ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಪುನರ್‌ರಚನೆ ಪ್ರಸ್ತಾವವೇ ಇಲ್ಲ –ಅರುಣ್‌ ಸಿಂಗ್

ಯಡಿಯೂರಪ್ಪ ತೀರ್ಮಾನದಂತೆಯೇ ಸಂಪುಟ ವಿಸ್ತರಣೆ; ವರಿಷ್ಠರ ಹಸ್ತಕ್ಷೇಪವಿಲ್ಲ
Last Updated 19 ಜನವರಿ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ವಿವೇಚನೆ–ತೀರ್ಮಾನದ ಅನುಸಾರವೇ ಸಂಪುಟ ವಿಸ್ತರಣೆ ನಡೆದಿದೆ. ಮೂರು ತಿಂಗಳ ನಂತರ ಸಂಪುಟ ಪುನರ್‌ರಚನೆ ಮಾಡುವ ಯಾವುದೇ ಪ್ರಸ್ತಾವ ವರಿಷ್ಠರ ಮುಂದೆ ಇಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರತಿಪಾದಿಸಿದರು.

‍‘ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಕೂಡ ಮುಖ್ಯಮಂತ್ರಿಗಳ ಅಧಿಕಾರ. ಇದರಲ್ಲಿ ವರಿಷ್ಠರು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಯಾವುದೇ ನಿರ್ದೇಶನವನ್ನೂ ನೀಡಿಲ್ಲ. ನೀಡುವುದೂ ಇಲ್ಲ’ ಎಂದು ಅವರು ಹೇಳಿದರು.

ಸರ್ಕಾರ–ಪಕ್ಷದ ಬೆಳವಣಿಗೆಗಳ ಜತೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಸಂಪುಟಕ್ಕೆ ಇಂತಹವರನ್ನೇ ಸೇರಿಸಿಕೊಳ್ಳಿ ಎಂದು ಅಮಿತ್ ಶಾ ಅಥವಾ ಜೆ.ಪಿ. ನಡ್ಡಾ ಹೇಳಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಿಗೆ ಯಡಿಯೂರಪ್ಪ ಭರವಸೆ ಕೊಟ್ಟಿದ್ದರು. ಅದನ್ನು ಈಡೇರಿಸಿದ್ದಾರೆ. ಉತ್ತಮ ಆಡಳಿತ ನೀಡುವುದು ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸುವುದು ಸಚಿವರ ಮುಂದಿರುವ ಗುರಿ’ ಎಂದವರು ಹೇಳಿದರು.

‘ವರಿಷ್ಠರ ಪಟ್ಟಿಯನ್ನು ಯಡಿಯೂರಪ್ಪ ಬದಲಾಯಿಸಿದರು. ಮೂಲ ಬಿಜೆಪಿಯವರಿಗೆ ಅವಕಾಶ ಸಿಗಲಿಲ್ಲ’ ಎಂದು ಶಾಸಕರು ಟೀಕಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ‘ಪಟ್ಟಿಯನ್ನೇ ಕಳಿಸಿಲ್ಲವೆಂದ ಮೇಲೆ ಬದಲಾಯಿಸುವುದು ಎಲ್ಲಿಂದ ಬಂತು? ಇತಿಮಿತಿಯಲ್ಲಿ ವಿಸ್ತರಣೆ ಮಾಡಬೇಕಾದಾಗ ಸಣ್ಣಪುಟ್ಟ ಅಸಮಾಧಾನ ಸಹಜ. ಅವರೆಲ್ಲರೂ ನಮ್ಮ ಪಕ್ಷದ ಕಾರ್ಯಕರ್ತರು. ಮಾತುಕತೆಯ ಮೂಲಕ ಎಲ್ಲವನ್ನೂ ಬಗೆಹರಿಸುತ್ತೇವೆ’ ಎಂದರು.

ಸಚಿವರೇ ಹಳ್ಳಿಗೆ ನಡೆಯಿರಿ: ‘ಪ್ರಧಾನಿ ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ಕಾರ್ಯಕ್ರಮ, ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಎಲ್ಲ ಸಚಿವರು ಹಳ್ಳಿಗಳ ಕಡೆ ಹೋಗಬೇಕು. ತನ್ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂಬ ಸೂಚನೆ ನೀಡಲಾಗುವುದು’ ಎಂದು ಸಿಂಗ್ ಹೇಳಿದರು.

‘ಪಕ್ಷದ ಚಿಹ್ನೆ ಆಧರಿಸಿ ನಡೆಯಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಮ್ಮ ಮುಂದಿರುವ ಗುರಿ. ಈ ಉದ್ದೇಶದಿಂದ ಸಚಿವರ ಹಳ್ಳಿ ನಡಿಗೆ ಆರಂಭವಾಗಲಿದೆ’ ಎಂದರು.

‘ಸಚಿವರ ಕಾರ್ಯವೈಖರಿ ಪರಿಶೀಲಿಸುವಿರಾ’ ಎಂಬ ಪ್ರಶ್ನೆಗೆ, ‘ಅಂತಹ ಪದ್ಧತಿ ನಮ್ಮಲ್ಲಿಲ್ಲ. ಸಚಿವರ ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಪರಿಶೀಲಿಸುತ್ತಾರೆ. ಸಾಧನೆ ಬಗ್ಗೆ ಮೌಲ್ಯಮಾಪನದ ವರದಿಯನ್ನು ಪಕ್ಷಕ್ಕೆ ಕೊಡುತ್ತಾರೆ’ ಎಂದು ಹೇಳಿದರು.

‘ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗು
ವುದು. ಈ ಭಾಗದಲ್ಲಿ ತಳಮಟ್ಟದಿಂದ ಪಕ್ಷದ ಬಲವರ್ಧನೆಯಾದರೆ ಇಡೀ ರಾಜ್ಯದಲ್ಲಿ ಬಲಿಷ್ಠ ಸಂಘಟನೆಯಾಗಿ ಬಿಜೆಪಿ ಹೊರಹೊಮ್ಮಲಿದೆ’ ಎಂದು ವಿವರಿಸಿದರು.

ಮುನಿರತ್ನ ಪಕ್ಕಾ ಬಿಜೆಪಿ: ‘ಮುನಿರತ್ನ ಅವರು ಈಗ ಪಕ್ಕಾ ಬಿಜೆಪಿ ಮನುಷ್ಯ. 56 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಗೆದ್ದಿದ್ದು, ನಾಯಕನಾಗಿ ಬೆಳೆಯಲಿದ್ದಾರೆ. ಅವರಿಗೆ ಸಚಿವ ಸ್ಥಾನದ ಭರವಸೆ ಕೊಡಲಾಗಿದ್ದು, ಅದನ್ನು ಯಡಿಯೂರಪ್ಪ ಈಡೇರಿಸುತ್ತಾರೆ. ಪಕ್ಷ ಕೂಡ ಅವರನ್ನು ಕೈಬಿಡುವುದಿಲ್ಲ’ ಎಂದು ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT