚ್ಚುವುದಿಲ್ಲ’ ಎಂದು ತಿಳಿಸಿದ್ದರು.

ವರದಿ ತರಲು ಸಲಹೆ: ಬೆಂಗಳೂರಿನಿಂದ ಮೈಸೂರಿಗೆ ಬರುವವರು ಕೋವಿಡ್‌–19 ನೆಗೆಟಿವ್‌ ವರದಿ ತರುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದರು.

‘ನಿತ್ಯ 5 ಸಾವಿರ ವಾಹನಗಳು ಬೆಂಗಳೂರಿನಿಂದ ಬರುತ್ತಿವೆ. ಸಾಲು ರಜೆ ಇರುವುದರಿಂದ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಮೈಸೂರು ನಗರದಲ್ಲಿ ಕೋವಿಡ್‌ ಪ್ರಮಾಣ ಹೆಚ್ಚುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಆ ಪ್ರಮಾಣ ಕಡಿಮೆ ಇದೆ. ಬೆಂಗಳೂರಿನಿಂದ ಬಂದವರು ಗ್ರಾಮಾಂತರ ಪ್ರದೇಶಕ್ಕೆ ಹೋಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಆರ್‌ಟಿ–ಪಿಸಿಆರ್‌ ನೆಗೆಟಿವ್‌ ವರದಿ ತಂದರೆ ಸೂಕ್ತವಾಗುತ್ತದೆ. ಈ ಸಲಹೆ ಪಾಲಿಸಿ ಸೋಂಕು ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು. ಕೇರಳ ಗಡಿ ಪ್ರದೇಶ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಮಾಡಿದಂತೆ ತಡೆದು ಪರಿಶೀಲಿಸುವುದಿಲ್ಲ’ ಎಂದಿದ್ದರು.

ಮುನ್ನೆಚ್ಚರಿಕೆ ಕ್ರಮ: ‘ಮೈಸೂರಿನಲ್ಲಿ ಸೋಂಕು ಹರಡುವುದನ್ನು ತಡೆಯಲು, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್‌–19 ನೆಗೆಟಿವ್‌ ವರದಿ ತರುವ ಸಲಹೆ ನೀಡಲಾಗಿದೆ. ಇದಕ್ಕಾಗಿ ತಡೆದು ಪರಿಶೀಲಿಸುವುದಾಗಲಿ, ವರದಿ ಇಲ್ಲದಿದ್ದರೆ ವಾಪಸ್‌ ಕಳುಹಿಸುವುದಾಗಲಿ ಮಾಡುವುದಿಲ್ಲ’ ಎಂದೂ ಮೈಸೂರು ನಗರ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಸ್ಪಷ್ಟಪಡಿಸಿದ್ದರು.

ತೀರ್ಥಹಳ್ಳಿ: ಜ್ವರದಿಂದ ಬಳಲುತ್ತಿದ್ದ ಮಹಿಳೆ ಸಾವು
ತೀರ್ಥಹಳ್ಳಿ: ಕೋವಿಡ್‌ ಲಸಿಕೆ ಪಡೆದಿದ್ದ ತಾಲ್ಲೂಕಿನ ಹಲವರಿಗೆ ತೀವ್ರ ಜ್ವರ, ವಾಂತಿ, ಭೇದಿ ಕಾಣಿಸಿಕೊಂಡಿದೆ.

ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಸರುಗುತ್ತಿ ಗ್ರಾಮದ ಸುಶೀಲಾ (55) ಗುರುವಾರ ಮೃತಪಟ್ಟಿದ್ದಾರೆ. ಮಾರ್ಚ್ 30ರಂದು ಪಟ್ಟಣದ ಜೆ.ಸಿ. ಆಸ್ಪತ್ರೆಯಲ್ಲಿ ಅವರು ಕೋವಿಡ್ ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ದಿನದಿಂದ ಜ್ವರದಿಂದ ಬಳಲುತ್ತಿದ್ದರು.

‘ಲಸಿಕೆ ಪಡೆದ ಕೆಲವರಿಗೆ ಒಂದೆರಡು ದಿನಗಳ ಕಾಲ ಜ್ವರ ಕಂಡುಬಂದಿದೆ. ಮಹಿಳೆ ಮೃತಪಟ್ಟಿದ್ದರೂ ಸಾವಿಗೆ ಬೇರೆ ಕಾರಣ ಇರಬಹುದು. ಲಸಿಕೆ ಪಡೆದ ಯಾರಲ್ಲೂ ಹಲವು ದಿನಗಳು ಜ್ವರ ಕಾಣಿಸಿಕೊಂಡ ಉದಾಹರಣೆ ಇಲ್ಲ. ಮೃತರ ಮರಣೋತ್ತರ ಪರೀಕ್ಷೆಯ ನಂತರ ಮಾಹಿತಿ ದೊರಕಲಿದೆ’ ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಕೇತನ್ ಪ್ರತಿಕ್ರಿಯಿಸಿದರು.

ತಾಲ್ಲೂಕಿನಲ್ಲಿ ಇದುವರೆಗೆ 10 ಸಾವಿರಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. ಕೆಲವರಲ್ಲಿ ಜ್ವರ ಕಾಣಿಸಿಕೊಂಡು ಗುಣವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT