ಗುರುವಾರ , ಜುಲೈ 7, 2022
23 °C
ಕನ್ನಡದ ಇನ್ನೆಷ್ಟು ಮಕ್ಕಳು ನೀಟ್‌ಗೆ ಬಲಿಯಾಗಬೇಕು?

ಟ್ವಿಟರ್‌ನಲ್ಲಿ ‘ನೀಟ್‌’ ರದ್ದು ಅಭಿಯಾನ: ಹಿಂದಿನಂತೆ ಸಿಇಟಿ ವ್ಯವಸ್ಥೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಶೆಲ್‌ ದಾಳಿಯಲ್ಲಿ ಹಾವೇರಿಯ ನವೀನ್‌ ಸಾವಿಗೀಡಾದ ಬಳಿಕ, ವೈದ್ಯಕೀಯ ಕಾಲೇಜುಗಳ ಪ್ರವೇಶ ಪ್ರಕ್ರಿಯೆಯ ಬಗ್ಗೆ ಅಸಮಾಧಾನ ವ್ಯಕ್ತ ವಾಗಿದೆ. ‘ನವೀನ್‌ ಸಾವಿಗೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಕಾರಣವಾಗಿದೆ. ನೀಟ್‌ ರದ್ದು ಪಡಿಸಬೇಕು’ ಎಂದು ಒತ್ತಾಯಿಸಿ ಟ್ವಿಟರ್‌ನಲ್ಲಿ ಬುಧವಾರ ಬೃಹತ್ ಅಭಿಯಾನ ನಡೆಯಿತು.

ಕರ್ನಾಟಕ ರಕ್ಷಣಾ ವೇದಿಕೆ ಆರಂಭಿ ಸಿದ ಅಭಿಯಾನಕ್ಕೆ 20 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿ ದರು. ಕೆಲವರು ವ್ಯಂಗ್ಯಚಿತ್ರಗಳನ್ನು ಲಗ ತ್ತಿಸುವ ಮೂಲಕ ಅಭಿಯಾನವನ್ನು ಬೆಂಬಲಿಸಿದರು.

‘ಕನ್ನಡದ ಹುಡುಗ ನವೀನ್ ಸಾವಿನ ಹೊಣೆ ಹೊರುವವರು ಯಾರು? ಒಂದೆಡೆ ವೈದ್ಯಕೀಯ ಸೀಟಿಗೆ ಕೋಟ್ಯಂತರ ರೂಪಾಯಿ ಬಾಚುವ ಕ್ಯಾಪಿಟೇಷನ್ ಲಾಬಿ, ಇನ್ನೊಂದೆಡೆ ಕನ್ನಡಿಗರ ಹಕ್ಕುಗಳನ್ನು ಕಸಿಯುತ್ತಿರುವ ನೀಟ್ ಎಂಬ ಷಡ್ಯಂತ್ರ. ಬಲಿಯಾಗು ತ್ತಿರುವುದು ಕನ್ನಡಿಗರು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಟ್ವೀಟ್‌ ಮಾಡಿದ್ದಾರೆ.

‘ಉತ್ತರ ಪ್ರದೇಶ 21 ಕೋಟಿ ಜನಸಂಖ್ಯೆ ಹೊಂದಿದೆ. ಆದರೆ, 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ವೈದ್ಯಕೀಯ ಕಾಲೇಜುಗಳು ಆ ರಾಜ್ಯದಲ್ಲಿ ಇಲ್ಲ! ನೀಟ್ ಜಾರಿಗೆ ಬಂದಿದ್ದು ಈ ಕಾರಣಕ್ಕೆ. ಒಟ್ಟು 69 ವೈದ್ಯಕೀಯ ಕಾಲೇಜು ಗಳೊಂದಿಗೆ ಕರ್ನಾಟಕ ಮೊದಲ ಸ್ಥಾನ ದಲ್ಲಿದೆ. ಆದರೆ, ಕನ್ನಡದ ಮಕ್ಕಳಿಗೇ ವೈದ್ಯಕೀಯ ಸೀಟು ಇಲ್ಲ. ನೀಟ್ ಹೆಸರಲ್ಲಿ ನಮ್ಮ ಹಕ್ಕುಗಳನ್ನು ಕಿತ್ತು ಕೊಳ್ಳಲಾಗಿದೆ. ಕರ್ನಾಟಕದ ಕಾಲೇಜು ಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಯೋಜನೆಯೇ ನೀಟ್. ಮತ್ತೇನೂ ಅಲ್ಲ’ ಎಂದು ವಿವರಿಸಿದ್ದಾರೆ.

ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜಿ.ಸಿ. ಚಂದ್ರಶೇಖರ್‌, ‘ಕರ್ನಾಟಕದ ಜನ ಸಂಖ್ಯೆಗಿಂತಲೂ ಮೂರು ಪಟ್ಟು ಹೆಚ್ಚು ಇರುವ ಉತ್ತರ ಪ್ರದೇಶದಲ್ಲಿ ಕೇವಲ 55 ವೈದ್ಯಕೀಯ ಕಾಲೇಜುಗಳಿವೆ. ನಾವು ಕಷ್ಟಪಟ್ಟು ಕಟ್ಟಿಕೊಂಡ ಸೌಕರ್ಯಗಳನ್ನು ಬೇರೆಯವರಿಗೆ ಬಿಟ್ಟುಕೊಡುವಂತಾಯಿತು! ಕನ್ನಡಿಗರದ್ದು ಜಾಗ ಮತ್ತು ಮೂಲಸೌಕರ್ಯಗಳು. ಆದರೆ, ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜಿ.ಸಿ. ಚಂದ್ರಶೇಖರ್‌, ‘ಕರ್ನಾಟಕದ ಜನ ಸಂಖ್ಯೆಗಿಂತಲೂ ಮೂರು ಪಟ್ಟು ಹೆಚ್ಚು ಇರುವ ಉತ್ತರ ಪ್ರದೇಶದಲ್ಲಿ ಕೇವಲ 55 ವೈದ್ಯಕೀಯ ಕಾಲೇಜುಗಳಿವೆ. ನಾವು ಕಷ್ಟಪಟ್ಟು ಕಟ್ಟಿಕೊಂಡ ಸೌಕರ್ಯಗಳನ್ನು ಬೇರೆಯವರಿಗೆ ಬಿಟ್ಟುಕೊಡುವಂತಾಯಿತು! ಕನ್ನಡಿಗರದ್ದು ಜಾಗ ಮತ್ತು ಮೂಲಸೌಕರ್ಯಗಳು. ಆದರೆ, ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

‘ತಮಿಳುನಾಡು ನೀಟ್ ತೆಗೆದು ಹಾಕಲು ಹೋರಾಟ ಮಾಡುತ್ತಿದ್ದರೆ, ನಾವಿಲ್ಲಿ ಕಿತ್ತಾಡುತ್ತಿದ್ದೇವೆ. ದ್ವಿತೀಯ ಪಿಯುಸಿಯಲ್ಲಿ ಶೇ 97ರಷ್ಟು ಅಂಕಗಳನ್ನು ತೆಗೆದರೂ ನಮ್ಮಲ್ಲಿ ನವೀನ್‌ಗೆ ವೈದ್ಯಕೀಯ ಸೀಟ್ ಸಿಗಲಿಲ್ಲ. ಅದಕ್ಕೆ ಕಾರಣ ನೀಟ್‌. ಈ ಪರೀಕ್ಷೆಯನ್ನು ಮೊದಲು ರದ್ದುಮಾಡಿ. ಸಿಇಟಿ ಮರುಸ್ಥಾಪಿಸಿ’ ಎಂದು ರೂಪೇಶ್‌ ರಾಜಣ್ಣ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

‘ವೈದ್ಯಕೀಯ ಕಾಲೇಜುಗಳಿಗೆ ಭೂಮಿ ಮತ್ತು ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ನೆರವು ನೀಡುತ್ತದೆ. ಆದರೆ, ನಮ್ಮ ಮಕ್ಕಳ ಅವಕಾಶಗಳನ್ನು ಕೇಂದ್ರ ಸರ್ಕಾರ ಕಬಳಿಸುತ್ತಿದೆ’ ಎಂದು ಶ್ರುತಿ ಮರುಳಪ್ಪ ಟ್ವೀಟ್‌ ಮಾಡಿದ್ದಾರೆ.

'ಇದು ಸರಿಯಾದ ಸಮಯ. ಎಲ್ಲ ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳ ರಾಷ್ಟ್ರೀಕರಣವಾಗಬೇಕು. ಸರ್ಕಾರ ಉನ್ನತ ಹಂತದ ಶಿಕ್ಷಣಕ್ಕೆ ಕಡಿಮೆ ಶುಲ್ಕ ನಿಗದಿಪಡಿಸಬೇಕು' ಎಂದು ಪತ್ರಕರ್ತ ದಿನೇಶ್‌ ಕುಮಾರ್‌ ಒತ್ತಾಯಿಸಿದ್ದಾರೆ.

‘ಪ್ರತಿಮೆ ನಿರ್ಮಾಣ ಕೈಬಿಡಿ’

‘ನೀಟ್‌ ಮಾರಕ. ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ. ಪ್ರತಿಮೆಗಳನ್ನು ನಿರ್ಮಿಸಿ ಹಣ ವ್ಯರ್ಥ ಮಾಡುವ ಬದಲು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿ. ಶೇ 95ಕ್ಕೂ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ವಿದ್ಯಾರ್ಥಿಗಳಿಗೂ ವೈದ್ಯಕೀಯ ಸೀಟುಗಳು ದೊರೆಯುತ್ತಿಲ್ಲ. ಆದ್ದರಿಂದ, ಮೀಸಲಾತಿಯ ಬಗ್ಗೆ ದೂರುವುದನ್ನು ನಿಲ್ಲಿಸಿ, ನೀಟ್‌ ವ್ಯವಸ್ಥೆ ವಿರುದ್ಧ ಮಾತನಾಡಿ’ ಎಂದು ಚೇತನ್‌ ಕೃಷ್ಣ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು