ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಆಯ್ಕೆ: ರಾಜ್ಯ ಕಾಂಗ್ರೆಸ್‌ ನಾಯಕರಲ್ಲಿ ಭಿನ್ನಮತ

ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ * ತಪ್ಪು ಮಾಡಿದವರಿಗೆ ನೋಟಿಸ್‌ ಕೊಡಿ– ರಮೇಶ್‌ಕುಮಾರ್‌
Last Updated 25 ಫೆಬ್ರುವರಿ 2021, 21:22 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಮಹಾನಗರಪಾಲಿಕೆಯ ಮೇಯರ್‌ ಆಯ್ಕೆ ವಿಷಯದಲ್ಲಿ ಜೆಡಿಎಸ್‌ ಜತೆ ಕೈಜೋಡಿಸಿರುವುದು ಮತ್ತು ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನಡೆಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ನಿವಾಸದಲ್ಲಿ ಗುರುವಾರ ನಡೆದ ಅನೌಪಚಾರಿಕ ಸಭೆಯಲ್ಲಿ ಮೈಸೂರು ಮೇಯರ್‌ ಆಯ್ಕೆ ವಿಷಯದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡ ಮತ್ತು ಆ ಪಕ್ಷಕ್ಕೆ ಮೇಯರ್‌ ಸ್ಥಾನ ಬಿಟ್ಟುಕೊಟ್ಟ ವಿಷಯದಲ್ಲಿ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

‘ಮೈಸೂರು ಜಿಲ್ಲೆಯ ರಾಜಕಾರಣದಲ್ಲಿ ಸ್ಥಳೀಯ ನಾಯಕರ ಜೊತೆ ಕೈಜೋಡಿಸುವ ಮೂಲಕ ಡಿ.ಕೆ. ಶಿವಕುಮಾರ್‌ ಮೂಗು ತೂರಿಸಿದ್ದಾರೆ. ತಮ್ಮ ಜೊತೆ ಚರ್ಚಿಸದೆ ಮೇಯರ್ ಆಯ್ಕೆ ವಿಚಾರದಲ್ಲಿ ಜೆಡಿಎಸ್‌ ಜೊತೆ ಚರ್ಚೆ ನಡೆಸಿದ್ದಾರೆ. ನನ್ನ ಗಮನಕ್ಕೆ ತಾರದೆ ತೀರ್ಮಾನಗಳಾಗಿವೆ. ನನ್ನ ಬಳಿ ಚರ್ಚಿಸದೆ ಕುಮಾರಸ್ವಾಮಿ ಜೊತೆ ದೂರವಾಣಿ ಕರೆ ಮಾಡಿ ತೀರ್ಮಾನ ಮಾಡುವುದು ಅಂದರೆ ಏನರ್ಥ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರೆಂದು ಮೂಲಗಳು ತಿಳಿಸಿವೆ.

‘ನಾನೇನಾದರೂ ಜೆಡಿಎಸ್‌ ಜೊತೆ ಮೈತ್ರಿ ಬೇಡ ಅಂದಿದ್ದೇನಾ? ನನ್ನ ಗಮನಕ್ಕೆ ತಾರದೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲಾಗಿದೆ. ಮೇಯರ್ ಸ್ಥಾನವನ್ನು ಮಾತಿನಂತೆ ಕಾಂಗ್ರೆಸ್‌ಗೆ ಬಿಟ್ಟು ಕೊಡಬೇಕಿತ್ತು. ಹೀಗಾಗಿ ಅಭ್ಯರ್ಥಿ ಹಾಕಿ ಎಂದು ಹೇಳಿದ್ದೆ. ಆದರೆ, ನನಗೆ ಗೊತ್ತಿಲ್ಲದೆ ಕುಮಾರಸ್ವಾಮಿ ಜೊತೆ ಶಿವಕುಮಾರ್ ಮಾತನಾಡಿರುವುದು ಎಷ್ಟರಮಟ್ಟಿಗೆ ಸರಿ? ನಾನು ಎಂದಾದರೂ ರಾಮನಗರ ಜಿಲ್ಲೆಯ ವಿಚಾರಕ್ಕೆ ಮೂಗು ತೂರಿಸಿದ್ದೇನಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ ಎಂದೂ ಹೇಳಲಾಗಿದೆ.

ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತ ಶಾಸಕ ಕೆ.ಆರ್‌. ರಮೇಶ್‌ಕುಮಾರ್‌, ‘ಮೈಸೂರು ಮೇಯರ್ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಮೊದಲು ನೋಟಿಸ್ ಕೊಡಿ’ ಎಂದಿದ್ದಾರೆ. ‘ಇಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದು ಮುಖ್ಯ ಅಲ್ಲ. ನಾವೆಲ್ಲರೂ ಒಂದು ವ್ಯವಸ್ಥೆಯೊಳಗೆ ಕೆಲಸ ಮಾಡುತ್ತಿರುತ್ತೇವೆ. ಹೀಗೆ ಮಾಡುವುದರಿಂದ ನಮ್ಮಲ್ಲಿ ಎಲ್ಲವೂ ಸರಿ ಇಲ್ಲ ಎಂಬಂತೆ ಬಿಂಬಿತವಾಗುತ್ತದೆ’ ಎಂದೂ ಹೇಳಿದ್ದಾರೆ.

‘ನಾನು ಯಾವುದೇ ತೀರ್ಮಾನ ಮಾಡಿಲ್ಲ. ಎಲ್ಲವೂ ಸ್ಥಳೀಯ ನಾಯಕರೇ ಮಾಡಿದ್ದಾರೆ. ಇದರಲ್ಲಿ ನನ್ನ ಪಾತ್ರ ಇಲ್ಲ. ಪಕ್ಷದ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್, ತನ್ವೀರ್ ಸೇಠ್ ಜೊತೆ ಮಾತನಾಡಿದ್ದೇನೆ. ಅವರು ಅಲ್ಲಿನ ಪರಿಸ್ಥಿತಿ ಹೇಳಿದ್ದರು. ನಾನು ಇದರಲ್ಲಿ ಏನೂ ತೀರ್ಮಾನ ಮಾಡಿಲ್ಲ. ಇನ್ನೊಮ್ಮೆ ತನ್ವೀರ್ ಜೊತೆ ಮಾತನಾಡುತ್ತೇನೆ’ ಎಂದು ಶಿವಕುಮಾರ್‌ ಹೇಳಿದ್ದಾರೆ. ಆಗ ರಮೇಶ್‌ಕುಮಾರ್‌, ‘ತನ್ವೀರ್ ಸೇಠ್ ತಪ್ಪು ಮಾಡಿದ್ದರೆ ಮುಲಾಜಿಲ್ಲದೆ ನೋಟಿಸ್ ಕೊಡಿ’ ಎಂದೂ ಸಲಹೆ ನೀಡಿದ್ದಾರೆ. ‘ಅಲ್ಲಿ ಏನು ಆಗಿದೆ, ಯಾಕೆ ಹೀಗಾಯಿತು ಎಂದು ಮೊದಲು ವರದಿ ತರಿಸಿಕೊಳ್ಳುತ್ತೇನೆ’ಎಂದು ಹೇಳಿ ಶಿವಕುಮಾರ್‌ ಸಭೆಯಿಂದ ನಿರ್ಗಮಿಸಿದ್ದಾರೆ.

ಸಭೆಯಲ್ಲಿ ಬೈರತಿ ಸುರೇಶ್‌, ಕೃಷ್ಣ ಬೈರೇಗೌಡ, ಜಮೀರ್‌ ಅಹ್ಮದ್‌ ಕೂಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT