ಬುಧವಾರ, ಆಗಸ್ಟ್ 10, 2022
21 °C
ಡಿ.23ಕ್ಕೆ ‘ನಮ್ಮನೆ ಸುಮ್ಮನೆ’ ಉದ್ಘಾಟನೆ * ರಾಜ್ಯದಲ್ಲಿ ಮೊದಲೆಂಬ ಹೆಗ್ಗಳಿಕೆ

ಮಂಗಳಮುಖಿಯರಿಂದ ಅನಾಥಾಶ್ರಮ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಂಗಳಮುಖಿಯರನ್ನು ನೋಡುವ ದೃಷ್ಟಿಕೋನವೇ ಬೇರೆ ಇದ್ದು, ಕೆಲವರು ಅದನ್ನು ಬದಲಿಸುವ ಕೆಲಸ ಮಾಡುತ್ತಿದ್ದಾರೆ. ‘ನಮ್ಮನೆ ಸುಮ್ಮನೆ’ ಎಂಬ ಸಂಘಟನೆ ರಚಿಸಿಕೊಂಡಿರುವ ಈ ಸಮುದಾಯದವರು ಅನಾಥರು, ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಆಶ್ರಯ ನೀಡಲು ಮುಂದಾಗಿದ್ದಾರೆ.

‘ಐವರು ಸೇರಿ ಸಂಘಟನೆ ರಚಿಸಿಕೊಂಡಿದ್ದೇವೆ. ಈಗಾಗಲೇ 25 ಜನರನ್ನು ಗುರುತಿಸಿದ್ದು, ಅವರಿಗೆ ಆಶ್ರಯ ಒದಗಿಸಿದ್ದೇವೆ. ‘ನಮ್ಮನೆ–ಸುಮ್ಮನೆ’ ಅನಾಥಾಶ್ರಮ ಇದೇ 23ರಂದು ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ’ ಎಂದು ಸಂಘಟನೆಯ ಸದಸ್ಯೆ ನಕ್ಷತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳಮುಖಿಯರಾದ ಮಿಲನ, ಸೌಂದರ್ಯ, ರೇಷ್ಮಾ, ನಕ್ಷತ್ರ, ತನುಶ್ರೀ ಸೇರಿ ನಗರದ ಗಂಗೊಂಡನಹಳ್ಳಿ ವೃತ್ತದ ಸಮೀಪ ಕಟ್ಟಡ ಬಾಡಿಗೆ ಪಡೆದು ಅನಾಥಾಶ್ರಮ ಸ್ಥಾಪಿಸುತ್ತಿದ್ದಾರೆ. ಈಗಾಗಲೇ ಬ್ಯೂಟಿಪಾರ್ಲರ್‌ ತೆರೆದು ಉಳಿದವರಿಗೆ ಮಾದರಿಯಾಗಿದ್ದ ಮಂಗಳಮುಖಿಯರು ಈಗ ಈ ಸಾಮಾಜಿಕ ಕಾರ್ಯಕ್ಕೆ ಮುಂದಾಗಿದ್ದು, ಇದು ರಾಜ್ಯದಲ್ಲಿ ಸ್ಥಾಪನೆಯಾಗುತ್ತಿರುವ ಮೊದಲ ಅನಾಥಾಶ್ರಮ.

‘ಮಂಗಳಮುಖಿಯರೆಂದರೆ ರಸ್ತೆ ಬದಿಯಲ್ಲಿ, ಸರ್ಕಲ್‌ಗಳಲ್ಲಿ ಭಿಕ್ಷೆ ಬೇಡುವವರು ಎಂದೇ ಜನ ನೋಡುತ್ತಾರೆ. ಇದನ್ನು ಬದಲಿಸುವುದರ ಜೊತೆಗೆ, ನಿರ್ಗತಿಕರಿಗೆ ನಮ್ಮಿಂದ ಸ್ವಲ್ಪ ಸಹಾಯ ಮಾಡುವ ಉದ್ದೇಶದಿಂದ ಈ ಅನಾಥಾಶ್ರಮ ಮಾಡುತ್ತಿದ್ದೇವೆ. ಊಟ, ವೈದ್ಯಕೀಯ ಸೌಲಭ್ಯ, ಆಪ್ತ ಸಮಾಲೋಚನೆ, ಮಾರ್ಗದರ್ಶನ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡುತ್ತೇವೆ. ಒಟ್ಟು 40 ಜನಕ್ಕೆ ಸ್ಥಳಾವಕಾಶ ಕಲ್ಪಿಸಬಹುದಾಗಿದೆ. ಮೊದಲು ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ’ ಎಂದು ನಕ್ಷತ್ರ ಹೇಳಿದರು.

‘ನಗರದಲ್ಲಿ ಓಡಾಡುವಾಗ ಯಾರಾದರೂ ಅನಾಥರು, ನಿರ್ಗತಿಕರು ಕಂಡರೆ ಅವರನ್ನು ರಕ್ಷಿಸಿ ಅನಾಥಾಶ್ರಮಗಳಿಗೆ ಬಿಡುತ್ತಿದ್ದೆವು. ಈಗ ನಾವೇ ಆಶ್ರಮ ಒಂದನ್ನು ಸ್ಥಾಪಿಸುತ್ತಿರುವುದು ಸಂತಸ ಎನಿಸುತ್ತದೆ’ ಎನ್ನುವ ಅವರು, ಈ ಉತ್ತಮ ಕಾರ್ಯಕ್ಕೆ ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಕೃತಜ್ಞತೆ ಹೇಳುವುದನ್ನು ಮರೆಯುವುದಿಲ್ಲ.

ಆರ್ಥಿಕ ನೆರವು ನೀಡಲು ಬಯಸುವವರು, ಕರ್ನಾಟಕ ಬ್ಯಾಂಕ್‌ ಖಾತೆ ಸಂಖ್ಯೆ– 9682500100555001, ಐಎಫ್‌ಎಸ್‌ಸಿ ಕೋಡ್– ಕೆಎಆರ್‌ಬಿ0000968, ಎಚ್‌ಎಂಟಿ ಶಾಖೆ, ಬೆಂಗಳೂರು ಈ ಖಾತೆಗೆ ಹಣ ಜಮಾ ಮಾಡಬಹುದು. ಅಗತ್ಯ ವಸ್ತುಗಳಾದ ತರಕಾರಿ, ಹಣ್ಣು, ದವಸ–ಧಾನ್ಯ, ಔಷಧವನ್ನೂ ಪೂರೈಸಬಹುದು ಎಂದು ಅವರು ಕೋರಿದರು.

ಸಂಪರ್ಕಕ್ಕೆ: 95352 36199, 80500 35748, 84316 68589.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು