ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಗಿರುತ್ತೆ ತಾಲಿಬಾನ್‌ಗಳ ಕ್ರೌರ್ಯ?: ಭಯಾನಕ ಸತ್ಯ ಬಿಚ್ಚಿಟ್ಟ ಕನ್ನಡಿಗ

Last Updated 20 ಆಗಸ್ಟ್ 2021, 15:20 IST
ಅಕ್ಷರ ಗಾತ್ರ

ಬೆಂಗಳೂರು: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ಗಳ ಕ್ರೌರ್ಯ ಎಂಥದ್ದು ಎಂಬುದನ್ನು ಅಲ್ಲಿಂದ ಬರುತ್ತಿರುವ ಸುದ್ದಿಗಳು ಮನದಟ್ಟುಮಾಡುತ್ತಿವೆ. ಅವರ ಕ್ರೌರ್ಯವನ್ನು ಕನ್ನಡಿಗರೊಬ್ಬರು ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ವಿವರಿಸಿದ್ದಾರೆ.

ಅಫ್ಗಾನಿಸ್ತಾನದ ಹೆರಾತ್‌ನಲ್ಲಿರುವ ಅಮೆರಿಕ ಮತ್ತು ನ್ಯಾಟೋ ಸೇನಾ ನೆಲೆಯ ಅಗ್ನಿಶಾಮಕ ತಂಡದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ದೀಪಕ್ ಕುಮಾರ್ ಯು, ತಾಲಿಬಾನ್‌ ಜೊತೆಗಿನ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

‘ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಹೆರಾತ್ ನಗರದ ಸ್ಥಳೀಯರೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಇಡೀ ನಗರದಲ್ಲಿ ಕರ್ಫ್ಯೂ ರೀತಿಯ ವಾತಾವರಣವಿದೆ. ಜನರು ತಮ್ಮ ಮನೆಗಳಿಂದ ಹೊರಗೆ ಬರುತ್ತಿಲ್ಲ’ ಎಂದು ಅವರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣ ಮಾತ್ರ ಕಾರ್ಯನಿರ್ವಹಿಸುತ್ತಿದೆ ಮತ್ತು ಉಳಿದವುಗಳನ್ನು ಮುಚ್ಚಲಾಗಿದೆ.

‘ನಾವು ಅಲ್ಲಿನ ಸೇನಾ ನೆಲೆಯನ್ನು ಖಾಲಿ ಮಾಡಿದಾಗ, ಸದ್ಯ ಕಾಬೂಲ್‌ನಲ್ಲಿ ನಡೆಯುತ್ತಿರುವಂತೆ ಯಾವುದೇ ಹುಚ್ಚುತನದ ಧಾವಂತ ಇರಲಿಲ್ಲ. ನಾವು ಖಾಲಿ ಮಾಡಿದ ಬಳಿಕ ನಮ್ಮ ನೆಲೆಯನ್ನು ಸ್ಥಳೀಯ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು’ ಎಂದು ಅವರು ಹೇಳುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದೀಪಕ್ ಕುಮಾರ್ ಅವರು, ಇರಾನ್ ಗಡಿಯಲ್ಲಿರುವ ಹೆರಾತ್ ಸೇನಾ ನೆಲೆಯಲ್ಲಿ ಆರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.

‘ನಾವು ಪೋರ್ಚುಗೀಸ್ ಮತ್ತು ಬ್ರಿಟಿಷ್ ಪ್ರಜೆಗಳೊಂದಿಗೆ ಕೆಲಸ ಮಾಡಿದ್ದೇವೆ. ಕೆಲವರು ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದಲೂ ಬಂದಿದ್ದರು. ಎಲ್ಲವೂ ಸರಿಯಾಗಿದ್ದಿದ್ದರೆ ನಾನು ಇನ್ನೂ ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಉಳಿಯಲು ಯೋಜಿಸುತ್ತಿದ್ದೆ’ ಎಂದು ಅವರು ಹೇಳುತ್ತಾರೆ.

‘ಭಯೋತ್ಪಾದಕರು ಹೆಚ್ಚು ಸಕ್ರಿಯವಾಗಿದ್ದ ಪ್ರದೇಶಗಳಲ್ಲಿ ಸೇನಾ ನೆಲೆಗಳನ್ನು ಸ್ಥಾಪಿಸಲಾಗಿತ್ತು. ನಾನು ಮಿಲಿಟರಿ ನೆಲೆಯಲ್ಲಿ ಕೆಲಸ ಮಾಡಿದಾಗ, ತಾಲಿಬಾನ್ ಉಡಾಯಿಸಿದ ರಾಕೆಟ್‌ಗಳು ಆವರಣದೊಳಗೆ ಬೀಳುತ್ತಿದ್ದವು. ಅದನ್ನು ಗುರುತಿಸಲು ರಾಡಾರ್ ಅನ್ನು ಬಳಸಲಾಗುತ್ತದೆ. ರಾಕೆಟ್ ಬೀಳುವ ಮುನ್ನ ಅದು ನಮಗೆ ಸಿಗ್ನಲ್ ನೀಡುತ್ತಿತ್ತು. ನಾವು ನಮ್ಮ ಬಂಕರ್‌ಗಳಿಗೆ ಓಡುತ್ತಿದ್ದೆವು, ನಾನು ಅಲ್ಲಿದ್ದ ಸಮಯದವರೆಗೆ, ನಮ್ಮ ಗುಂಪಿನಲ್ಲಿ ರಾಕೆಟ್ ಫೈರಿಂಗ್‌ನಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ’ ಎಂದು ದೀಪಕ್ ಹೇಳಿದ್ದಾರೆ.

‘ಮಿಲಿಟರಿ ಅಧಿಕಾರಿಗಳು ಎಂದಿಗೂ ನಮ್ಮೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲಿಲ್ಲ, ಆದರೂ, ನಾವು ಅವರ ಕಾರ್ಯಾಚರಣೆಯನ್ನು ಕುತೂಹಲದಿಂದ ಗಮನಿಸುತ್ತಿದ್ದೆವು‘ ಎಂದು ಅವರು ಹೇಳಿದರು.

‘ಫೈಟರ್ ಜೆಟ್‌ಗಳಲ್ಲಿ ತಾಲಿಬಾನ್ ವಿರುದ್ಧ ಹೋರಾಡಲು ಹೋದವರು ಮೃತ ದೇಹಗಳು ಮತ್ತು ಗಾಯಗೊಂಡ ಸೈನಿಕರೊಂದಿಗೆ ಮರಳುತ್ತಿದ್ದರು. ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿದ್ದೆವು’ ಎಂದು ದೀಪಕ್ ಹೇಳುತ್ತಾರೆ.

ಅಮೆರಿಕದ ಸೇನೆ ಇರುವವರೆಗೂ ತಾಲಿಬಾನ್ ತನ್ನ ಬಾಲ ಬಿಚ್ಚಿರಲಿಲ್ಲ. ಆದರೆ, ದೀಪಕ್ ಕುಮಾರ್ ಪ್ರಕಾರ, ಯುದ್ಧ ಘೋಷಿಸಲು ಆಧುನಿಕ ಮದ್ದುಗುಂಡುಗಳೊಂದಿಗೆ ತಾಲಿಬಾನ್ ಸಿದ್ಧವಾಗಿತ್ತು.

ಅಮೆರಿಕ ತನ್ನ ಸಶಸ್ತ್ರ ಪಡೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗ, ನನ್ನ ಸಂಪರ್ಕದಲ್ಲಿದ್ದ ಅಫ್ಗಾನಿಸ್ತಾನ ಸ್ಥಳೀಯರು ಹೆದರಿದ್ದರು. ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಒಂದು ತಿಂಗಳಲ್ಲಿ ತಾಲಿಬಾನ್ ಇಡೀ ದೇಶವನ್ನು ವಶಪಡಿಸಿಕೊಳ್ಳುತ್ತದೆ ಎಂದು ಅವರು ಹೇಳುತ್ತಿದ್ದರು. ಆ ಮಾತು ಈಗ ನಿಜವಾಯಿತು ಎಂದು ಅವರು ಹೇಳಿದ್ದಾರೆ.

ಅಮೆರಿಕನ್ನರು ಹೋಗುವ ಮುನ್ನ, ಅಫ್ಗಾನಿಸ್ತಾನ ಸೇನೆಗೆ ತರಬೇತಿ ನೀಡಿದ್ದರು. ಆದರೂ, ಸುಮಾರು 3 ಲಕ್ಷ ಬಲಿಷ್ಠ ಸೇನೆಯು 50-60 ಸಾವಿರ ತಾಲಿಬಾನ್ ಸೈನ್ಯದ ವಿರುದ್ಧ ದೇಶವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಆಫ್ಗನ್ನರು ಇದನ್ನು ಊಹಿಸಿದ್ದಾರೆ ಮತ್ತು ಆಫ್ಗಾನ್ ಜನರ ಸ್ವಭಾವವು ನಿಜವಾಗಿಯೂ ಉತ್ತಮವಾಗಿದೆ ಎಂದು ಅವರು ಹೇಳುತ್ತಾರೆ.

ಅಮೆರಿಕ ಮತ್ತು ನ್ಯಾಟೋ ದೇಶಗಳು ಸ್ಥಾಪಿಸಿದ ಮಿಲಿಟರಿ ವ್ಯವಸ್ಥೆಯಲ್ಲಿ ಅನೇಕ ಭಾರತೀಯರಿದ್ದರು. ಅವರಲ್ಲಿ ಹೆಚ್ಚಿನವರು ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಮರಳಿದ್ದಾರೆ. ನನ್ನ ಸ್ನೇಹಿತರೆಲ್ಲರೂ ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ ಎಂದು ದೀ‍ಪಕ್ ಹೇಳಿದರು.

ಅಮೆರಿಕದ ಸೇನೆ ಇದ್ದಾಗ, ತಾಲಿಬಾನ್‌ಗಳನ್ನು ದೂರದ ಹಳ್ಳಿಗಳಿಗೆ ತಳ್ಳಲಾಗಿತ್ತು. ಸೇನೆಯೊಂದಿಗೆ ಸಂಪರ್ಕದಲ್ಲಿರುವ ಸ್ಥಳೀಯ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಹಿಂತಿರುಗಲು ತುಂಬಾ ಹೆದರುತ್ತಿದ್ದರು. ತಾಲಿಬಾನ್‌ಗಳು ಜನರನ್ನು ಗ್ರಾಮಗಳ ಒಳಗೆ ಬಿಟ್ಟುಕೊಳ್ಳುವ ಮೊದಲು ಬೆರಳಚ್ಚುಗಳನ್ನು ಪಡೆಯುತ್ತಿದ್ದರು. ಸೇನೆಯೊಂದಿಗೆ ಸಂಪರ್ಕ ಹೊಂದಿರುವ ಯಾರಾದರೂ ಕಂಡುಬಂದರೆ, ಅಲ್ಲಿಯೇ ಕೊಲ್ಲುತ್ತಿದ್ದರು. ಸೇನೆಯೊಂದಿಗೆ ಸಂಪರ್ಕದಲ್ಲಿದ್ದ ಗ್ರಾಮಸ್ಥರು ಹಲವು ವರ್ಷಗಳ ಕಾಲ ತಮ್ಮ ಸ್ಥಳಗಳಿಗೆ ಭೇಟಿ ನೀಡಲಿಲ್ಲ ಎಂದು ಅವರು ಹೇಳಿದರು.

ದೀಪಕ್ ಕುಮಾರ್ ಅವರಿಗೆ ಅಫ್ಗಾನಿಸ್ತಾನದ ಸೇನಾ ನೆಲೆಯಲ್ಲಿ ಉದ್ಯೋಗಾವಕಾಶ ಇರುವ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಸಿಕ್ಕಿತ್ತು. ಸ್ಕೈಪ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಿದ್ದರು.

ನಂತರ ಅವರು ನವದೆಹಲಿಯಲ್ಲಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿದ್ದರು. ಆಯ್ಕೆಯಾದ ಬಳಿಕ ಕಾಬೂಲ್‌ಗೆ ನಿಯೋಜನೆಗೊಂಡಿದ್ದರು. ಐದು ಅಥವಾ ಆರು ತಿಂಗಳಿಗೊಮ್ಮೆ ಅವರಿಗೆ ಮೂರು ದಿನಗಳ ರಜೆ ನೀಡಲಾಯಿತು ಮತ್ತು ಅವರ ಪ್ರಯಾಣದ ವೆಚ್ಚವನ್ನು ನೋಡಿಕೊಳ್ಳಲಾಗುತ್ತಿತ್ತು.

‘ಆರಂಭದಲ್ಲಿ ನಾನು ತುಂಬಾ ಹೆದರುತ್ತಿದ್ದೆ. ಇದು ಸೇನಾ ನೆಲೆಯಾಗಿರುವುದರಿಂದ ಸುರಕ್ಷಿತವಾಗಿರುತ್ತದೆ ಎಂಬುದನ್ನು ಅರಿತುಕೊಂಡೆ. ನನ್ನ ಅನೇಕ ಸ್ನೇಹಿತರು ಈಗಾಗಲೇ ಕೆಲಸ ಮಾಡಿದ್ದಾರೆ. ಹಾಗಾಗಿ, ನಾನೂ ಸಹ ಅಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡೆ’ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT