ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ: ಭೂ ಪರಿಹಾರ ನಿಗದಿಗೆ 15 ದಿನಗಳಲ್ಲಿ ಸಭೆ

ಹೇಮಾವತಿ ನಾಲೆ ನಿರ್ಮಾಣಕ್ಕೆ ಬಳಸಿದ ರೈತರ ಭೂಮಿಗೆ ಸೂಕ್ತ ಪರಿಹಾರ | ಕಂದಾಯ ಸಚಿವ ಭರವಸೆ
Last Updated 18 ಮಾರ್ಚ್ 2021, 19:25 IST
ಅಕ್ಷರ ಗಾತ್ರ

ಬೆಂಗಳೂರು: ನಾಗಮಂಗಲ ತಾಲ್ಲೂಕಿನಲ್ಲಿ ಹೇಮಾವತಿ ನಾಲೆ ನಿರ್ಮಾಣಕ್ಕೆ ಬಳಸಿಕೊಂಡಿದ್ದ ರೈತರ ಭೂಮಿಗೆ ಪರಿಹಾರ ನೀಡಲು ಸರ್ಕಾರ ಬದ್ಧವಿದೆ. ಪರಿಹಾರದ ಮೊತ್ತದ ಬಗ್ಗೆ ಚರ್ಚಿಸಲು ಜನಪ್ರತಿನಿಧಿಗಳು, ರೈತರು ಹಾಗೂ ಅಧಿಕಾರಿಗಳ ಜೊತೆ15 ದಿನಗಳ ಒಳಗೆ ಸಭೆ ನಡೆಸುವುದಾಗಿ ಕಂದಾಯ ಸಚಿವ ಆರ್‌.ಅಶೋಕ ಭರವಸೆ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಜೆಡಿಎಸ್‌ನ ಎನ್‌.ಅಪ್ಪಾಜಿ ಗೌಡ ಅವರು ನಿಯಮ 68ರ ಅಡಿ ನೀಡಿದ ಸೂಚನೆಗೆ ಗುರುವಾರ ಸಚಿವರು ಉತ್ತರಿಸಿದರು.

2019ರ ಜ. 19ರಂದು ಮಂಡ್ಯ ಜಿಲ್ಲಾಧಿಕಾರಿ ಅವರು ನೇರ ಖರೀದಿ ಮೂಲಕ ದರ ನಿರ್ಧರಿಸಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಕೊಡಗು, ತುಮಕೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಕಾವೇರಿ ನೀರಾವರಿ ನಿಗಮದ ಬಂಡವಾಳ ಲೆಕ್ಕ ಶೀರ್ಷಿಕೆ ಅಡಿ ಬಿಡುಗಡೆಯಾಗುವ ಅನುದಾನದಲ್ಲೇ ಭೂಸ್ವಾಧೀನ ಪ್ರಕರಣಗಳಿಗೆ ಪಾವತಿ ಮಾಡಬಹುದು. ಇದಕ್ಕಾಗಿ ಸರ್ಕಾರ ₹ 200 ಕೋಟಿ ಕಾಯ್ದಿರಿಸಿದ್ದು, ಪರಿಹಾರ ನೀಡುವುದಕ್ಕೂ ಇದನ್ನು ಬಳಸಬಹುದು ಎಂದು ಸಚಿವರು ತಿಳಿಸಿದರು.

‘ನಾಗಮಂಗಲ ಶಾಖಾ ನಾಲೆಯ ವ್ಯಾಪ್ತಿಯಲ್ಲಿ 23 ಹಳ್ಳಿಗಳು ಬರುತ್ತವೆ. ಕೋವಿಡ್‌ ಕಾರಣದಿಂದಾಗಿ 2019–20 ಮತ್ತು 2020–21ರಲ್ಲಿ ನಿರೀಕ್ಷಿಸಿದಷ್ಟು ಅನುದಾನ ಬಿಡುಗಡೆಯಾಗಿಲ್ಲ. ಇಲ್ಲಿ ಭೂ ಪರಿಹಾರಕ್ಕೆ 2020ರ ಡಿಸೆಂಬರ್‌ನಲ್ಲಿ ₹ 1 ಕೋಟಿ ಬಿಡುಗಡೆ ಮಾಡಲಾಗಿದೆ. 2021ರ ಮಾರ್ಚ್‌ನಲ್ಲಿ ಈ ಗ್ರಾಮಗಳ ಜಮೀನುಗಳ ನೇರ ಖರೀದಿಗೆ ಆದ್ಯತೆ ಮೇಲೆ ಅನುದಾನ ಬಿಡುಗಡೆ ಮಾಡಲಿದ್ದೇವೆ’ ಎಂದರು.

‘ನಾಲೆಗಳ ನಿರ್ಮಾಣಕ್ಕೆ ರೈತರ ಭೂಮಿಯನ್ನು2003–04ರಲ್ಲೇ ಬಳಸಲಾಗಿದೆ. 2019ರಲ್ಲಿ ಗುಂಟೆಗೆ ₹ 33ಸಾವಿರ ಪರಿಹಾರ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಇದು ಯಾವ ನ್ಯಾಯ. 2014ರ ಭೂಸ್ವಾಧೀನ ಕಾಯ್ದೆ ಪ್ರಕಾರ ಜಾಗದ ಮಾರ್ಗಸೂಚಿ ಮೌಲ್ಯದ ನಾಲ್ಕು ಪಟ್ಟು ಪರಿಹಾರ ನೀಡಬೇಕು’ ಎಂದು ಎನ್‌.ಅಪ್ಪಾಜಿ ಗೌಡ ಒತ್ತಾಯಿಸಿದರು.

ಇದಕ್ಕೆ ದನಿ ಗೂಡಿಸಿದ ಕೆ.ಎ.ತಿಪ್ಪೇಸ್ವಾಮಿ, ‘ರೈತರು ಜಿಲ್ಲಾಧಿಕಾರಿ ಕಚೇರಿ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಸರ್ಕಾರ ಈ ಸಮಸ್ಯೆ ಬೇಗ ಇತ್ಯರ್ಥಪಡಿಸಲಿ’ ಎಂದರು.

ಕೆ.ಟಿ.ಶ್ರೀಕಂಠೇಗೌಡ, ‘2011ರಲ್ಲಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದೋ ಹೊಸ ಭೂಸ್ವಾಧೀನ ಕಾಯ್ದೆಯಡಿ ಸರ್ಕಾರ ಪರಿಹಾರ ನೀಡಲಿ. 2011ರ ದರದ ಪ್ರಕಾರವೇ ಪರಿಹಾರ ನೀಡುವುದಾದರೆ ಇಲ್ಲಿವರೆಗಿನ ಬಡ್ಡಿಯನ್ನೂ ಸೇರಿಸಿ ನೀಡಲಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT