ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರ್ಸಿಂಗ್‌ ‘ಸೀಟು ಬ್ಲಾಕಿಂಗ್’? ವೆಬ್‌ಸೈಟ್‌ನಲ್ಲಿದ್ದ ಪಟ್ಟಿ ಕಣ್ಮರೆ!

ವೈದ್ಯಕೀಯ ನಿರ್ದೇಶನಾಲಯಕ್ಕೆ ದೂರು
Last Updated 30 ಜನವರಿ 2022, 20:11 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಕಾಲೇಜುಗಳಲ್ಲಿನ ‘ಸೀಟು ಬ್ಲಾಕಿಂಗ್’ ದಂಧೆ ಮಾದರಿಯಲ್ಲಿ ಈ ಬಾರಿ ನರ್ಸಿಂಗ್‌ ಹಾಗೂ ಅರೆ ವೈದ್ಯಕೀಯ ಸೀಟುಗಳನ್ನು ಅಕ್ರಮವಾಗಿ ಹಂಚಿರುವ ಆರೋಪ ಕೇಳಿ ಬಂದಿದೆ.

ಈ ಆರೋಪಗಳಿಗೆ ಪುಷ್ಟಿ ನೀಡುವಂತೆ, ಸರ್ಕಾರಿ ಶುಶ್ರೂಷಾ (ಸ್ಕೂಲ್‌ ಆಫ್‌ ನರ್ಸಿಂಗ್‌) ಸಂಸ್ಥೆಗಳಲ್ಲಿನ ನರ್ಸಿಂಗ್ (ಜಿಎನ್‌ಎಂ–ಜನರಲ್‌ ನರ್ಸಿಂಗ್‌ ಆ್ಯಂಡ್ ಮಿಡ್‌ವೈಫರಿ) ಮತ್ತು ಅರೆ ವೈದ್ಯಕೀಯ (ಪ್ಯಾರಾ ಮೆಡಿಕಲ್‌) ಕೋರ್ಸ್‌ಗಳಿಗೆ 2021–22ನೇ ಸಾಲಿಗೆ ಸೀಟು ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಪಟ್ಟಿ, ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿ (ಕೆಎಸ್‌ಡಿಎನ್‌ಇಬಿ) ಮತ್ತು ಪ್ಯಾರಾ ವೈದ್ಯಕೀಯ ಮಂಡಳಿಯ ವೆಬ್‌ಸೈಟ್‌ನಿಂದಲೇ ಕಣ್ಮರೆ ಆಗಿದೆ!

ಸರ್ಕಾರಿ ನರ್ಸಿಂಗ್‌ ಮತ್ತು ಅರೆ ವೈದ್ಯಕೀಯ ಸಂಸ್ಥೆಗಳಲ್ಲಿ ಕಡಿಮೆ ರ‍್ಯಾಂಕ್‌ ಪಡೆದಿರುವ ವಿದ್ಯಾರ್ಥಿಗಳು ಸೀಟು ಗಿಟ್ಟಿಸಿಕೊಂಡಿದ್ದು, ಉನ್ನತ ರ‍್ಯಾಂಕ್‌ ಪಡೆದವರು ಸೀಟು ವಂಚಿತರಾಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಬೇಜವಾಬ್ದಾರಿಯ ಉತ್ತರ ನೀಡಲಾಗಿದೆ ಎಂದು ಕೆಲವು ಅಭ್ಯರ್ಥಿಗಳು, ಪೋಷಕರು ವೈದ್ಯಕೀಯ ನಿರ್ದೇಶನಾಲಯದ ನಿರ್ದೇಶಕರಿಗೆ ದೂರು ನೀಡಿದ್ದಾರೆ.

‘ರಾಜ್ಯದಲ್ಲಿ 18 ಸರ್ಕಾರಿ ನರ್ಸಿಂಗ್‌ ಕಾಲೇಜುಗಳಿವೆ. ಈ ಕಾಲೇಜುಗಳಲ್ಲಿ ಜಿಎನ್‌ಎಂ ಕೋರ್ಸಿಗೆ ಸುಮಾರು 650 ಸೀಟುಗಳಿವೆ. ಈ ಸೀಟುಗಳಿಗೆ ರ‍್ಯಾಂಕ್‌ ಪ್ರಕಾರ, ಕೌನ್ಸೆಲಿಂಗ್‌ ನಡೆಸಿ ಪ್ರವೇಶ ನೀಡಬೇಕು. ಡಿ. 24ರಂದು ಮಾಪ್‌ಅಪ್‌ ಸುತ್ತಿನ ಕೌನ್ಸೆಲಿಂಗ್‌ ನಡೆದಿದೆ. ಈ ವೇಳೆ ಸೀಟು ಖಾಲಿ ಇದ್ದರೂ ಅದನ್ನು ಮರೆಮಾಚಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಬಳಿಕ ವೆಬ್‌ಸೈಟ್‌ನಲ್ಲಿ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಈ ಪಟ್ಟಿಗೆ ಆಕ್ಷೇಪ ವ್ಯಕ್ತವಾದಾಗ ವೆಬ್‌ಸೈಟ್‌ನಿಂದ ಆಯ್ಕೆ ಪಟ್ಟಿಯನ್ನೇ ತೆಗೆಯಲಾಗಿದೆ’ ಎಂದು ದೂರಿದ್ದಾರೆ.

‘ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಡಿ. 24ರಂದು ನಡೆದಜಿಎನ್‌ಎಂ ಕೋರ್ಸ್‌ ಪ್ರವೇಶಕ್ಕೆ ಮಾಪ್‌ಅಪ್‌ ಸುತ್ತಿನ ಕೌನ್ಸೆಲಿಂಗ್‌ ನಡೆದಿತ್ತು. ನಾನು ದ್ವಿತೀಯ ಪಿಯುಸಿಯಲ್ಲಿ 524 ಅಂಕ (ಶೇ 87.33) ಪಡೆದಿದ್ದು, 3,301 ರ‍್ಯಾಂಕ್‌ ಪಡೆದಿದ್ದೇನೆ. ಮಾಪ್‌ ಕೌನ್ಸೆಲಿಂಗ್‌ಗೆ ಹೋದಾಗ ಸರ್ಕಾರಿ ನರ್ಸಿಂಗ್‌ ಕಾಲೇಜುಗಳಲ್ಲಿ ಸೀಟು ಲಭ್ಯ ಇಲ್ಲ, ಖಾಸಗಿ ನರ್ಸಿಂಗ್‌ ಕಾಲೇಜುಗಳಲ್ಲಿ ಸೀಟು ಕೊಡುತ್ತೇವೆ ಎಂದರು. ಆದರೆ, ನನಗಿಂತ ಕಡಿಮೆ ರ‍್ಯಾಂಕ್‌ ಪಡೆದ ಹಲವು ವಿದ್ಯಾರ್ಥಿಗಳಿಗೆ ಸೀಟು ನೀಡಲಾಗಿದೆ. ಅರ್ಹತೆ ಇದ್ದವರಿಗೆ ದ್ರೋಹ ಮಾಡಲಾಗಿದೆ’ ಎಂದು ವಿದ್ಯಾರ್ಥಿಯೊಬ್ಬರು ದೂರಿದ್ದಾರೆ.

‘ವಿಕ್ಟೋರಿಯಾ ಹಾಸ್ಪಿಟಲ್‌ ಸ್ಕೂಲ್‌ ಆಫ್‌ ನರ್ಸಿಂಗ್‌, ಬೆಂಗಳೂರಿನ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿರುವ ಸ್ಕೂಲ್‌ ಆಫ್‌ ನರ್ಸಿಂಗ್‌, ತುಮಕೂರು ಮತ್ತು ಚಾಮರಾಜನಗರದಲ್ಲಿರುವ ಸರ್ಕಾರಿ ಸ್ಕೂಲ್‌ ಆಫ್‌ ನರ್ಸಿಂಗ್‌ ಸಂಸ್ಥೆಗಳಲ್ಲಿ 5,281ರಿಂದ 8,268 ರ‍್ಯಾಂಕ್‌ ನಡುವಿನ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿದೆ. ಆದರೆ, ಅದಕ್ಕಿಂತ ಕಡಿಮೆ ರ‍್ಯಾಂಕ್‌ ಪಡೆದಿದ್ದ ಹಲವರಿಗೆ ಸೀಟು ಸಿಕ್ಕಿಲ್ಲ’ ಎಂದು ಮಾಪ್‌ ಸುತ್ತಿನ ಬಳಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಪಟ್ಟಿ (ಆ ಪಟ್ಟಿಯನ್ನು ವೆಬ್‌ಸೈಟ್‌ನಿಂದ ತೆಗೆಯಲಾಗಿದೆ) ಸಹಿತ ದೂರಿನಲ್ಲಿ ಆರೋಪಿಸಿದ್ದಾರೆ.

ವೆಬ್‌ಸೈಟ್‌ನಲ್ಲಿ ಪ್ರಕಟವಾಗದ ಪಟ್ಟಿ: ‘ರಾಜ್ಯದಲ್ಲಿ ಸರ್ಕಾರಿ ಅರೆ ವೈದ್ಯಕೀಯ 32 ಸಂಸ್ಥೆಗಳಿವೆ. ಡಿಸೆಂಬರ್ 27ರಿಂದ 31ರವರೆಗೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಕೌನ್ಸೆಲಿಂಗ್‌ನಲ್ಲಿ ಅರೆ ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಸೀಟು ಹಂಚಿಕೆ ಮಾಡಲಾಗಿದೆ. ಆದರೆ, ಆಯ್ಕೆಯಾದ ಸೀಟುಗಳ ಮಾಹಿತಿ ಯನ್ನೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ. ಇಲ್ಲೂ ಸೀಟುಗಳನ್ನು ಬ್ಲಾಕ್‌ ಮಾಡಿ ಹಂಚಿದ ಅನುಮಾನಗಳಿವೆ. ಪಾರದರ್ಶಕತೆಯಿಂದ ಕೌನ್ಸೆಲಿಂಗ್‌ ನಡೆಸದೆ ಇಷ್ಟ ಬಂದಂತೆ, ಹಣ ನೀಡಿದ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿದ್ದಾರೆ. ಅಕ್ರಮ ಬಯಲಾಗಬಹುದೆಂಬ ಕಾರಣಕ್ಕೆ ಸೀಟು ಹಂಚಿಕೆಯ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಸರ್ಕಾರಿ ಸೀಟಿನ ಮೇಲೆ ಕಣ್ಣು!

‘ಖಾಸಗಿ ನರ್ಸಿಂಗ್‌ ಸಂಸ್ಥೆಗಳು ಶೇ 20ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಬಿಟ್ಟಕೊಡಬೇಕು. ಆದರೆ, ಈಗಾಗಲೇ ಮೊದಲ ಸುತ್ತಿನ ಕೌನ್ಸೆಲಿಂಗ್‌ ಮುಗಿದಿರುವುದರಿಂದ, ಭರ್ತಿ ಆಗದೇ ಉಳಿದಿರುವ ಸೀಟುಗಳನ್ನು ಅವರೇ ತುಂಬಿಕೊಳ್ಳುವುದಾಗಿ ಈ ಸಂಸ್ಥೆಗಳ ಆಡಳಿತ ಮಂಡಳಿಗಳು ಬೇಡಿಕೆ ಇಟ್ಟಿವೆ. ಅದಕ್ಕೆ ನಾನು ಒಪ್ಪಿಲ್ಲ’ ಎಂದು ಕರ್ನಾಟಕ ನರ್ಸಿಂಗ್‌ ಹಾಗೂ ಅರೆ ವೈದ್ಯಕೀಯ ವಿಜ್ಞಾನಗಳ (ನಿಯಂತ್ರಣ) ಪ್ರಾಧಿಕಾರ ವಿಶೇಷಾಧಿಕಾರಿ ಡಾ. ಟಿ.ಎಸ್‌. ರಂಗನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT