ಬುಧವಾರ, ಮೇ 25, 2022
29 °C
ಹೊಸ ಮಾರ್ಗಸೂಚಿ, ಕಠಿಣ ಕ್ರಮ: ಇಂದಿನ ಸಭೆಯಲ್ಲಿ ನಿರ್ಧಾರ

ಅಗತ್ಯವಿದ್ದರೆ ರಾತ್ರಿ ಕರ್ಫ್ಯೂ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊರೊನಾ ರೂಪಾಂತರ ವೈರಾಣು ಓಮೈಕ್ರಾನ್‌ ರಾಜ್ಯದಲ್ಲಿ ಪತ್ತೆಯಾಗಿರುವುದು ಮತ್ತು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹೊಸ ಮಾರ್ಗಸೂಚಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಕೋವಿಡ್ ನಿಯಂತ್ರಣದ ಹೊಸ ನಿಯಮಗಳು ರೂಪುಗೊಳ್ಳುವ ಸಾಧ್ಯತೆ ಇದೆ.

ಕೋವಿಡ್‌ ನಿಯಂತ್ರಣ ಕುರಿತು ಹಿರಿಯ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೋವಿಡ್ ನಿರ್ವಹಣೆ ಹಾಗೂ ಮಾರ್ಗಸೂಚಿ ರೂಪಿಸುವ ಬಗ್ಗೆ ಸಚಿವ ಸಂಪುಟದ ಸದಸ್ಯರ ಜತೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

‘ಒಂದು ವೇಳೆ ರಾತ್ರಿ ಕರ್ಫ್ಯೂ ವಿಧಿಸುವ ಅಗತ್ಯವಿದ್ದರೆ ಮುಕ್ತ ಮನಸ್ಸು ಹೊಂದಿದ್ದೇವೆ. ಕೋವಿಡ್‌ ಸ್ಥಿತಿಗತಿಗೆ ಅನುಗುಣವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲು ಸಿದ್ಧರಿದ್ದೇವೆ’ ಎಂದು ಅವರು, ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ವಿವಿಧ ಜಿಲ್ಲೆ ಗಳಲ್ಲಿ ಮತ್ತು ಕ್ಲಸ್ಟರ್‌ ಗಳಲ್ಲಿ ಕೋವಿಡ್‌ ಸ್ಥಿತಿಗತಿ ಹಾಗೂ ನಿರ್ವಹಣೆ, ಓಮೈಕ್ರಾನ್‌ನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳ ವಿವರ, ವಿವಿಧ ದೇಶಗಳಲ್ಲಿ ಓಮೈಕ್ರಾನ್‌ ತಳಿ ಮತ್ತು ಅದಕ್ಕೆ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಅಧಿಕಾರಿಗಳಿಂದ ವಿವರಗಳನ್ನು ಕೇಳಿದ್ದೇನೆ’ ಎಂದು ಅವರು ಹೇಳಿದರು.

‘ಕೋವಿಡ್‌ ಮೂರನೇ ಅಲೆ ಬಂದರೂ ಮಾರ್ಚ್‌ವರೆಗೆ ನಿಭಾ ಯಿಸಲು ಹಣಕಾಸು ವ್ಯವಸ್ಥೆ ಮಾಡಿ ಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗುರುವಾರದ ಸಭೆಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್‌ ಅವರನ್ನು ಆಹ್ವಾನಿಸಲಾಗಿದೆ. ಅವರು ನೀಡುವ ಸಲಹೆಗಳನ್ನೂ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಬೊಮ್ಮಾಯಿ ಹೇಳಿದರು.

ಸಭೆಯಲ್ಲಿ ಬಂದ ಸಲಹೆಗಳು: ಕೋವಿಡ್‌ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲು ಸಚಿವರ ತಂಡವನ್ನು ರಚಿಸಿ ಜವಾಬ್ದಾರಿಗಳನ್ನು ಹಂಚುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪ ಆಗಿದೆ. ಕೋವಿಡ್‌ ಎರಡನೇ ಅಲೆ ಹತೋಟಿಗೆ ಸಚಿವರ ತಂಡ ರಚಿಸಿದ ನಂತರ ಪರಿಸ್ಥಿತಿ ಸುಧಾ ರಿಸಿತು. ಮೂರನೇ ಅಲೆ ಬಂದರೆ ಅದನ್ನು ನಿಭಾಯಿಸಲು ಮುಂಚಿತವಾಗಿ ಸಿದ್ಧವಾಗಬೇಕಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಮೂಲಗಳು ಹೇಳಿವೆ.

ಎರಡನೇ ಅಲೆಯ ಆರಂಭಕ್ಕೆ ಮೊದಲಿನ ಸ್ಥಿತಿಯೂ ಈಗಿನಂತೆಯೇ ಇತ್ತು. ಆದ್ದರಿಂದ ಕೆಲವು ಕಠಿಣ ಕ್ರಮ ಗಳನ್ನು ಈಗಲೇ ಕೈಗೊಳ್ಳಬೇಕಾಗುತ್ತದೆ. ಆಮ್ಲಜನಕ ಘಟಕಗಳು,ಪ್ರಯೋಗಾಲಯಗಳು, ಖಾಸಗಿ ಆಸ್ಪತ್ರೆ ಗಳಿಗೆ ನೀಡಬೇಕಾಗಿರುವ ಬಾಕಿ ಮೊತ್ತದ ಬಗ್ಗೆ ಮಾಹಿತಿ ಪಡೆದ ಬೊಮ್ಮಾಯಿ, ತಕ್ಷಣವೇ ಪಾವತಿ ಮಾಡಲು ಬಿಬಿ ಎಂಪಿ, ಕಂದಾಯ ಇಲಾಖೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು ಎಂದೂ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು