ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಜೆಡಿಎಸ್‌ ವಿಲೀನ ಇಲ್ಲ: ನಾಯಕರ ಸ್ಪಷ್ಟನೆ

ಚರ್ಚೆಗೆ ಗ್ರಾಸವಾದ ಲಿಂಬಾವಳಿ ಹೇಳಿಕೆ
Last Updated 20 ಡಿಸೆಂಬರ್ 2020, 18:47 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ’ ಎಂಬ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಅವರ ಹೇಳಿಕೆ ಜೆಡಿಎಸ್‌ ಪಕ್ಷವು ಬಿಜೆಪಿಯಲ್ಲಿ ವಿಲೀನಗೊಳ್ಳುವುದೇ ಎಂಬ ಚರ್ಚೆಗೆ ನಾಂದಿ ಹಾಡಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಭಾನುವಾರ ಈ ಸಾಧ್ಯತೆಯನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.

‘ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪರವಾದ ಅಲೆ ಇದೆ. ಜೆಡಿಎಸ್‌ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವ ಪ್ರಯತ್ನದ ಕುರಿತು ನನಗೂ ಸುದ್ದಿ ದೊರಕಿದೆ’ ಎಂದು ಲಿಂಬಾವಳಿ ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜೆಡಿಎಸ್‌ ಅನ್ನು ಬಿಜೆಪಿಯಲ್ಲಿ ವಿಲೀನ ಮಾಡಲು ಆ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲೂ ಸದ್ದು ಮಾಡಿತ್ತು.

ವಿಧಾನ ಪರಿಷತ್‌ನ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಸೇರಿದಂತೆ ಪಕ್ಷದ ಹಲವು ಮುಖಂಡರು, ಬಿಜೆಪಿ ಜತೆಗಿನ ಮೈತ್ರಿ, ವಿಲೀನ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ವರಿಷ್ಠರ ಹಂತದಲ್ಲಿ ಚರ್ಚೆಗಳು ನಡೆದಿವೆ ಎಂಬುದನ್ನು ಮಾಧ್ಯಮಗಳು ಎದುರು ಖಚಿತಪಡಿಸಿದರು. ಇದು ಚರ್ಚೆ ಮತ್ತಷ್ಟು ಕಾವೇರಲು ಕಾರಣವಾಯಿತು.

ಪ್ರಸ್ತಾವವೇ ಇಲ್ಲ’: ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ವಿಧಾನ ಪರಿಷತ್‌ ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯದ ವಿಚಾರದಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ, ಜೆಡಿಎಸ್‌ ಶಾಸಕರು ಬಿಜೆಪಿಗೆ ಬರುವುದಾಗಲೀ ಅಥವಾ ಪಕ್ಷವನ್ನೇ ವಿಲೀನ ಮಾಡುವ ಕುರಿತು ಪ್ರಸಾರವಾಗುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳು ಬಾಕಿ ಇವೆ. ಈಗ ಕಪೋಲಕಲ್ಪಿತ ಸುದ್ದಿಗಳು ಪ್ರಸಾರವಾಗುತ್ತಿವೆ. ಈ ಸುದ್ದಿಗಳೆಲ್ಲ ಸತ್ಯಕ್ಕೆ ದೂರವಾದುವು ಎಂದು ಅವರು ಹೇಳಿದ್ದಾರೆ.

ವಿಲೀನಕ್ಕೆ ಸಿದ್ಧರಿಲ್ಲ: ಇದೇ ವಿಚಾರ ಕುರಿತು ಸರಣಿ ಟ್ವೀಟ್‌ ಮಾಡಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಜೆಡಿಎಸ್‌ ಸ್ವಾಭಿಮಾನಿ ಕನ್ನಡಿಗರ ಪಕ್ಷ. ಎಂದಿಗೂ ವಿಲೀನದ ಆಲೋಚನೆ ಮಾಡುವುದಿಲ್ಲ. ಅಗತ್ಯವಿದ್ದಾಗ ವಿಷಯಾಧಾರಿತವಾಗಿ ಬಿಜೆಪಿ ಜತೆ ವಿಶ್ವಾಸಪೂರ್ವಕವಾಗಿ ನಡೆಯಬಹುದಷ್ಟೆ’ ಎಂದು ಹೇಳಿದ್ದಾರೆ.

‘ಜೆಡಿಎಸ್‌ ಬಿಜೆಪಿಯ ‘ಬಿ ಟೀಂ’ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದರು. ಆ ಬಳಿಕ ನಮ್ಮ ಮನೆ ಬಾಗಿಲಿಗೆ ಬಂದು ಸಮ್ಮಿಶ್ರ ಸರ್ಕಾರ ಮಾಡಿದರು. ಕಾಂಗ್ರೆಸ್‌ ಆರೋಪಿಸುವಂತೆ ಒಳ ಒಪ್ಪಂದವೇನೂ ಇಲ್ಲ. ವಿಷಯಾಧಾರಿತ ಹೊಂದಾಣಿಕೆ ಮಾತ್ರ ಸಾಧ್ಯ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT