ಬುಧವಾರ, ಮೇ 25, 2022
31 °C
ವಿದ್ಯಾರ್ಥಿಗಳ ದೂರು

ಎನ್‌ಇಟಿ: ಕನ್ನಡ ವಿಷಯದ ‘ಕೀ’ ಉತ್ತರಗಳಲ್ಲಿ ತಪ್ಪು: ದುಬಾರಿ ಶುಲ್ಕಕ್ಕೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಎನ್‌ಇಟಿ) ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕಟಿಸಿರುವ ಉತ್ತರಗಳು ಹಲವು ತಪ್ಪುಗಳಿಂದ ಕೂಡಿವೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ (ಎನ್‌ಟಿಎ) ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಎನ್ಇಟಿ ನಡೆಸಿತ್ತು. ಎನ್‌ಟಿಎ ಪ್ರಕಟಿಸಿರುವ ’ಕೀ‘ ಉತ್ತರಗಳಲ್ಲಿ ತಪ್ಪುಗಳಿವೆ ಎಂದು ಅಭ್ಯರ್ಥಿಗಳು ತಿಳಿಸಿದ್ದಾರೆ.

ಕನ್ನಡ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಡಿಸೆಂಬರ್‌ 26ರಂದು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ನಡೆಸಿತ್ತು. ಆದರೆ, ಕೆಲವರ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಕಾಣಿಸಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ಎನ್‌ಟಿಎ ಜನವರಿ 4 ರಂದು ಮರು ಪರೀಕ್ಷೆ ನಡೆಸಿತ್ತು.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು, ‘ಕೀ‘ ಉತ್ತರಗಳನ್ನು ಜನವರಿ 21ರಂದು ಬಿಡುಗಡೆ ಮಾಡಿದೆ. ಯುಜಿಸಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ugcnet.nta.nic.inನಲ್ಲಿ ಪರಿಶೀಲಿಸಬಹುದು. ಈ ಬಗ್ಗೆ ಆಕ್ಷೇಪಗಳನ್ನು ಜನವರಿ 24ರವರೆಗೆ ಸಲ್ಲಿಬಹುದಾಗಿದೆ ಎಂದು ತಿಳಿಸಿದೆ.

ಆದರೆ, ಅಭ್ಯರ್ಥಿಗಳು ಪ್ರತಿ ಉತ್ತರಗಳನ್ನು ಪ್ರಶ್ನಿಸಿ ಆಕ್ಷೇಪ ಸಲ್ಲಿಸಿದರೆ, ₹1,000 ಶುಲ್ಕ ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳ ಆಕ್ಷೇಪ ಸರಿಯಾಗಿದ್ದರೆ ಮಾತ್ರ ‘ಕೀ‘ ಉತ್ತರ ಪರಿಷ್ಕರಿಸಲಾಗುತ್ತದೆ ಮತ್ತು ಪಾವತಿಸಿದ ಶುಲ್ಕವನ್ನೂ ಮರುಪಾವತಿಸಲಾಗುತ್ತದೆ.

ಎನ್‌ಟಿಎ ಪ್ರಕಟಿಸಿರುವ ಉತ್ತರಗಳು ತಪ್ಪಾಗಿವೆ ಎಂದು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಶುಲ್ಕ ದುಬಾರಿಯಾಗಿದೆ. ಬಡ ವಿದ್ಯಾರ್ಥಿಗಳು ಯಾರೂ ಮುಂದಾಗುವುದಿಲ್ಲ. ಹೀಗಾಗಿ, ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಕನ್ನಡ ಕೀ ಉತ್ತರಗಳಲ್ಲಿ ಸುಮಾರು 20 ಉತ್ತರಗಳು ತಪ್ಪಾಗಿವೆ. ಇವುಗಳನ್ನು ಪ್ರಶ್ನಿಸಲು  ₹20 ಸಾವಿರ ಶುಲ್ಕ ಪಾವತಿಸಬೇಕಾಗುತ್ತದೆ. ಬಡ ವಿದ್ಯಾರ್ಥಿಗಳು ಇಷ್ಟೊಂದು ಪಾವತಿಸಲು ಸಾಧ್ಯವಾಗುವುದಿಲ್ಲ‘ ಎಂದು ರಾಯಚೂರಿನ ಅಭ್ಯರ್ಥಿ ಲಕ್ಷ್ಮಣ್‌  ಎನ್ನುವವರು ದೂರಿದ್ದಾರೆ.

ಜತೆಗೆ, ಅಭ್ಯರ್ಥಿಗಳು ಕನ್ನಡ ವಿಷಯದ 100 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ, 82 ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ವೆಬ್‌ಸೈಟ್‌ನಲ್ಲಿ ತೋರಿಸುತ್ತಿದೆ. ಇನ್ನು ಕೆಲವರಿಗೆ 70 ಪ್ರಶ್ನೆಗಳಿಗೆ ಉತ್ತರಿಸಿಲ್ಲ ಎಂದು ತೋರಿಸುತ್ತಿದೆ. ಇದೇ ರೀತಿಯ ಸಮಸ್ಯೆ ಹಲವರಿಗೆ ಆಗಿದೆ. ಉತ್ತರಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶವನ್ನು ಸಹ ನೀಡಿಲ್ಲ. ಎನ್‌ಟಿಎ ಮಾಡುವ ತಪ್ಪಿಗೆ ಅಮಾಯಕ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಬೆಂಗಳೂರಿನ ಮಂಜುನಾಥ್‌ ಎನ್ನುವವರು ತಿಳಿಸಿದ್ದಾರೆ.

ಉದಾಹರಣೆಗೆ ಟಾಲ್‌ಸ್ಟಾಯ್‌ನ ಕಲಾಮೀಮಾಂಸೆ ಬರೆದವರು ಸಿ.ಪಿ. ಕೃಷ್ಣಕುಮಾರ್‌ ಅವರು. ಆದರೆ ಎನ್‌ಟಿಎ ಕೀ ಉತ್ತರದಲ್ಲಿ ಎನ್. ಬಸವರಾರಾಧ್ಯ ಎನ್ನುವುದಾಗಿ ಪ್ರಕಟಿಸಲಾಗಿದೆ ಎಂದು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು