ಗುರುವಾರ , ಜೂನ್ 24, 2021
23 °C
ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ

ವೈದ್ಯಾಧಿಕಾರಿಗಳ ಜೊತೆ ಮುಂದಿನ ವಾರ ಸಭೆ: ಆರೋಗ್ಯ ಸಚಿವ ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Sriramulu

ಬೆಂಗಳೂರು: ‘ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಾಧಿಕಾರಿಗಳ ಜೊತೆ ಮುಂದಿನ ವಾರದಲ್ಲಿ ಸಭೆ ನಡೆಸಲಾಗುವುದು’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಅವರು, ‘ಇಲಾಖೆಯ ವೈದ್ಯಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

‘ನಂಜನಗೂಡು ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಹಾಗೂ ಕೆಲವು ಬೇಡಿಕೆಗಳೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದ ವೈದ್ಯಾಧಿಕಾರಿಗಳು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂಬ ನನ್ನ ಭರವಸೆಗೆ ಬೆಲೆ ಕೊಟ್ಟು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ’

‘ಕೋವಿಡ್ ವ್ಯಾಪಿಸಿರುವ ಸನ್ನಿವೇಶದಲ್ಲಿ ಜನರ ಆರೈಕೆಗೆ ನಿಮ್ಮೆಲ್ಲರ ಸೇವೆ ಅತ್ಯಗತ್ಯ. ಈ ಜವಾಬ್ದಾರಿ ಅರಿತು, ಸಾರ್ವಜನಿಕರ ಹಿತದೃಷ್ಟಿಯಿಂದ ಮುಷ್ಕರ ನಡೆಸುವ ನಿರ್ಧಾರ ಹಿಂಪಡೆದಿರುವ ಎಲ್ಲ ಆರೋಗ್ಯಾಧಿಕಾರಿಗಳಿಗೆ ಧನ್ಯವಾದಗಳು’ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆಗೆ ಮೈಸೂರು  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕಾರಣ ಎಂದು ಆರೋಪಿಸಿ ವೈದ್ಯರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇದೀಗ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರತಿಭಟನೆ ಕೈಬಿಡಲು ನಿರ್ಧರಿಸಿದ್ದಾರೆ.

ವೈದ್ಯಕೀಯ ಸಚಿವರ ಧನ್ಯವಾದ: ‘ಕೋವಿಡ್ ಸಂದರ್ಭದಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವೈದ್ಯರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವ ಕಾರಣ ಕರೆ ನೀಡಲಾಗಿದ್ದ ಮುಷ್ಕರ ವಾಪಸ್ ಪಡೆದಿರುವ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಧನ್ಯವಾದಗಳು’ ಎಂದು ಸುಧಾಕರ್‌ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಹಾಗೂ ಮೈಸೂರಿನಲ್ಲಿ ಭಾನುವಾರ ನಡೆದ ರಾಜ್ಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪ್ರತಿಭಟನೆ ವಾಪಸು ಪಡೆಯಲು ನಿರ್ಧರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು