ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಷ್ಕರ್’ ಸಂಘಟನೆಯ ಇಬ್ಬರು ಶಂಕಿತ ಉಗ್ರರಿಂದ ಹತ್ಯೆಗೆ ಸಂಚು: ಆರೋಪಪಟ್ಟಿ ಸಲ್ಲಿಕೆ

ಮೂರು ರಾಜ್ಯಗಳಲ್ಲಿ ಹಿಂದೂ ಮುಖಂಡರೇ ಗುರಿ
Last Updated 22 ಫೆಬ್ರುವರಿ 2021, 20:51 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಹಾಗೂ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಲಷ್ಕರ್–ಎ–ತೊಯ್ಬಾ’ ನಿಷೇಧಿತ ಸಂಘಟನೆಯ ಇಬ್ಬರು ಶಂಕಿತ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಬೆಂಗಳೂರು, ಹುಬ್ಬಳ್ಳಿ ಹಾಗೂ ಮಹಾರಾಷ್ಟ್ರ, ತೆಲಂಗಾಣದ ಹಿಂದೂ ಮುಖಂಡರನ್ನು ಹತ್ಯೆ ಮಾಡಲು ಹಾಗೂ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣ ಭೇದಿಸಿದ್ದ ಎನ್‌ಐಎ ಅಧಿಕಾರಿಗಳು, ಬೆಂಗಳೂರಿನ ಡಾ. ಸಬೀಲ್ ಅಹ್ಮದ್ ಅಲಿಯಾಸ್ ಮೊಟು ಡಾಕ್ಟರ್ ಹಾಗೂ ಹೈದರಾಬಾದ್‌ನ ಅಸಾದುಲ್ಲಾ ಖಾನ್‌ನನ್ನು ಐದು ತಿಂಗಳ ಹಿಂದಷ್ಟೇ ಬಂಧಿಸಿದ್ದರು.

ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳು, 13 ಆರೋಪಿಗಳ ವಿರುದ್ಧ ಕಳೆದ ವರ್ಷವೇ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅವರಿಗೆ ಈಗಾಗಲೇ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದೀಗ ಮತ್ತಿಬ್ಬರು ಆರೋಪಿಗಳ ವಿರುದ್ಧ ಹೆಚ್ಚುವರಿ ದೋಷಾರೋಪ ಪಟ್ಟಿ ಸಿದ್ಧಪಡಿಸಿ ನಗರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

‘ಲಷ್ಕರ್-ಎ-ತೊಯ್ಬಾ ಸಂಘಟನೆ ಮಾತ್ರವಲ್ಲದೇ ಹಜರತ್-ಉಲ್-ಜಿಹಾದ್-ಇ-ಇಸ್ಲಾಮಿ ಸಂಘಟನೆಯಲ್ಲೂ ಆರೋಪಿಗಳು ಸದಸ್ಯರಾಗಿದ್ದರು. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ನಿರಂತರವಾಗಿ ಸಂಚು ರೂಪಿಸುತ್ತಲೇ ಇದ್ದರು. ಅದಕ್ಕಾಗಿ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದರು. ಸಂಚು ಪತ್ತೆ ಮಾಡಿ 2012ರಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದು ಎನ್‌ಐಎ ಮೂಲಗಳು ಹೇಳಿವೆ.

‘ಬೆಂಗಳೂರಿನ ಪತ್ರಕರ್ತರೊಬ್ಬರ ಹತ್ಯೆಗೂ ಸಂಚು ರೂಪಿಸಲಾಗಿತ್ತು. ಈ ಸಂಬಂಧ 2012ರ ಆಗಸ್ಟ್ 30ರಂದು ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಎನ್‌ಐಎಗೆ ವರ್ಗಾವಣೆ ಆಗಿತ್ತು’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT