ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ಇಲ್ಲ: ಸ್ಪಷ್ಟನೆ ನೀಡಿದ ಚಾಮರಾಜನಗರ ಡಿಸಿ

Last Updated 1 ಸೆಪ್ಟೆಂಬರ್ 2021, 11:24 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಲಸಿಕೆ‌ ಪಡೆಯದಿರುವವರಿಗೆ ಸೆಪ್ಟೆಂಬರ್ 1ರಿಂದ ಪಡಿತರ, ಪಿಂಚಣಿ ಸೌಲಭ್ಯ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ‌ ಡಾ.ಎಂ.ಆರ್.ರವಿ ಅವರು ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ ಮುಖಂಡರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಜಿಲ್ಲಾಧಿಕಾರಿ ಅವರು ಸ್ಪಷ್ಟನೆ ನೀಡಿದ್ದಾರೆ.

'ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿಲ್ಲ. ಹಾಗಾಗಿ, ಪಡಿತರದಾರರಿಗೆ ಹಾಗೂ ಪಿಂಚಣಿದಾರರಿಗೆ ಸೌಲಭ್ಯ ನಿರಾಕರಿಸುವ ಪ್ರಶ್ನೆಯೇ ಉದ್ಭವಿಸಿಸುವುದಿಲ್ಲ' ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ಹೇಳಿದ್ದಾರೆ.

ಎರಡು ದಿನಗಳ ಹಿಂದೆ ಗುಂಡ್ಲುಪೇಟೆಗೆ ಭೇಟಿ‌ ನೀಡಿದ್ದ ಸಂದರ್ಭದಲ್ಲಿ, 'ಪಡಿತರದಾರರು ಲಸಿಕೆ ಪಡೆಯದಿದ್ದರೆ, ಅವರಿಗೆ ಪಡಿತರ‌ ನೀಡದೆ ವಾಪಸ್ ಕಳುಹಿಸಿ' ಎಂದು ಜಿಲ್ಲಾಧಿಕಾರಿ ಅವರು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು

ನಂತರ‌ ಕೆಲವು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಡಾ.ಎಂ.ಆರ್. ರವಿ ಅವರು, 'ಜಿಲ್ಲೆಯಲ್ಲಿ ಆಗಸ್ಟ್ 27 ರಿಂದ ಒಂದು ವಾರ ಕಾಲ ಕೋವಿಡ್ ಲಸಿಕಾ ಮಹಾ ಮೇಳ ಆಯೋಜಿಸಲಾಗಿದ್ದು, ಪ್ರತಿ ದಿನ 18 ವರ್ಷ ಮೇಲ್ಪಟ್ಟ 25 ಸಾವಿರ ಮಂದಿಗೆ ಲಸಿಕೆ ಹಾಕುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಆದರೆ ಇನ್ನೂ ಕೆಲವು ಜನರು ಲಸಿಕೆ ಹಾಕಿಸಿಕೊಳ್ಳಲು ಉದಾಸೀನ ತೋರುತ್ತಿದ್ದು, ಜನರ ಆರೋಗ್ಯದ ಹಿತದೃಷ್ಟಿಯಿಂದ ಸೆಪ್ಟೆಂಬರ್ 1 ರಿಂದ 'ಲಸಿಕೆ ಪಡೆಯದಿದ್ದರೆ ಪಡಿತರ ಇಲ್ಲ', 'ಲಸಿಕೆ‌ ಹಾಕಿಸಿಕೊಳ್ಳದಿದ್ದರೆ ಪಿಂಚಣಿ ಇಲ್ಲ' ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು' ಎಂದು ಹೇಳಿದ್ದರು.

'ಜಿಲ್ಲೆಯಲ್ಲಿ 2.20 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರದಾರರು ಇದ್ದಾರೆ. ಇವರು ಪಡಿತರ ಪಡೆಯ ಬೇಕಾದರೆ ಲಸಿಕೆ ಹಾಕಿಸಿಕೊಂಡಿರಬೇಕು. ಇದೇ ರೀತಿ ಜಿಲ್ಲೆಯಲ್ಲಿ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ 2.20 ಮಂದಿ ಪಿಂಚಣಿದಾರರಿದ್ದಾರೆ. ಲಸಿಕೆ ಪಡೆದಿರುವ ಪ್ರಮಾಣಪತ್ರ ಇದ್ದರೆ ಮಾತ್ರ ಇವರಿಗೆ ಮಾಸಾಶನ ಪಾವತಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ' ಎಂದು ಅವರು ತಿಳಿಸಿದ್ದರು.

ಜಿಲ್ಲಾಧಿಕಾರಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, 'ಕೋವಿಡ್‌ ಲಸಿಕೆ ಪಡೆಯದಿದ್ದರೆ ಪಡಿತರ, ಪಿಂಚಣಿ ಎರಡೂ ಇಲ್ಲ ಎಂದು ಚಾಮರಾಜನಗರದಲ್ಲಿ ಬಿಜೆಪಿ ಸರ್ಕಾರ ಹೇಳುತ್ತಿದೆ. ಆದರೆ, ಮೂಲ ಸೌಕರ್ಯಗಳಾದ ಆಹಾರ ಮತ್ತು ಪಿಂಚಣಿ ನೋಡುವುದಿಲ್ಲ ಅಂತ ಹೆದರಿಸುವುದು ಅಕ್ರಮ, ಅನೈತಿಕ ಹಾಗೂ ಅಸಾಂವಿಧಾನಿಕ' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.

'ಜನಸಂಖ್ಯೆಗೆ ಸಾಕಾಗುವಷ್ಟು ಲಸಿಕೆಗಳು ಇವೆಯಾ? ಲಸಿಕೆ ಪಡೆಯುವಂತೆ ಜನರ ಮನವೊಲಿಸಿದ್ದಾರಾ? ಬಿಜೆಪಿ ಸರ್ಕಾರ ಹಾಗೂ ಚಾಮರಾಜನಗರ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ಆಮ್ಲಜನಕ ಪೂರೈಸಲು ಅಸಮರ್ಥರಾಗಿ 36 ಅಮಾಯಕರ ಜೀವ ತೆಗೆದಿದ್ದಾರೆ. ಲಸಿಕೆ ಪಡೆಯದವರಿಗೆ ಶಿಕ್ಷಿಸಲು ಮುಂದಾಗಿರುವವರು ಮೊದಲು ಆಮ್ಲಜನಕ, ಲಸಿಕೆ, ಪರೀಕ್ಷೆ ಹಾಗೂ ಮೃತರಿಗೆ ಸೂಕ್ತ ಪರಿಹಾರ ನೀಡದಿದ್ದಕ್ಕೆ ಕ್ಷಮೆ ಕೇಳಲಿ' ಎಂದು ಟೀಕಿಸಿದ್ದರು.

ಶಿವಕುಮಾರ್ ಅವರ ಪೋಸ್ಟ್ ನಂತರ ವಿಡಿಯೊ ಮೂಲಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು, 'ಜಿಲ್ಲಾಧಿಕಾರಿ ಹೇಳಿಕೆ ಅವೈಜ್ಞಾನಿಕವಾಗಿದ್ದು, ಕಾನೂನಿಗೆ ವಿರುದ್ಧವಾಗಿದೆ. ತಕ್ಷಣವೇ ಹಿಂಪಡೆಯಬೇಕು' ಎಂದು ಒತ್ತಾಯಿಸಿದ್ದರು.

'ಜಿಲ್ಲೆಯಲ್ಲಿ ಲಸಿಕೆಗಳ ಕೊರತೆ‌ ಇದೆ. ಮೊದಲು ಲಸಿಕೆ ಸೌಲಭ್ಯ ಹೆಚ್ಚಿಸಬೇಕು. ಬಡವರ ಹಸಿವನ್ನು ನೀಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿದೆ. ಬಡವರ ಹೊಟ್ಟೆ ಮೇಲೆ ಹೊಡೆಯಬೇಡಿ. ಲಸಿಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ' ಎಂದು ಸಲಹೆ‌ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT