ಶುಕ್ರವಾರ, ಅಕ್ಟೋಬರ್ 29, 2021
20 °C

ನಮಗೆ ಅಭ್ಯರ್ಥಿಯಲ್ಲ, ಗೆಲುವು ಮುಖ್ಯ:  ಡಿ.ಕೆ. ಶಿವಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಉಪ ಚುನಾವಣೆ ನಡೆಯಲಿರುವ ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಲ್ಲಿ ನಮಗೆ ಅಭ್ಯರ್ಥಿ ಮುಖ್ಯವಲ್ಲ, ಗೆಲುವು ಮುಖ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಸ್ಥಳೀಯ ಮುಖಂಡರಿಂದ ಅಭಿಪ್ರಾಯ ಪಡೆದಿದ್ದೇವೆ. ಹೈಕಮಾಂಡ್​ಗೆ ಮಾಹಿತಿ ನೀಡಿದ್ದೇವೆ. ಯಾರೇ ಅಭ್ಯರ್ಥಿಯಾದರೂ ನಮಗೆ ಅದು ಮುಖ್ಯವಲ್ಲ. ನಮ್ಮ ನಾಯಕರು ಈಗಾಗಲೇ ಚುನಾವಣೆ ಗೆಲುವಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂದರು.

‘ಇದೇ 4ರಂದು ಸಿಂದಗಿಗೆ ನಾವು ನಮ್ಮ ಪಕ್ಷದ ಮುಖಂಡರು ಭೇಟಿ ನೀಡುತ್ತೇವೆ. 7ರಂದು ಹಾನಗಲ್ ಕ್ಷೇತ್ರಕ್ಕೆ ನಮ್ಮೆಲ್ಲ ನಾಯಕರು ಹೋಗುತ್ತೇವೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇವೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ, ಎರಡೂ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ದಲಿತರು ಮುಖ್ಯಮಂತ್ರಿ ಆಗಬಹುದು’ ಎಂಬ ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನೀವೂ ಆಸೆ ಪಡಬಹುದು, ಎಲ್ಲರೂ ಆಸೆ ಪಡಬಹುದು. ಅದೆಲ್ಲಾ ಪಕ್ಷ ತೀರ್ಮಾನ ಮಾಡುತ್ತದೆ. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೂ ಅನುಭವ ಇದೆ. ಏನು ಮಾತನಾಡಬೇಕು, ಏನು ಮಾತನಾಡಬಾರದು ಎನ್ನುವುದು ಅವರಿಗೆ ಗೊತ್ತಿದೆ. ಮೊದಲು ಪಕ್ಷ ಅಧಿಕಾರಕ್ಕೆ ತರಬೇಕು’ ಎಂದು ಹೇಳಿದರು.

ಉಪ ಚುನಾವಣೆಗೆ ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿ ಘೋಷಿಸಿದ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಅವರದ್ದು ರಾಜಕೀಯ ಪಕ್ಷ. ಅವರು ರಾಜಕೀಯ ಕಾರ್ಯತಂತ್ರ ಮಾಡಿದ್ದಾರೆ. ನಾವು ಯಾಕೆ ಅದರ ಬಗ್ಗೆ ಮಾತನಾಡಬೇಕು’ ಎಂದರು.

ಹೈಕಮಾಂಡ್ ಅಂತಿಮ ನಿರ್ಧಾರ: ಹಾನಗಲ್ ಉಪಚುನಾವಣೆ ಬಗ್ಗೆ ಹಾವೇರಿ ಜಿಲ್ಲೆಯ ಮುಖಂಡರ ಜತೆ ಚರ್ಚೆ ಮಾಡಿದ್ದೇವೆ. ಅಲ್ಲಿ ಮನೋಹರ ತಹಶೀಲ್ದಾರ್ ಮತ್ತು ಶ್ರೀನಿವಾಸ ಮಾನೆ ಇಬ್ಬರೂ ಆಕಾಂಕ್ಷಿಗಳು. ಇಬ್ಬರ ನಡುವೆ ಸ್ಪರ್ಧೆ ಇದೆ. ಎಲ್ಲರ ಅಭಿಪ್ರಾಯ ಕೇಳಿದ್ದೇವೆ. ನಾವು ಯಾರಿಗೆ ಟಿಕೆಟ್‌ ಕೊಟ್ಟರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ಇಬ್ಬರೂ ಇದಕ್ಕೆ ಒಪ್ಪಿದ್ದಾರೆ. 2–3 ದಿನಗಳಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ಮಾಡಲಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ಪರಮೇಶ್ವರ ದಲಿತ ಸಿಎಂ ಅಸ್ತ್ರ ವಿಚಾರ ಬಗ್ಗೆ ನಾನು ಏನು ಮಾತನಾಡಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೊ ಅದಕ್ಕೆ ಬದ್ಧ’ ಎಂದರು.

‘ನನ್ನ ಬಗ್ಗೆ ಮತ್ತು ಜೆಡಿಎಸ್ ಬಗ್ಗೆ ಮಾತನಾಡಬೇಡಿ’ ಎಂದು ಕುಮಾರಸ್ವಾಮಿ ಹೇಳಿರುವ ಬಗ್ಗೆ, ‘ಇಂಥ ಎಚ್ಚರಿಕೆ ಬಹಳ ನೋಡಿದ್ದೇನೆ. ನಾನು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದು ಎಂದುಕೊಂಡಿದ್ದೇನೆ’ ಎಂದರು.

‘ಜೆಡಿಎಸ್‌ನವರು ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಸೋಲಿಸುವ ಕೆಲಸ ಮಾಡುತ್ತಿದ್ದಾರೆ. ಬಸವಕಲ್ಯಾಣದಲ್ಲಿ ಅದನ್ನೇ ಮಾಡಿದ್ದರು. ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ ಸಂಪುಟದಲ್ಲಿ ಯಾಕೆ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ. ಮಂಡ್ಯ, ಮೈಸೂರಿನಲ್ಲಿ ಅಲ್ಪಸಂಖ್ಯಾತರಿಗೆ ಯಾಕೆ ಟಿಕೆಟ್ ಕೊಡಲ್ಲ. ಬಿಜೆಪಿಗೆ ಅನುಕೂಲ ಮಾಡಲು ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕುತ್ತಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು