ಗುರುವಾರ , ಮಾರ್ಚ್ 23, 2023
23 °C
ಜಿ.ಪಂ, ತಾ.ಪಂ: ಮೀಸಲಾತಿ ಪ್ರಮಾಣ ಶೇ 50ಕ್ಕೆ ಸೀಮಿತ

ಮೀಸಲಾತಿ ನಿಗದಿಗೆ ಹೊಸ ನಿಯಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಹಿಂದುಳಿದ ವರ್ಗಗಳಿಗೆ ಒಟ್ಟು ಮೀಸಲಾತಿ ಪ್ರಮಾಣ ಶೇಕಡ 50ರ ಮಿತಿಯನ್ನು ಮೀರದಂತೆ ರೋಸ್ಟರ್‌ (ಆವರ್ತನ) ಪ್ರಕಾರ ಮೀಸಲಾತಿ ನಿಗದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕರಡು ನಿಯಮಗಳನ್ನು ಪ್ರಕಟಿಸಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಎಂ. ಲಕ್ಷ್ಮೀನಾರಾಯಣ ನೇತೃತ್ವದ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ ಮತ್ತು ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಖಾತರಿಪಡಿಸಲು ನೇಮಿಸಿರುವ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಆಯೋಗದ ಶಿಫಾರಸಿನಂತೆ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಕರಡು ನಿಯಮಗಳನ್ನು ಗುರುವಾರ
ಪ್ರಕಟಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ನಿಗದಿಯಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಜನಸಂಖ್ಯೆ ಹೆಚ್ಚಾಗಿರುವ ಕ್ಷೇತ್ರಗಳನ್ನು ಅವರೋಹಣ ರೂಪದಲ್ಲಿ ಪಟ್ಟಿ ಮಾಡಿಕೊಂಡು, ಅದರ ಆಧಾರದಲ್ಲೇ ರೋಸ್ಟರ್‌ ನಿಗದಿಪಡಿಸಬೇಕು ಎಂಬ ಅಂಶ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಸ್ಥಾನಗಳನ್ನು ಆವರ್ತನೆ ಮೇಲೆ ಮೀಸಲಿಡುವ) ನಿಯಮಗಳು–2022’ರಲ್ಲಿದೆ.

ಕರಡಿನಲ್ಲಿರುವ ಪ್ರಮುಖ ಅಂಶಗಳು

* ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು ಮತ್ತು ಮಹಿಳಾ ಮೀಸಲಾತಿ ಪುನರಾವರ್ತನೆ ಆಗುವಂತಿಲ್ಲ.

* ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು ಹಾಗೂ ಸಾಮಾನ್ಯ ವರ್ಗದ ಮಹಿಳಾ ಮೀಸಲು ಕ್ಷೇತ್ರಗಳನ್ನೂ ಜನಸಂಖ್ಯೆ ಆಧಾರದಲ್ಲೇ ಗುರುತಿಸಬೇಕು.

* ಎರಡು ಅಥವಾ ಹೆಚ್ಚು ಕ್ಷೇತ್ರಗಳು ವಿಲೀನವಾದರೆ ದೊಡ್ಡ ಮತಕ್ಷೇತ್ರದ ಮೀಸಲು ಮುಂದುವರಿಸುವುದು.

* ಮೀಸಲಾತಿಯ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಬೇಕು.

* ಆಕ್ಷೇಪಣೆಗಳ ವಿಲೇವಾರಿ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಬೇಕು.

ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಗೂ ನಿಯಮ

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಗೂ ಕರಡು ನಿಯಮಗಳನ್ನು ಪ್ರಕಟಿಸಲಾಗಿದೆ.

ಎಸ್‌ಟಿ ಜನಸಂಖ್ಯೆ ಹೆಚ್ಚಾಗಿರುವ ಜಿಲ್ಲೆ, ತಾಲ್ಲೂಕುಗಳಲ್ಲಿ ಈ ಸಮುದಾಯಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ಕಲ್ಪಿಸಬೇಕು. ಒಂದು ಸಂಸ್ಥೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಎರಡೂ ಸ್ಥಾನಗಳ ಮೀಸಲಾತಿಯನ್ನು ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳಿಗೆ ಮೀಸಲಿಡುವಂತಿಲ್ಲ. ಒಂದೇ ಹುದ್ದೆಗೆ ಈ ಎರಡೂ ಸಮುದಾಯಗಳಿಗೆ ನಿರಂತರವಾಗಿ ಮೀಸಲಾತಿ ನೀಡುವಂತಿಲ್ಲ ಎಂಬ ಅಂಶ ನಿಯಮಗಳಲ್ಲಿದೆ.

ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಮಾಣ

ಪ್ರವರ್ಗ;ಅಧ್ಯಕ್ಷರು;ಉಪಾಧ್ಯಕ್ಷರು

ಒಟ್ಟು;ಮಹಿಳೆಯರು ಒಟ್ಟು;ಮಹಿಳೆಯರು

ಎಸ್‌ಟಿ;03;02;03;02

ಎಸ್‌ಸಿ;06;03;06;03

ಬಿಸಿಎಂ–ಎ;05;02;05;02

ಬಿಸಿಎಂ–ಬಿ;01;01;01;01

ಸಾಮಾನ್ಯ;16;08;16;08

ಒಟ್ಟು;31;16;31;16

––––––

ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಮಾಣ

ಪ್ರವರ್ಗ;ಅಧ್ಯಕ್ಷರು;ಉಪಾಧ್ಯಕ್ಷರು

 ಒಟ್ಟು;ಮಹಿಳಯರು ಒಟ್ಟು;ಮಹಿಳೆಯರು

ಎಸ್‌ಟಿ;22;11;22;11

ಎಸ್‌ಸಿ;49;25;49;25

ಬಿಸಿಎಂ–ಎ;38;19;38;19

ಬಿಸಿಎಂ–ಬಿ;09;04;09;04

ಸಾಮಾನ್ಯ;120;60;120;60

ಒಟ್ಟು;238;119;238;119.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು