ಸೋಮವಾರ, ಜೂನ್ 14, 2021
25 °C
ಔಷಧವಿಲ್ಲದೆ ಕೈಚೆಲ್ಲಲಾರಂಭಿಸಿದ ವೈದ್ಯರು

ಶಿಲೀಂಧ್ರ ಸೋಂಕಿಗೂ ಸಿಗದ ಔಷಧ: ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಸಮಸ್ಯೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ಪೀಡಿತರಿಗೆ ಬೇಕಾದ ರೆಮ್‌ಡಿಸಿವಿರ್‌, ಆಮ್ಲಜನಕ ಕೊರತೆ ಬೆನ್ನಲ್ಲೇ ಕೋವಿಡ್ ಜಯಿಸಿದವರಲ್ಲಿ ಕಾಣಿಸಿಕೊಳ್ಳುತ್ತಿರುವ ಶಿಲೀಂಧ್ರ ಸೋಂಕಿಗೂ (ಮ್ಯುಕೋರ್‌ಮೈಕೋಸಿಸ್‌ ಅಥವಾ ಬ್ಲ್ಯಾಕ್ ಫಂಗಸ್) ಔಷಧ ಕೊರತೆ ಬಾಧಿಸಿದೆ.

‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧವು ಮಾರುಕಟ್ಟೆಯಲ್ಲಿ ದೊರೆಯದ ಪರಿಣಾಮ ಖಾಸಗಿ ಆಸ್ಪತ್ರೆಗಳು ಕೈಚೆಲ್ಲಲಾರಂಭಿಸಿವೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ‘ರೆಮ್‌ಡಿಸಿವಿರ್’ ಔಷಧ ಹಾಗೂ ಆಮ್ಲಜನಕದ ಕೊರತೆಯಿಂದ ಕೋವಿಡ್ ಚಿಕಿತ್ಸೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಒಂದೂವರೆ ತಿಂಗಳಲ್ಲಿ 8,518 ಮರಣ ಪ್ರಕರಣಗಳು ವರದಿಯಾಗಿವೆ. ಇನ್ನೊಂದೆಡೆ ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಲ್ಲಿ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಪೂರ್ವದಲ್ಲಿ ವಿರಳವಾಗಿದ್ದ ಈ ಕಾಯಿಲೆಯು ಎರಡು ವಾರಗಳಿಂದ ಅಧಿಕ ಮಂದಿಯಲ್ಲಿ ಪತ್ತೆಯಾಗುತ್ತಿದೆ. ಆದರೆ, ಈ ಸೋಂಕಿಗೆ ಒಳಗಾದವರಿಗೆ ನೀಡಬೇಕಾದ ಔಷಧ ಪೂರೈಕೆಯಾಗುತ್ತಿಲ್ಲ.

‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧವನ್ನು ಸಿಪ್ಲಾ ಸೇರಿದಂತೆ ಕೆಲ ಕಂಪನಿಗಳು ಮಾತ್ರ ತಯಾರಿಸುತ್ತಿವೆ. ಆದರೆ, ಇದಕ್ಕೆ ಅಷ್ಟಾಗಿ ಬೇಡಿಕೆ ಇರದ ಕಾರಣ ಉತ್ಪಾದನೆ ತಗ್ಗಿಸಿದ್ದವು. ಈಗ ಏಕಾಏಕಿ ಈ ಔಷಧಕ್ಕೆ ಬೇಡಿಕೆ ಹೆಚ್ಚಿದೆ. ಸೋಂಕಿತ ವ್ಯಕ್ತಿಗೆ 10 ರಿಂದ 30 ದಿನಗಳವರೆಗೆ ಈ ಔಷಧ ನೀಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಈ ಔಷಧವನ್ನು ಒದಗಿಸದಿದ್ದಲ್ಲಿ ಸೋಂಕು ವ್ಯಕ್ತಿಯ ಮಿದುಳು ಸೇರಿ, ಜೀವಕ್ಕೆ ಅಪಾಯವನ್ನು ತಂದೊಡ್ಡಲಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. 

ಸೋಂಕಿರ ಮಾಹಿತಿಯಿಲ್ಲ: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ), ಪೀಪಲ್ ಟ್ರೀ ಆಸ್ಪತ್ರೆ, ನಾರಾಯಣ ನೇತ್ರಾಲಯ, ಕೊಲಂಬಿಯಾ ಏಷ್ಯಾ, ಟ್ರಸ್ಟ್‌ವೆಲ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಕೋವಿಡ್ ಎರಡನೇ ಅಲೆ ಕಾಣಿಸಿಕೊಂಡ ಬಳಿಕ 100ಕ್ಕೂ ಅಧಿಕ ಶಿಲೀಂಧ್ರ ಸೋಂಕು ಪ್ರಕರಣಗಳು ವರದಿಯಾಗಿವೆ.

ಈ ಸೋಂಕಿಗೆ ಒಳಗಾದವರಲ್ಲಿ ಕೆಲವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಬಿಎಂಸಿಆರ್‌ಐಗೆ ದಾಖಲಾದವರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಆದರೆ, ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಈ ಸೋಂಕಿಗೆ ಎಷ್ಟು ಮಂದಿ ಒಳಗಾಗಿದ್ದಾರೆ ಎಂಬ ಅಧಿಕೃತ ಮಾಹಿತಿ ಸರ್ಕಾರದ ಬಳಿಯೂ ಇಲ್ಲ. 

‘ಶಿಲೀಂಧ್ರ ಸೋಂಕಿನ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವೊಂದು ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ. ಅನಿಯಂತ್ರಿತ ಮಧುಮೇಹ ಇರುವವರಿಗೆ ರಕ್ಷಣೆ, ಆಮ್ಲಜನಕ ನೀಡಬೇಕಾದಾಗ ವಹಿಸಬೇಕಾದ ಮುಂಜಾಗ್ರತೆ ಹಾಗೂ ಅನಿಯಂತ್ರಿತ ಸ್ಟಿರಾಯ್ಡ್‌ ಬಳಕೆಗೆ ಕಡಿವಾಣ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ತ್ರಿಲೋಕ್ ಚಂದ್ರ ತಿಳಿಸಿದರು. 

ಜೀವ ಉಳಿಸಲು ಔಷಧ ಅಗತ್ಯ: ‘ಶಿಲೀಂಧ್ರ ಸೋಂಕಿಗೆ ಒಳಗಾಗಿ, ಚಿಕಿತ್ಸೆಗೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈಗಾಗಲೇ ನಮ್ಮಲ್ಲಿಯೇ 10ಕ್ಕೂ ಅಧಿಕ ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಆದರೆ, ‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧವು ರಾಜ್ಯದಲ್ಲಿ ಏಲ್ಲಿಯೂ ಸಿಗುತ್ತಿಲ್ಲ’ ಎಂದು ಪೀಪಲ್ ಟ್ರೀ ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ರವಿ ಸಚ್ಚಿದಾನಂದ ತಿಳಿಸಿದರು.

‘ಶೇ 60ರಷ್ಟು ಸಾವು ಸಂಭವ ಸಾಧ್ಯತೆ’: ‘ಶಿಲೀಂಧ್ರ ಸೋಂಕು ಮಾರಣಾಂತಿಕವಾಗಿದೆ. ಸಕಾಲಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಶೇ 60ರಷ್ಟು ಸಾವಿನ ಸಾಧ್ಯತೆಯಿದೆ. ತುರ್ತಾಗಿ ಔಷಧ ಒದಗಿಸಬೇಕಾಗುತ್ತದೆ. ಕೆಲವು ದಿನಗಳು ನಿಯಮಿತವಾಗಿ ಈ ಔಷಧ ಸೇವನೆ ಮುಂದುವರಿಸಬೇಕು. ಆಗಷ್ಟೇ ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾಧ್ಯ’ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ವಿಭಾಗದ ಹಿರಿಯ ಸಲಹೆಗಾರ ಡಾ. ಪ್ರದೀಪ್ ರಂಗಪ್ಪ ತಿಳಿಸಿದರು.

‘ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಔಷಧವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಒಬ್ಬ ರೋಗಿಗೆ ಸುಮಾರು 60 ಸೀಸೆಗಳು ಬೇಕಾಗುತ್ತವೆ. ಹಾಗಾಗಿ, ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಇದರ ಅಗತ್ಯವಿದೆ. ಮೂರರಿಂದ ನಾಲ್ಕು ದಿನಗಳ ಅವಧಿಯಲ್ಲಿ ಪೂರೈಕೆಯಾಗದಿದ್ದಲ್ಲಿ ರೋಗಿಗಳಿಗೆ ಸಮಸ್ಯೆಯಾಗಲಿದೆ’ ಎಂದು ಪೀಪಲ್ಸ್ ಟ್ರೀ ಆಸ್ಪತ್ರೆಯ ಡಾ. ರವಿ ಸಚ್ಚಿದಾನಂದ ಅವರು ವಿವರಿಸಿದರು.

ಪ್ರಮುಖ ಲಕ್ಷಣಗಳು: ಅತಿಯಾದ ತಲೆನೋವು, ಕಣ್ಣು ನೋವು, ಕಣ್ಣು ಕೆಂಪಾಗುವುದು, ಕಿವಿಯ ಹಿಂದೆ ಊತ, ಕಣ್ಣು ಗುಡ್ಡೆ ಮುಂದೆ ಬರುವುದು, ಕಣ್ಣಿನ ಸುತ್ತಲಿನ ಭಾಗದಲ್ಲಿ ನೋವು, ಚರ್ಮ ಕಪ್ಪಾಗುವಿಕೆ, ದವಡೆ ಭಾಗದಲ್ಲಿ ನೋವು, ಮೂಗು ಕಟ್ಟುವಿಕೆ, ಹಲ್ಲುಗಳು ಸಡಿಲಗೊಳ್ಳುವುದು, ಮೂಗಿನಲ್ಲಿ ರಕ್ತ ಸೋರುವಿಕೆ

‘ರೋಗಿಗಳ ಅಗತ್ಯ ಅರಿತು ನೀಡಬೇಕು’: ‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧದ ಬಳಕೆ ಇಷ್ಟು ದಿನ ಕಡಿಮೆಯಿತ್ತು. ಹೀಗಾಗಿ, ಉತ್ಪಾದನೆ ಕೂಡ ಅಷ್ಟಾಗಿ ಆಗುತ್ತಿರಲಿಲ್ಲ. ಇದರಿಂದಾಗಿ ಕೊರತೆ ಉಂಟಾಗಿದೆ. ತುರ್ತಾಗಿ ಅಗತ್ಯ ಇರುವವರಿಗೆ ಮಾತ್ರ ನೀಡಬೇಕು. ‘ರೆಮ್‌ಡಿಸಿವಿರ್’ ಔಷಧವನ್ನು ಎಲ್ಲರಿಗೂ ನೀಡಿದ ಪರಿಣಾಮ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿತು. ಈ ಔಷಧ ಕೂಡ ಅದೇ ರೀತಿ ಆಗುವ ಸಾಧ್ಯತೆಯಿದೆ. ಕೆಲವು ಆಸ್ಪತ್ರೆಗಳು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡಲ್ಲಿ ಕೂಡ ಸಮಸ್ಯೆಯಾಗಲಿದೆ’ ಎಂದು ಕರ್ನಾಟಕ ಕೆಮಿಸ್ಟ್ ಆ್ಯಂಡ್ ಡ್ರಗಿಸ್ಟ್ ಅಸೋಸಿಯೇಷನ್‌ನ ಉಪಾಧ್ಯಕ್ಷ ದೇವಿದಾಸ್ ಪ್ರಭು ತಿಳಿಸಿದರು.

*
ಶಿಲೀಂಧ್ರ ಸೋಂಕಿನ ಔಷಧ ಕೊರತೆಯಿದೆ. ಸರ್ಕಾರದಿಂ ದಲೇ ಔಷಧವನ್ನು ಖರೀದಿಸಲಾಗುತ್ತಿದೆ. ಅಗತ್ಯ ಆಧರಿಸಿ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ.
–ಭಾಗೋಜಿ. ಟಿ. ಖಾನಾಪುರೆ, ಔಷಧ ನಿಯಂತ್ರಕ, ಔಷಧ ನಿಯಂತ್ರಣ ಇಲಾಖೆ

*
ಶಿಲೀಂಧ್ರ ಸೋಂಕಿನ ಕೆಲವೊಂದು ಪ್ರಕರಣಗಳು ವರದಿಯಾಗಿವೆ. ಆ ಬಗ್ಗೆ ಮಾಹಿತಿ ಈಗ ಕಲೆ ಹಾಕಲಾಗುತ್ತಿದೆ. ಔಷಧವನ್ನೂ ಖರೀದಿ ಮಾಡಲಾಗುತ್ತಿದೆ.
–ಡಾ. ತ್ರಿಲೋಕ್ ಚಂದ್, ಆರೋಗ್ಯ ಇಲಾಖೆ ಆಯುಕ್ತ

*
ಕೊರೊನಾ ಸೋಂಕು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅತಿಯಾಗಿ ಸ್ಟಿರಾಯ್ಡ್‌ ಬಳಕೆ ಸೇರಿದಂತೆ ವಿವಿಧ ಕಾರಣಗಳಿಂದ ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿದೆ.
–ಡಾ. ದೀಪಕ್ ಹಲ್ದೀಪುರ ಮ್ಯುಕೋರ್‌ಮೈಕೋಸಿಸ್‌ ವಿಭಾಗದ ಮುಖ್ಯಸ್ಥ, ಟ್ರಸ್ಟ್‌ವೆಲ್ ಆಸ್ಪತ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು