ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿಯ ಅತಿಸಣ್ಣ ಸಮುದಾಯಗಳಿಗೆ ಪ್ರತ್ಯೇಕ ಮಂಡಳಿ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಭರವಸೆ
Last Updated 25 ಜನವರಿ 2023, 16:04 IST
ಅಕ್ಷರ ಗಾತ್ರ

ಮಂಗಳೂರು: ‘ಕಾಂಗ್ರೆಸ್‌ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಇತರ ಹಿಂದುಳಿದ ವರ್ಗಗಳಲ್ಲಿರುವ (ಒಬಿಸಿ) ಅತಿಸಣ್ಣ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿಯನ್ನು ಸ್ಥಾಪಿಸಿ, ಅದಕ್ಕೆ ವರ್ಷಕ್ಕೆ ₹ 250 ಕೋಟಿಯಂತೆ ಐದು ವರ್ಷಗಳಲ್ಲಿ ₹ 1,250 ಕೋಟಿ ಅನುದಾನ ಒದಗಿಸಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಇತರ ಹಿಂದುಳಿದ ವರ್ಗಗಳಲ್ಲಿರುವ ಕೆಲವು ಸಮುದಾಯಗಳ ಜನಸಂಖ್ಯೆ ಅತಿ ಕಡಿಮೆ ಇದೆ. ಕುಲಕಸುಬನ್ನು ಕಳೆದುಕೊಂಡ ಈ ಸಮುದಾಯಗಳ ಜನರು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮೇಲಕ್ಕೆತ್ತುವುದಕ್ಕೆ ಈ ಮಂಡಳಿಯು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿದೆ. ಅಗತ್ಯ ಬಿದ್ದರೆ ಈ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನವನ್ನೂ ಒದಗಿಸಲಿದ್ದೇವೆ’ ಎಂದು ಅವರು ಭರವಸೆ ನೀಡಿದರು.

‘ಕರಾವಳಿ ಕರ್ನಾಟಕದ ಗಟ್ಟಿ, ಕುಲಾಲ, ಆಚಾರ್ಯ, ಕೋಟ, ಮಡಿವಾಳ, ದೇವಾಡಿಗ, ಭಂಡಾರಿ, ಗಾಣಿಗ, ಕೊಟ್ಟಾರಿ ಜೋಗಿ, ಥಿಯಾ, ಯಾದವ, ಶೆಟ್ಟಿಗಾರ್‌, ಶೇರಿಗಾರ್‌, ಕುಡುಬಿ, ಮುಂತಾದ ಜಾತಿಗಳ ಜನರಿಗೆ ಇದರ ಪ್ರಯೋಜನ ಸಿಗಲಿದೆ’ ಎಂದರು.

‘ಅಲ್ಪಸಂಖ್ಯಾತರ ಅಭಿವೃದ್ಧಿ ಒದಗಿಸುವ ಅನುದಾನದಲ್ಲಿ ಬ್ಯಾರಿ, ಜೈನ, ಕ್ರೈಸ್ತ ಮುಂತಾದ ಜನಸಂಖ್ಯೆ ತೀರಾ ಕಡಿಮೆ ಇರುವ ಸಮುದಾಯಗಳಿಗೆ ನಿರ್ದಿಷ್ಟ ಮೊತ್ತದ ಅನುದಾನ ಬಳಸುವುದನ್ನು ಕಡ್ಡಾಯಗೊಳಿಸುತ್ತೇವೆ’ ಎಂದು ಅವರು ಭರವಸೆ ನೀಡಿದರು.

‘ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಕುರಿತು ಪಕ್ಷದ ಮುಖಂಡ ದಿಗ್ವಿಜಯ್‌ ಸಿಂಗ್‌ ನೀಡಿರುವ ಹೇಳಿಕೆ ಅವರ ವೈಯಕ್ತಿಕ ನಿಲುವು. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ರಾಹುಲ್‌ ಗಾಂಧಿ ಅವರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ಸೇನೆಯ ಕಾರ್ಯಾಚರಣೆಗಳನ್ನು ಪಕ್ಷವು ಪ್ರಶ್ನೆ ಮಾಡುವುದಿಲ್ಲ. ಸೇನೆಯ ವಿಷಯವನ್ನು ರಾಜಕೀಯಕ್ಕೆ ಬಳಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಕ್ಕೂ ಮುನ್ನ ಸುರ್ಜೇವಾಲ ಹಾಗೂ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ವಿಧಾನಸಭಾ ಚುನಾವಣೆ ಪೂರ್ವ ತಯಾರಿ ಕುರಿತು ಪಕ್ಷದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ನಾಯಕರ ಜೊತೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT