ಶನಿವಾರ, ಮೇ 15, 2021
29 °C
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಬೇಸರ

ಕಡ್ಡಾಯ ಹಾಜರಿಗೆ ಆಕ್ಷೇಪ: ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 21ರಿಂದ ಮೇ 4ರವರೆಗೆ ಶಾಲೆ–ಕಾಲೇಜುಗಳಲ್ಲಿ ನೇರ ತರಗತಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದರೂ ಉಪನ್ಯಾಸಕರು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

‘ವಿದ್ಯಾರ್ಥಿಗಳಿಗೆ ನೇರ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದ್ದು, ಆನ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲು ಪ್ರೋತ್ಸಾಹಿಸಲಾಗಿದೆ. ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕ, ಸಿಬ್ಬಂದಿಗೆ ರಜೆಯಾಗಲಿ ಅಥವಾ ಶೇ 50ರಷ್ಟು ಮಾತ್ರ ಹಾಜರಾತಿಗೆ ಸೂಚಿಸಿಲ್ಲ. ಹೀಗಾಗಿ, ಎಲ್ಲ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ಇಲಾಖೆಯ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ‘ಕೋವಿಡ್‌ ಹೆಚ್ಚುತ್ತಿರುವುದರಿಂದ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಆದೇಶ ನೀಡಬೇಕು’ ಎಂದು ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

‘ಶಾಲೆ– ಕಾಲೇಜುಗಳಲ್ಲಿ ನೇರ ತರಗತಿ ಇಲ್ಲದಿರುವ ಅವಧಿಯಲ್ಲಿ ಉಪನ್ಯಾಸಕರಿಗೆ ಬೋಧನಾ ಕರ್ತವ್ಯ ಇಲ್ಲದಿರುವುದರಿಂದ, ಮನೆಯಿಂದಲೇ ಆನ್‌ಲೈನ್‌ ಮೂಲಕ ಬೋಧನಾ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಬೇಕು. ಇದರಿಂದ ಇಲಾಖೆಯ ಕಾರ್ಯಗಳಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಹಲವು ಉಪನ್ಯಾಸಕರಿಗೆ ಈಗಾಗಲೇ ಕೊರೊನಾ ಸೋಂಕು ತಗಲಿದೆ’ ಎಂದು ಮನವಿಯಲ್ಲಿ ಸಂಘ ಹೇಳಿದೆ.

‘ಬೆಂಗಳೂರು ನಗರದಲ್ಲಿ ಕೋವಿಡ್‌ ತೀವ್ರವಾಗಿದೆ. ಹೀಗಾಗಿ, ನಿತ್ಯದ ಕೆಲಸ ಕಾರ್ಯಗಳಿಗೆ ಶೇ 50ರಷ್ಟು ಸಿಬ್ಬಂದಿ ಹಾಜರಾಗುವಂತೆ ಸರ್ಕಾರ ಸೂಚಿಸಿದೆ. ವಿದ್ಯಾರ್ಥಿಗಳೇ ಇಲ್ಲದ ಕಾಲೇಜುಗಳಿಗೆ ಎಲ್ಲ ಉಪನ್ಯಾಸಕರು, ಹೋಗಿ ಮಾಡುವುದಾದರೂ ಏನು. ಆನ್‌ಲೈನ್‌ ತರಗತಿಗಳನ್ನು ಕಾಲೇಜಿ ನಿಂದಲೇ ಮಾಡಿ ಎಂದೇನೂ ಮಾರ್ಗಸೂಚಿಯಲ್ಲಿ ಇಲ್ಲ. ಮನೆಯಿಂದಲೇ ಆನ್‌ಲೈನ್‌ ಮಾಡಿದರೆ ತೊಂದರೆ ಏನಿದೆ’ ಎಂದು ಉಪನ್ಯಾಸಕರೊಬ್ಬರು ಪ್ರಶ್ನಿಸಿದರು.

‘ಸಾಧ್ಯವಾದಷ್ಟು ಓಡಾಟಗಳನ್ನು ನಿಯಂತ್ರಿಸುವಂತೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಕೂಡಾ ಹೇಳುತ್ತಿರುವ ಸಂದರ್ಭದಲ್ಲಿ, ಪದವಿಪೂರ್ವ ಶಿಕ್ಷಣ ಇಲಾಖೆಯ ನಡೆ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಜೀವದ ಜೊತೆ ಚೆಲ್ಲಾಟವಾಡಿದಂತೆ. ಅಲ್ಲದೆ, ಕಡ್ಡಾಯ ಹಾಜರಾಗುವಂತೆ ವ್ಯಾಟ್ಸ್ಆ್ಯಪ್‌ ಸಂದೇಶದ ಮೂಲಕ ಪ್ರಾಂಶುಪಾಲರಿಗೆ ಅವೈಜ್ಞಾನಿಕ ಆದೇಶ ಹೊರಡಿಸಿದೆ’ ಎಂದೂ ಅವರು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು